ಮಹಿಳೆಯರಿಂದ ಬಿರುಸಿನ ಪ್ರಚಾರ

ಶನಿವಾರ, ಏಪ್ರಿಲ್ 20, 2019
32 °C
ಮನವೊಲಿಕೆಗೆ ಕಾರ್ಯಕರ್ತೆಯರ ಪ್ರಯತ್ನ

ಮಹಿಳೆಯರಿಂದ ಬಿರುಸಿನ ಪ್ರಚಾರ

Published:
Updated:
Prajavani

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತೆಯರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಯ ಪರ ನಗರದಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದೇ 23ರಂದು ನಡೆಯುವ ಚುನಾವಣೆಯಲ್ಲಿ ಪುರುಷರಷ್ಟೇ ಮಹಿಳಾ ಮತದಾರರೂ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೆಯೇ ರಾಜಕೀಯ ಪಕ್ಷಗಳಲ್ಲಿಯೂ ಕಾರ್ಯಕರ್ತೆಯರೂ ಅಷ್ಟೇ ಅನಿವಾರ್ಯವಾಗಿದ್ದಾರೆ. ಮಹಿಳಾ ಮತದಾರರ ಮನ ಸೆಳೆಯಲು ವಿವಿಧ ಪಕ್ಷಗಳ ಕಾರ್ಯಕರ್ತೆಯರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟು ಪ್ರಚಾರ ಕೈಗೊಂಡಿದ್ದಾರೆ.

ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ ಕಾರ್ಯಕರ್ತೆಯರು ಅಭ್ಯರ್ಥಿಯ ಜತೆಗೆ ಹಾಗೂ ಪ್ರತ್ಯೇಕವಾಗಿ ಹೋಗಿ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಗರದಲ್ಲಿ ಮಹಿಳೆಯರ ಮನವೊಲಿಕೆಗೆ ಪಕ್ಷದ ಕಾರ್ಯಕರ್ತೆಯರು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತೆಯರು ಬೂತ್‌ಮಟ್ಟದಲ್ಲಿ ಮಹಿಳೆಯರನ್ನು ಭೇಟಿ ಮಾಡಿ ಮನೆಗಳಲ್ಲಿ, ಬಡಾವಣೆಗಳಲ್ಲಿ ಸಭೆ ನಡೆಸುವ ಮೂಲಕ ಮಹಿಳೆಯರಿಗೆ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಮತ್ತು ಮುಂದೆ ಬಿಜೆಪಿ ಸರ್ಕಾರ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಕೇಂದ್ರದ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ, ಈವರೆಗೂ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಲಾಗಿರುವ ಯೋಜನೆಗಳು ಮತ್ತು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗಾಗಿ ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂಬುದರ ಬಗ್ಗೆ ಮಹಿಳೆಯರಿಗೆ ತಿಳಿಸುವ ಮೂಲಕ ಮತ ಕೇಳುತ್ತಿದ್ದಾರೆ.

ಇನ್ನೂ ರಾಜ್ಯ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಆಡಳಿತದ ಸಾಧನೆಗಳನ್ನು ಮತ್ತು ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿಗೊಳಿಸುವ ಯೋಜನೆಗಳ ಬಗ್ಗೆ ಹಾಗೂ ಕೇಂದ್ರದಲ್ಲಿ ಹತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು, ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಿಳಿಸುತ್ತಿದ್ದು, ಇವುಗಳ ಜೊತೆಗೆ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮಹಿಳೆಯರಿಗೆ ತಿಳಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ಮೂಲಕ ಪ್ರಚಾರದಲ್ಲಿಯೂ ಪೈಪೋಟಿ ಇದೆ.

ಬಿಜೆಪಿ ಮಹಿಳಾ ಘಟಕವು ಮಹಿಳಾ ಸಮಾವೇಶಗಳಲ್ಲಿ, ಬಹಿರಂಗ ಸಭೆಗಳಲ್ಲಿ ಪ್ರಮುಖ ಮಹಿಳಾ ಮುಖಂಡರನ್ನು ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರೆಸಿ ಆ ಕಾರ್ಯಕ್ರಮಗಳಿಗೆ ಮಹಿಳಾ ಮತದಾರರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ಅವರನ್ನು ಸೆಳೆಯಲು ಯೋಜನೆ ಯತ್ನಿಸುತ್ತಿದ್ದರೆ ಇತ್ತ ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿ ಪರ ಗೀತಾ ಶಿವರಾಜ್‌ ಕುಮಾರ್ ಪ್ರಚಾರ ನಡೆಸುತ್ತಿದ್ದಾರೆ.

ಬಿಸಿಲನ್ನೂ ಲೆಕ್ಕಿಸದೆ ಕಾರ್ಯಕರ್ತೆಯರು ಮತ ಯಾಚನೆ ನಡೆಸಿದ್ದಾರೆ. ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಪ್ರಚಾರ ಮಾಡುತ್ತಿದ್ದಾರೆ. 10ರಿಂದ 20 ಮಹಿಳೆಯರ ಒಂದೊಂದು ತಂಡ ಬೂತ್‌ ಮಟ್ಟದಲ್ಲಿ, ಬಡಾವಣೆಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !