ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಗೆ ₹125 ಕೋಟಿ ಅನುದಾನ

ಸಚಿವರಿಂದ ಗೃಹಭಾಗ್ಯ ಯೋಜನೆ ಮನೆಗಳ ಪರಿಶೀಲನೆ
Last Updated 3 ಜುಲೈ 2019, 15:53 IST
ಅಕ್ಷರ ಗಾತ್ರ

ವಿಜಯಪುರ: ‘ನಗರೋತ್ಥಾನ ಯೋಜನೆಯಡಿ ವಿಜಯಪುರ ಮಹಾನಗರ ಪಾಲಿಕೆಗೆ ₹125 ಕೋಟಿ ವಿಶೇಷ ಅನುದಾನ ಮಂಜೂರು ಮಾಡಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರ ಹೊರಭಾಗದ ಬರಟಗಿ ಎಲ್.ಟಿ.ಯಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ 56 ಮನೆಗಳನ್ನು ಪರಿಶೀಲಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸರ್ಕಾರದ ಮಾರ್ಗಸೂಚಿ ಅನ್ವಯ ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈ ಅನುದಾನವನ್ನು ನೀಡಲಾಗುತ್ತಿದೆ. ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ಯೋಜನೆಗಳನ್ನು ಯೋಜನಾಬದ್ಧವಾಗಿ ಹಾಗೂ ವೈಜ್ಞಾನಿಕ ರೀತಿಯಲ್ಲಿ ಹಮ್ಮಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ’ ಎಂದು ತಿಳಿಸಿದರು.

‘ಪಾಲಿಕೆ ಅಧಿಕಾರಿಗಳು ತೆರಿಗೆಯನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಬೇಕು. ತೆರಿಗೆ ಹೆಚ್ಚಳವಾದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಶೇ 100ರಷ್ಟು ತೆರಿಗೆ ವಸೂಲಿ ಮಾಡಿದರೆ ಅಂತಹ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಅನುದಾನ ನೀಡಲಾಗುವುದು’ ಎಂದರು.

‘ವಿದ್ಯುತ್ ಹಾಗೂ ನಲ್ಲಿಗಳ ಜೋಡಣೆಗೆ ಆದ್ಯತೆ ನೀಡಬೇಕು. ಮೂರನೇ ಪಾರ್ಟಿಯಿಂದ ಪರಿಶೀಲನೆ ನಡೆಸಿ, ಗುಣಮಟ್ಟತೆ ಕಾಯ್ದುಕೊಳ್ಳಬೇಕು. ಬರಟಗಿ ಎಲ್.ಟಿ.ಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ 56 ಮನೆಗಳನ್ನು ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗುತ್ತಿದ್ದು, ಪ್ರತಿ ಮನೆಗೆ ₹7.5 ಲಕ್ಷ ಅನುದಾನ ವೆಚ್ಚ ಮಾಡಲಾಗುತ್ತಿದೆ’ ಎಂದು ಹೇಳಿದರು.

ಇದಾದ ಬಳಿಕ ಟೀಚರ್ಸ್ ಕಾಲೊನಿಯಲ್ಲಿ ₹1.6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನ ಹಾಗೂ ಓಪನ್ ಜಿಮ್ ಪರಿಕರಗಳನ್ನು ಪರಿಶೀಲಿಸಿದರು. ಉದ್ಯಾನ ವ್ಯಾಪ್ತಿಯಲ್ಲಿ ಫುಡ್ ಕೋರ್ಟ್ ಸ್ಥಾಪನೆ ಸೇರಿದಂತೆ ವಿವಿಧ ಸಂಕೀರ್ಣಗಳ ಸ್ಥಾಪನೆಗಳಿಗೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕರ ವಸೂಲಿಗೆ ಸೂಚನೆ: ‘ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕರ ವಸೂಲಾತಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ನಗರಾಭಿವೃದ್ಧಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜನನ-ಮರಣ ನೋಂದಣಿ, ಟ್ರೇಡ್ ಲೈಸನ್ಸ್‌, ಕಟ್ಟಡ ಪರವಾನಗಿಗೆ ಸಂಬಂಧಿಸಿದಂತೆ ಆನ್‌ಲೈನ್‌ ಅರ್ಜಿ ಸ್ವೀಕರಿಸಬೇಕು. ನಗರದ ಗಾಂಧಿ ವೃತ್ತದಿಂದ ಗೋದಾವರಿ ಹೋಟೆಲ್‌ವರೆಗೆ ಮಾಸ್ಟರ್ ಪ್ಲಾನ್ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿ ದೇವಾನಂದ ಚವ್ಹಾಣ, ಶಾಸಕ ಅರುಣ ಶಹಾಪುರ, ಮೇಯರ್ ಶ್ರೀದೇವಿ ಲೋಗಾಂವಿ, ಉಪಮೇಯರ್ ಗೋಪಾಲ ಘಟಕಾಂಬಳೆ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪಾಲಿಕೆ ಆಯುಕ್ತ ಡಾ.ಔದ್ರಾಮ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೀರೇಶಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT