ಸಾಠ್‌ ಖಬರ್‌ ರಕ್ಷಣೆಗೆ ಮುನ್ನುಡಿ..!

7
ಆದಿಲ್‌ಶಾಹಿ ಸುಲ್ತಾನರ ಸೇನಾಧಿಪತಿ ಅಫ್ಜಲ್‌ಖಾನ್‌ನ ಮಡದಿಯರ ಸಮಾಧಿ ಸ್ಥಳ

ಸಾಠ್‌ ಖಬರ್‌ ರಕ್ಷಣೆಗೆ ಮುನ್ನುಡಿ..!

Published:
Updated:
Deccan Herald

ಇಬ್ಬದಿಯೂ ಮುಳ್ಳು ಕಂಟಿಯ ಬೇಲಿ. ದ್ವಿಚಕ್ರ ವಾಹನ ಚಲಿಸಲೂ ಕಷ್ಟಸಾಧ್ಯವಾಗಿರುವ ಕಿಷ್ಕಿಂಧೆಯಂಥ ರಸ್ತೆ. ಈ ರಸ್ತೆ ಬದಿಯೇ ಸಾಲು ಸಾಲು ಮಲ ವಿಸರ್ಜನೆ...

ಇದು ಆದಿಲ್‌ಶಾಹಿ ಸುಲ್ತಾನ ಎರಡನೇ ಆದಿಲ್‌ಶಾಹಿಯ ಸೇನಾಧಿಪತಿಯಾಗಿ ಖ್ಯಾತಿಯಾಗಿದ್ದ ಅಫ್ಜಲ್‌ಖಾನನ ಮಡದಿಯರ ಗೋರಿಗಳಿರುವ ಐತಿಹಾಸಿಕ ಸಂರಕ್ಷಿತ ಸ್ಮಾರಕ ‘ಸಾಠ್‌ ಖಬರ್‌’ಗೆ ತೆರಳುವ ಹಾದಿಯ ಚಿತ್ರಣ.

ಘೋರ ಇತಿಹಾಸವುಳ್ಳ ‘ಸಾಠ್‌ ಖಬರ್‌’ನ ಚಿತ್ರಣವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಯುವ ದೇಶಿ–ವಿದೇಶಿ ಪ್ರವಾಸಿಗರು ಇದೀಗ ಇಲ್ಲಿಗೆ ಭೇಟಿ ಕೊಡಲು ಹಿಂಜರಿಯುವಂತಹ ವಾತಾವರಣ ಸೃಷ್ಟಿಯಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಎಲ್ಲಾ ನಿಯಮಗಳು ಇಲ್ಲಿ ಉಲ್ಲಂಘನೆಯಾಗಿವೆ.

ಹೆಸರಿಗೊಂದು ಸಂರಕ್ಷಿತ ಸ್ಮಾರಕ ಎಂಬ ನಾಮಫಲಕ ಹೊರತು ಪಡಿಸಿದರೇ; ಇನ್ಯಾವ ರಕ್ಷಣೆಯೂ ಈ ಸ್ಮಾರಕಕ್ಕೆ ಇಲ್ಲವಾಗಿದೆ. ಇದರ ಜತೆಗೆ ಸಣ್ಣ ಮಾಹಿತಿಯೂ ಇಲ್ಲಿ ದೊರಕದಾಗಿದೆ.

ಈಚೆಗಿನ ವರ್ಷಗಳಲ್ಲಿ ಪ್ರವಾಸಿಗರ ಸ್ಮೃತಿ ಪಟಲದಿಂದ ಕಣ್ಮರೆಯಾಗುತ್ತಿದ್ದ ‘ಸಾಠ್‌ ಖಬರ್‌’ ಐತಿಹಾಸಿಕ ಸಂರಕ್ಷಿತ ಸ್ಮಾರಕದ ಅಭಿವೃದ್ಧಿಗೆ ಇದೀಗ ಎಎಸ್‌ಐನ ಸಂಬಂಧಿಸಿದ ವಿಭಾಗ ಕಣ್ತೆರೆದಿದೆ. ಇದು ಪ್ರವಾಸೋದ್ಯಮ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.

1659ರಲ್ಲಿ ನಿರ್ಮಾಣ:

‘ಸಾಠ್‌ ಖಬರ್‌’ ನಿರ್ಮಾಣದ ಹಿಂದೆ ದಾರುಣ, ಮೈಮನ ರೋಮಾಂಚನಗೊಳಿಸುವ ಇತಿಹಾಸವಿದೆ. ಎರಡನೇ ಆದಿಲ್‌ಶಾಹಿಯ ಸೇನಾಧಿಪತಿಯಾಗಿದ್ದ ಅಫ್ಜಲ್‌ಖಾನ್‌ ಛತ್ರಪತಿ ಶಿವಾಜಿ ಮಹಾರಾಜನ ವಿರುದ್ಧ 1659ರಲ್ಲಿ ಯುದ್ಧಕ್ಕೆ ಹೊರಡುವ ಮುನ್ನಾ ಜ್ಯೋತಿಷ್ಯ ಕೇಳುತ್ತಾನೆ.

ಜ್ಯೋತಿಷಿ ಯುದ್ಧದಲ್ಲಿ ನೀವು ಬದುಕುಳಿಯುವುದಿಲ್ಲ ಎಂದು ಭವಿಷ್ಯವಾಣಿ ನುಡಿದಿದ್ದರಿಂದ, ಅಫ್ಜಲ್‌ಖಾನ್‌ ಚಿಂತಿತನಾಗುತ್ತಾನೆ. ನನ್ನ ಸಾವಿನ ಬಳಿಕ ಮಡದಿಯರು ಮತ್ತೊಬ್ಬರನ್ನು ವರಿಸಬಾರದು ಅಥವಾ ಅನ್ಯರ ಪಾಲಾಗಬಾರದು ಎಂದು ಆಲೋಚಿಸಿ, ಎಲ್ಲರನ್ನೂ ಸಾಮೂಹಿಕವಾಗಿ ಕೊಲ್ಲಲು ಯೋಜಿಸುತ್ತಾನೆ.

ಅದರಂತೆ ರಾಜಧಾನಿಯ ಹೊರವಲಯದಲ್ಲಿ ಎಲ್ಲ ಮಡದಿಯರಿಗೂ ಗೋರಿ ನಿರ್ಮಿಸುತ್ತಾನೆ. ಅದರ ಹಿಂದೆಯೇ ಬಾವಿಯೊಳಗೆ ಮುಳುಗಿಸಿ ಕೊಲ್ಲುವ ಸಂಚು ಹೂಡುತ್ತಾನೆ. 63 ಮಡದಿಯರನ್ನು ಬಾವಿಯಲ್ಲಿ ಮುಳುಗಿಸಿ ಕೊಂದು ಗೋರಿಯಲ್ಲಿ ಸಮಾಧಿ ಮಾಡುತ್ತಾನೆ. ಇದು ತಿಳಿದ ಇಬ್ಬರು ನಾಪತ್ತೆಯಾಗುತ್ತಾರೆ.

ಅದರಲ್ಲಿ ಒಬ್ಬಾಕೆಯನ್ನು ಬೆನ್ನಟ್ಟಿ ಕೊಲ್ಲುತ್ತಾರೆ. ಆಕೆಯ ಸಮಾಧಿ ಈಗಿನ ವಿಜಯಪುರ ಜಿಲ್ಲಾ ಆಸ್ಪತ್ರೆ ಬಳಿಯಿದೆ. ಇನ್ನೊಬ್ಬಳು ಎಲ್ಲಿ ಹೋದಳು ಎಂಬ ಮಾಹಿತಿ ಲಭ್ಯವಿಲ್ಲದಿದ್ದರೇ; ಮತ್ತೊಬ್ಬಾಕೆಯ ಲೆಕ್ಕವೇ ಸಿಕ್ಕಿಲ್ಲ ಎಂಬುದು ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತದೆ’ ಎಂದು ಆದಿಲ್‌ಶಾಹಿ ಅರಸರ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿರುವ ರಾಜು ಬಿಜಾಪುರ ಮಾಹಿತಿ ನೀಡಿದರು.

ಸಂರಕ್ಷಣೆಯಿಲ್ಲ..:

ಘೋರ ಇತಿಹಾಸ ಹೊಂದಿರುವ ಸಾಠ್‌ ಖಬರ್ ನೆಲದಿಂದ ಮೂರ್ನಾಲ್ಕು ಅಡಿ ಎತ್ತರದಲ್ಲಿದೆ. ವಿಶಾಲವಾದ ಜಾಗದಲ್ಲಿ 63 ಮಹಿಳೆಯರ ಸಮಾಧಿಯಿದೆ. ಸಂರಕ್ಷಣೆ ಇಲ್ಲದಿರುವುದರಿಂದ ಈಗಾಗಲೇ ಕೆಲ ಸಮಾಧಿ ಶಿಥಿಲಾವಸ್ಥೆ ತಲುಪಿರುವುದು ವಿಷಾದನೀಯ.

ಸಮಾಧಿಗಳ ಕೊನೆಯಲ್ಲಿ ಕಮಾನುಗಳ ಕಟ್ಟಡವಿದೆ. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಇದರ ಹಿಂಬದಿ ಪುರಾತನ ಬಾವಿಯಿದೆ. ಇದರ ಸುತ್ತಲೂ ಕಟ್ಟಡ, ಕಮಾನುಗಳು ಇದ್ದು, ಇದೀಗ ಒಂದೊಂದೇ ನೆಲಕ್ಕುರುಳುತ್ತಿವೆ.

ಸಾಠ್‌ ಖಬರ್‌ ಮಗ್ಗುಲಲ್ಲೇ ರೈತರ ಭೂಮಿಯಿದೆ. ಪ್ರವೇಶ ದ್ವಾರದ ಸುತ್ತಲೂ ಮುಳ್ಳುಕಂಟಿ ಬೆಳೆದಿವೆ. ಐತಿಹಾಸಿಕ ಸಂರಕ್ಷಿತ ಸ್ಮಾರಕ ಎಂಬ ಕುರುಹುವಿನ ಬದಲು ಶಿಥಿಲಾವಸ್ಥೆಯ ಕಟ್ಟಡ ಎಂಬಂತೆ ಭಾಸವಾಗುತ್ತಿದೆ. ಇತಿಹಾಸ ಮಣ್ಣಲ್ಲಿ ಮಣ್ಣಾಗುತ್ತಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !