ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆ ಹೋದವರು ಮತದಾನಕ್ಕೆ ಬಂದರು

ಮಂಗನ ಕಾಯಿಲೆ ಸಂಕಟ ಮರೆತು ಹಕ್ಕು ಚಲಾವಣೆ
Last Updated 23 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಸಾಗರ: ಮಂಗನ ಕಾಯಿಲೆಯಿಂದ ತತ್ತರಿಸಿರುವ ತಾಲ್ಲೂಕಿನ ಅರಲಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಬಹುದು ಎಂಬ ಆತಂಕವಿತ್ತು. ಆದರೆ ಈ ಭಾಗದ ಗ್ರಾಮಸ್ಥರು ಮಂಗನ ಕಾಯಿಲೆಯ ಸಂಕಟ ಮರೆತು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮಂಡವಳ್ಳಿ ಮತಗಟ್ಟೆ ವ್ಯಾಪ್ತಿಗೆ ಬರುವ ಅರಲಗೋಡು, ಐತುಮನೆ, ಮಂಡವಳ್ಳಿ, ತುಂಬ್ರಿ, ಕಸ ಗುಪ್ಪೆ, ಮರಬಿಡಿ, ಜೇಗಳ, ವಾಟೇಮಕ್ಕಿ, ಸಂಪ, ಇಟ್ಟಿಗೆ, ನಂದೋಡಿ ಮತಗಟ್ಟೆ ವ್ಯಾಪ್ತಿಗೆ ಬರುವ ಬಣ್ಣುಮನೆ, ಕಂಚಿಕೈ, ಯಲಕೋಡು, ದೊಂಬೆಕೈ, ಮರಾಠಿ ಕೇರಿ, ಕಣಗಲಗಟ್ಟ, ಕೊಪ್ಪರಿಗೆ, ಯಡ್ಡಳ್ಳಿ ಮತಗಟ್ಟೆ ವ್ಯಾಪ್ತಿಗೆ ಬರುವ ಬಿಳಿಗಲ್ಲೂರು, ಕಾಳಮಂಜಿ, ಮಳಲಿ, ಮರಳುಕೊಡೆ, ಕರುಮನೆ ಗ್ರಾಮಗಳಲ್ಲಿ ಇಂದಿಗೂ ಮಂಗನ ಕಾಯಿಲೆ ಆತಂಕ ತೀವ್ರವಾಗಿ ಮನೆ ಮಾಡಿದೆ.

ಈಗಾಗಲೇ ಈ ಭಾಗದ 22 ಮಂದಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. 400ಕ್ಕೂ ಹೆಚ್ಚು ಜನರಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದು, ಮಣಿಪಾಲಕ್ಕೆ ಹೋಗಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಕೆಲವರು 15 ದಿನಕ್ಕೂ ಹೆಚ್ಚು ಕಾಲ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿ ಸಾವಿನ ಮನೆಯ ಕದ ತಟ್ಟಿ ಪುನರ್ ಜನ್ಮ ಪಡೆದವರಂತೆ ಬದುಕಿ ಬಂದಿದ್ದಾರೆ.

ಮಂಗನ ಕಾಯಿಲೆಯಿಂದ ಆತಂಕಗೊಂಡಿರುವ ಹಲವು ಕುಟುಂಬಗಳು ಸಾಗರ, ಬೆಂಗಳೂರು ಸೇರಿ ತಮ್ಮ ಸಂಬಂಧಿಕರು, ಸ್ನೇಹಿತರು ಇರುವ ಸ್ಥಳಗಳಿಗೆ ಗುಳೆ ಹೋಗಿದ್ದಾರೆ.

ಕಾಯಿಲೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಈವರೆಗೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಗ್ರಾಮಸ್ಥರಲ್ಲಿ ಆಕ್ರೋಶ ಮಡುಗಟ್ಟಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೆ ಭರಿಸಿರುವ ಬಗ್ಗೆ ಕೊಂಚ ಸಮಾಧಾನವಿದೆ. ಹಾಗೆಂದು ಇಲ್ಲಿನ ಗ್ರಾಮಸ್ಥರು ಯಾವತ್ತೂ ಮತದಾನದ ಬಹಿಷ್ಕಾರದ ಮಾತೇ ಆಡಿಲ್ಲ.

ಅಳಗೋಡು ಗ್ರಾಮದ ಕೃಷ್ಣಮೂರ್ತಿ ಅವರ ಪತ್ನಿ ಪೂರ್ಣಿಮಾ (39) ಮಾರ್ಚ್ 2ರಂದು ಮಂಗನ ಕಾಯಿಲೆಯಿಂದ ಮೃತಪಟ್ಟಿ
ದ್ದಾರೆ. ಕೃಷ್ಣಮೂರ್ತಿಯವರು ಕೂಡ ಗಂಭೀರ ಕಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಅವರ ಕುಟುಂಬ ಗ್ರಾಮದ ಮನೆಗೆ ಬೀಗ ಹಾಕಿ ಸಾಗರಕ್ಕೆ ಸಮೀಪದ ಮಂಕಳಲೆ ಗ್ರಾಮದ ಸಂಬಂಧಿಕರ ಮನೆಗೆ ಬಂದು ನೆಲೆಸಿದೆ. ಈ ಸಂಕಟದ ನಡುವೆಯೂ ಕೃಷ್ಣಮೂರ್ತಿ ಹಾಗೂ ಅವರ ಸಹೋದರ ಪರಮೇಶ್ವರ ಅವರ ಕುಟುಂಬದವರು ಮತ ಹಾಕುವ ಸಲುವಾಗಿಯೇ ಗ್ರಾಮಕ್ಕೆ ಬಂದಿದ್ದರು. ಅವರ ಪಕ್ಕದ ಮನೆಯ ಮಹಾಬಲಗಿರಿ ಕುಟುಂಬದವರು ಕುಗ್ವೆ ಗ್ರಾಮಕ್ಕೆ ತೆರಳಿದ್ದು, ಮನೆಗೆ ಬೀಗ ಹಾಕಲಾಗಿದೆ. ಅವರೂ ಬಂದಿದ್ದರು.

ಅರಲಗೋಡು ಗ್ರಾಮದ ಪರಮೇಶ್ವರ ಅವರ ಒಂದೂಕಾಲು ಎಕರೆ ಅಡಿಕೆ ತೋಟದಲ್ಲಿ ಕೊಯ್ಲು ಮಾಡಲು ಈವರೆಗೂ ಜನ ಸಿಕ್ಕಿಲ್ಲ. ಮಂಗನ ಕಾಯಿಲೆಗೆ ಹೆದರಿ ಯಾರೂ ಕೊಯ್ಲು ಮಾಡಲು ಮುಂದೆ ಬರುತ್ತಿಲ್ಲ. ಈ ನೋವಿನ ನಡುವೆಯೂ ‘ಮತದಾನ ನಮ್ಮ ಹಕ್ಕು, ನಾವು ಬದುಕಿದ್ದೇವೆ ಎಂದು ತೋರಿಸುವ ಸಲುವಾದರೂ ಮತ ಹಾಕಬೇಕಲ್ಲ’ ಎಂಬ ಭರವಸೆಯ ಮಾತುಗಳನ್ನು ಪರಮೇಶ್ವರ
ಆಡುತ್ತಾರೆ.

ಮಣಿಪಾಲದ ಆಸ್ಪತ್ರೆಯಲ್ಲಿ 18 ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿದ್ದ ನೆಲ್ಲಿಮಕ್ಕಿ ಗ್ರಾಮದ ದಿವಾಕರ್ ಕುಂಟುತ್ತಲೇ ಬಂದು ಮತದಾನ ಮಾಡಿದ್ದಾರೆ. ಮಂಗನ ಕಾಯಿಲೆಯಿಂದ ಮೃತಪಟ್ಟ ಗೃಹಿಣಿ ಪೂರ್ಣಿಮಾ ಅವರ ಪುತ್ರಿ ಈಗಷ್ಟೆ ನಾಲ್ಕನೇ ತರಗತಿ ಮುಗಿಸಿದ್ದಾಳೆ.

ಅರಳು ಹುರಿದಂತೆ ಪಟಪಟ ಮಾತನಾಡುವ ಸಿಂಚನಾ, ‘ಅಮ್ಮ ಎಲ್ಲಿಗೂ ಹೋಗಿಲ್ಲ. ಯಾವತ್ತೂ ನನ್ನ ಜೊತೆ ಇರುತ್ತಾಳೆ’ ಎಂದು ಏನೂ ನಡೆದಿಲ್ಲ ಎನ್ನುವಂತೆ ಕಣ್ಣು ಮಿಟುಕಿಸಿ ನಕ್ಕಾಗ ಆಕೆಯ ಕುಟುಂಬದ ಇತರ ಸದಸ್ಯರಲ್ಲಿ ಮೌನ ಮನೆ ಮಾಡಿತ್ತು.

ವರುಣನ ಸಿಂಚನ

ತಾಲ್ಲೂಕಿನ ಮಂಗನ ಕಾಯಿಲೆ ಪೀಡಿತ ಪ್ರದೇಶವಾದ ಅರಲಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಮಳೆಯಾಗಿದೆ. ಈ ವರ್ಷ ಇದೇ ಪ್ರಥಮ ಬಾರಿಗೆ ಇಲ್ಲಿ ಮಳೆಯಾಗಿದ್ದು, ಇದರಿಂದ ಮಂಗನ ಕಾಯಿಲೆಗೆ ಕಾರಣವಾಗಿರುವ ಉಣುಗು ನಾಶವಾಗಿ ಕಾಯಿಲೆ ಹತೋಟಿಗೆ ಬರಬಹುದು ಎಂಬ ನಿರೀಕ್ಷೆ ಗ್ರಾಮಸ್ಥರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT