ಬುಧವಾರ, ಸೆಪ್ಟೆಂಬರ್ 18, 2019
25 °C
ಎಲ್ಲ ರೀತಿಯ ಹೊಸ ವಾಹನಗಳ ಖರೀದಿಗೆ ಗ್ರಾಹಕರ ಹಿಂದೇಟು

ನೋಂದಣಿ ಕುಸಿತ; ಆದಾಯವೂ ಖೋತಾ!

Published:
Updated:

ಶಿವಮೊಗ್ಗ: ಹೊಸ ವಾಹನಗಳ ಖರೀದಿಗೆ ಗ್ರಾಹಕರು ಉತ್ಸಾಹ ತೋರದ ಪರಿಣಾಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ ಗಣನೀಯವಾಗಿ ಕ್ಷೀಣಿಸಿದೆ.

ದೇಶದ ಆರ್ಥಿಕ ಹಿಂಜರಿತ, ಬಿಎಸ್‌ 4 ಎಂಜಿನ್‌ ಹೊಂದಿರುವ ವಾಹನಗಳ ನಿಷೇಧ, ಎಲೆಕ್ಟ್ರಾನಿಕ್ಸ್‌ ವಾಹನಗಳಿಗೆ ಕೇಂದ್ರದ ಉತ್ತೇಜನ ಮತ್ತಿತರ ಕಾರಣಗಳಿಂದ ವಾಹನಗಳ ಖರೀದಿ, ನೋಂದಣಿ ಗಣನೀಯವಾಗಿ ಕುಸಿಯುತ್ತಿದೆ. ಸರ್ಕಾರದ ಬೊಕ್ಕಸಕ್ಕೂ ಹಣದ ಹರಿವು ಕಡಿಮೆಯಾಗಿದೆ. ಶಿವಮೊಗ್ಗ ಆರ್‌ಟಿಒ ಕಚೇರಿಯಲ್ಲೂ ಹೊಸ ವಾಹನಗಳ ನೋಂದಣಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.

2017–18ರಲ್ಲಿ ವಾರ್ಷಿಕ ₨ 79.50 ಕೋಟಿ ನೋಂದಣಿ ಶುಲ್ಕ ಸಂಗ್ರಹದ ಗುರಿ ಮೀರಿ ನೀಡಲಾಗಿತ್ತು. ಆ ವರ್ಷ ಸಂಗ್ರಹವಾದ ಶುಲ್ಕ ₨ 85.54 ಕೋಟಿ. ಅಂದರೆ 6.04 ಕೋಟಿ ಹೆಚ್ಚುವರಿ ಸಂಗ್ರಹವಾಗಿತ್ತು. 2018–19ನೇ ಸಾಲಿನಲ್ಲಿ ನಿಗದಿಯಾಗಿದ್ದ ವಾರ್ಷಿಕ ಗುರಿ ₨ 88.88 ಕೋಟಿ. ಸಾಧನೆ ಶೇ 96.35ರಷ್ಟಿತ್ತು. 2019–20ನೇ ಸಾಲಿಗೆ ₨ 90.90 ಕೋಟಿ ನಿಗದಿಯಾಗಿತ್ತು. ಆಗಷ್ಟ್ ಅಂತ್ಯದವರೆಗೆ ₨ 33.30 ಕೋಟಿ ಸಂಗ್ರಹವಾಗಿದೆ. ಮಾಸಿಕ ₨ 7.57 ಕೋಟಿ ಸಂಗ್ರಹವಾಗಬೇಕಿತ್ತು. ಏಪ್ರಿಲ್ನಲ್ಲಿ ₨ 7.17 ಕೋಟಿ, ಮೇನಲ್ಲಿ ₨ 8.20 ಕೋಟಿ ಗುರು ತಲುಪಲಾಗಿತ್ತು. ಆರ್ಥಿಕ ಹಿಂಜರಿತ ಆರಂಭವಾದ ನಂತರ ಜೂನ್ನಲ್ಲಿ ₨ 5.94 ಕೋಟಿ, ಜುಲೈನಲ್ಲಿ ₨ 6.20 ಕೋಟಿ, ಆಗಸ್ಟ್ನಲ್ಲಿ ₨ 5.78 ಕೋಟಿ ಸಂಗ್ರಹವಾಗಿದೆ. ಆಗಸ್ಟ್‌ ಎರಡನೇ ವಾರದಿಂದಲೇ ಆದಾಯ ಸಂಗ್ರಹ ಗಣನೀಯವಾಗಿ ಕುಸಿದಿದೆ.

2017–18ನೇ ಸಾಲಿನಲ್ಲಿ ಶಿವಮೊಗ್ಗ ಆರ್ಟಿಒದಲ್ಲಿ 27,573 ವಾಹನಗಳ ನೋಂದಣಿಯಾಗಿತ್ತು. 2018–19ರಲ್ಲಿ 26,875 ಇತ್ತು. ಪ್ರಸಕ್ತ ವರ್ಷ 9,753 ವಾಹನಗಳು ನೋಂದಣಿಯಾಗಿವೆ. 2017–18ರಲ್ಲಿ 19,474 ದ್ವಿಚಕ್ರ, 3,403 ಕಾರುಗಳು, 2018-19ರಲ್ಲಿ 19,958 ದ್ವಿ ಚಕ್ರ ಹಾಗೂ 3,356 ಕಾರುಗಳು ನೋಂದಣಿಯಾಗಿದ್ದವು. ಪ್ರಸ್ತುತ ವರ್ಷ 7,146 ದ್ವಿಚಕ್ರ ವಾಹನಗಳು ಮತ್ತು 1,035 ಕಾರುಗಳು ನೋಂದಣಿಯಾಗಿವೆ.

‘ವಾಹನಗಳ ತಯಾರಿಕೆ, ಮಾರಾಟ ನಂಬಿಕೊಂಡು ಹಲವು ಕಾರ್ಮಿಕ ಕುಟುಂಬಗಳು ಜೀವನ ನಡೆಸುತ್ತಿವೆ. ವಾಹನಗಳ ಮಾರಾಟ ಕುಸಿದ ಪರಿಣಾಮ ನೋಂದಣಿಯೂ ಕಡಿಮೆಯಾಗಿದೆ. ಇದರಿಂದ ಒಂದು ಕಡೆ ಜನರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಆರ್‌ಟಿಒ ಕಚೇರಿಯಲ್ಲೂ ಕೆಲಸಗಳು ಕಡಿಮೆಯಾಗಿವೆ. ಮತ್ತೊಂದು ಕಡೆ ಸರ್ಕಾರಗಳ ಆದಾಯ ಸಂಗ್ರಹಕ್ಕೂ ಹೊಡೆತ ಬಿದ್ದಿದೆ. ಇದೇ ಸ್ಥಿತಿ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಾಗಬಹುದು’ ಎನ್ನುತ್ತಾರೆ ಆರ್‌ಟಿಒ ಕಚೇರಿ ಸಿಬ್ಬಂದಿ.

ವಾಹನಗಳು ಪ್ರಸ್ತುತ ಹೊಂದಿರುವ ಬಿಎಸ್ 4 ತಂತ್ರಜ್ಞಾನದ ಎಂಜಿನ್‌ ಬದಲು ಬಿಎಸ್ 6 ತಂತ್ರಜ್ಞಾನದ ವಾಹನಗಳ ತಯಾರಿಕೆಗೆ ಸಿದ್ಧತೆ ನಡೆದಿದೆ. ಹಾಗಾಗಿ, ಹಳೆಯ ವಾಹನಗಳ ಮಾರಾಟ, ನೋಂದಣಿಯಲ್ಲಿ ಇಳಿಕೆಯಾಗಿದೆ. ಆದಾಯ ಸಂಗ್ರಹ ಗುರಿ ತಲುಪಲು ನಿಯಮ ಉಲ್ಲಂಘಿಸುವ ವಾಹನಗಳಿಂದ ಕಟ್ಟುನಿಟ್ಟಿನ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ವರ್ಣೇಕರ್.

ಕೇಂದ್ರ ಸರ್ಕಾರವು ಡೀಸೆಲ್, ಪೆಟ್ರೋಲ್ ವಾಹನಗಳನ್ನು ನಿಷೇಧಿಸುತ್ತದೆ. ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂಬ ವದಂತಿ ದಿಢೀರ್‌ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಡೀಸೆಲ್, ಪೆಟ್ರೋಲ್ ವಾಹನಗಳನ್ನು ನಿಷೇಧಿಸುವುದಿಲ್ಲ. ಪರವಾನಗಿ ರದ್ದುಪಡಿಸುವುದಿಲ್ಲ. ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆಯ ನಂತರವೂ ವಾಹನಗಳ ಖರೀದಿಗೆ ಗ್ರಾಹಕರು ಒಲವು ತೋರುತ್ತಿಲ್ಲ.

Post Comments (+)