ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಹಕರ ಮನೆ ಬಾಗಿಲಿಗೆ ಸೌಲಭ್ಯ’

ಅಬ್ಬನಕುಪ್ಪೆ ಗ್ರಾಮದಲ್ಲಿ ಪಡಿತರ ವಿತರಣೆ ಕೇಂದ್ರ ಉದ್ಘಾಟನೆ
Last Updated 14 ಡಿಸೆಂಬರ್ 2018, 12:45 IST
ಅಕ್ಷರ ಗಾತ್ರ

ಬಿಡದಿ: ‘ಪಡಿತರ ಆಹಾರ ಪದಾರ್ಥಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಬಿಡದಿ ರೈತ ಸೇವಾ ಸಹಕಾರ ಸಂಘವು ಕಾರ್ಯೋನ್ಮುಖವಾಗಿದೆ’ ಎಂದು ಮುಖಂಡ ಎಚ್.ಎಲ್.ಚಂದ್ರು ಹೇಳಿದರು.

ಅಬ್ಬನಕುಪ್ಪೆ ಗ್ರಾಮದಲ್ಲಿ ₹4.65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಿಡದಿ ರೈತರ ಸೇವಾ ಸಹಕಾರ ಸಂಘದ ಗೋದಾಮು ಮತ್ತು ಪಡಿತರ ವಿತರಣೆ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಟ್ಟಮಡು ಗ್ರಾಮದಲ್ಲಿರುವ ಸೊಸೈಟಿಯಿಂದ ಅಬ್ಬನಕುಪ್ಪೆ ಗ್ರಾಮದ ಪಡಿತರದಾರರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ ವ್ಯವಸ್ಥೆಯಿತ್ತು, ಸುಮಾರು 2 ಕಿ.ಮೀನಷ್ಟು ದೂರದಿಂದ ಗ್ರಾಹಕರು ಪಡಿತರ ಹೊತ್ತು ತರಬೇಕಿತ್ತು. ಅಬ್ಬನಕುಪ್ಪೆ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ಥಳೀಯವಾಗಿ ಬಾಡಿಗೆಗೆ ಕಟ್ಟಡ ಪಡೆಯಲಾಗಿತ್ತು. ಇದೀಗ ಇಟ್ಟಮಡು ಗ್ರಾಮ ಪಂಚಾಯಿತಿಯಿಂದ ಮಂಜೂರಾಗಿದ್ದ 30X26 ಅಳತೆಯ ನಿವೇಶನದಲ್ಲಿ ಕಟ್ಟಡವನ್ನು ನಿರ್ಮಿಸಿ ಶಾಖಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಿಸಲು ಶ್ರಮಿಸಿದ ಬೆಟ್ಟಸ್ವಾಮಿ, ಧನಂಜಯ, ರಮೇಶ್ ಮತ್ತು ಎ.ಜಿ.ಸುರೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದರು.

ಬಿಡದಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಸಂಘವು ಈಗ 7 ಉಪ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಸರ್ಕಾರದ ಆಹಾರ ಪದಾರ್ಥ ಸೌಲಭ್ಯವನ್ನು ಸಮರ್ಪಕವಾಗಿ ತಲುಪಿಸುತ್ತಿದೆ, ಬಿಡದಿ, ಇಂದಿರಾನಗರ, ಇಟ್ಟಮಡು ಮತ್ತು ಅಬ್ಬನಕುಪ್ಪೆಗಳಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿದೆ. ಛತ್ರ(ಬಾರೆದೊಡ್ಡಿ), ವೃಷಭಾವತಿಪುರ ಹಾಗೂ ಅವರಗೆರೆ ಗ್ರಾಮಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ ಎಂದರು.

ಗ್ರಾಹಕರಿಗೆ ಸರ್ವರ್ ಮೊದಲಾದ ಸಮಸ್ಯೆಗಳಿಂದ ಪಡಿತರ ಆಹಾರ ಪದಾರ್ಥಗಳಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗದಂತೆ ಪ್ರತ್ಯೇಕ ಶಾಖೆಯನ್ನು ತೆರೆಯಲಾಗುತ್ತಿದೆ. ಬಾಡಿಗೆ ಕಟ್ಟಡಗಳಲ್ಲಿ ನಿರ್ವಹಣೆ ಮಾಡುತ್ತಿರುವ ಸ್ಥಳಗಳಲ್ಲಿ ಪುರಸಭೆಯು ಸಿ.ಎ.ನಿವೇಶನಗಳನ್ನು ಒದಗಿಸಿಕೊಟ್ಟರೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗುವುದು, ಒಟ್ಟಾರೆ ಎಲ್ಲಾ ಕೇಂದ್ರಗಳಲ್ಲಿ ಸುಮಾರು 3000ಕ್ಕೂ ಹೆಚ್ಚು ಪಡಿತರದಾರರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.

ಆರೋಪ ನಿರಾಧಾರ: ‘ಅಬ್ಬನಕುಪ್ಪೆ ಶಾಖಾ ಕೇಂದ್ರ ಕಟ್ಟಡ ನಿರ್ಮಾಣದ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲವರು ಮಾಡಿರುವ ಆರೋಪಗಳು ನಿರಾಧಾರ, ಕೊಟೇಷನ್ ಕರೆದು ನಿಯಮಾನುಸಾರವೇ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗಿದೆ, ಲೋಕೋಪಯೋಗಿ ಇಲಾಖೆಯು ₹5.5 ಲಕ್ಷಕ್ಕೆ ಅಂದಾಜು ಪಟ್ಟಿ ನೀಡಿದರೂ ₹4.65 ಲಕ್ಷಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಗುತ್ತಿಗೆದಾರನಿಂದ ಹೆಚ್ಚೂವರಿ ಕೆಲಸವನ್ನೂ ಮಾಡಿಸಲಾಗಿದೆ’ ಎಂದು ಚಂದ್ರು ತಿಳಿಸಿದರು.

ಬಿಡದಿ ಪುರಸಭೆ ಉಪಾಧ್ಯಕ್ಷೆ ಲಕ್ಷ್ಮಿದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಉಮೇಶ್, ಸದಸ್ಯರಾದ ಸಿ.ಲೋಕೇಶ್, ರಮೇಶ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ಅಬ್ಬನಕುಪ್ಪೆ ರಮೇಶ್, ಸುರೇಂದ್ರ, ಚಲುವರಾಯಸ್ವಾಮಿ, ಸಂಘದ ನಿರ್ದೇಶಕ ಆರ್.ಮಲ್ಲೇಶ್, ಮುಖಂಡರಾದ ಸೋಮೇಗೌಡ, ನರಸಿಂಹಯ್ಯ, ಶೇಷಪ್ಪ, ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸೀನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT