ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್‌ ತುಂಬಾ ರಂಗು ಮೂಡಿಸಿದ ‘ಸಹ್ಯಾದ್ರಿ ಉತ್ಸವ’

Last Updated 3 ಅಕ್ಟೋಬರ್ 2019, 14:14 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ಸಹ್ಯಾದ್ರಿ ಉತ್ಸವಕ್ಕೆ ಗುರುವಾರ ನಟಿ ಮಾನ್ವಿತಾ ಹರೀಶ್ ಚಾಲನೆ ನೀಡಿದರು.

ಟಗರು ಚಲನಚಿತ್ರದ ನಾಯಕಿ ಮಾನ್ವಿತಾ 13 ಅಡಿ ಎತ್ತರದ ಕುವೆಂಪು ಪ್ರತಿಮೆಗೆ ಟ್ರ್ಯಾಲಿ ಮೂಲಕ ಮೇಲೆ ಹೋಗಿ ಹೂವಿನ ಮಾಲೆ ಅರ್ಪಿಸಿದರು. ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ.ವೀರಭದ್ರಪ್ಪ ಸಾಥ್ ನೀಡಿದರು. ನಂತರ ಸಾಂಸ್ಕೃತಿಕ ಮೆರವಣಿಗೆ ಆರಂಭವಾಯಿತು. ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಒಂದೊಂದು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಒಂದೊಂದು ವೇಷ ಭೂಷಣ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು.ಭಾಷೆ, ಸಂಸ್ಕೃತಿ, ಸೇನೆ, ಸಾಮಾಜಿಕ ಸಮಸ್ಯೆಗಳಂತಹ ವೈವಿಧ್ಯಮಯ ವಿಷಯವಸ್ತುಗಳನ್ನು ಪ್ರದರ್ಶಿಸುವ ಸಂಚಲನ ಮೂಡಿಸಿದರು.

ಪಥ ಸಂಚಲನದಲ್ಲಿ 39 ಕಾಲೇಜುಗಳು ಭಾಗವಹಿಸಿದ್ದವು. ರಂಭಾಪುರಿ ಕಾಲೇಜಿನವರು ಮಹಿಷಾಸುರ ಮರ್ದಿನಿ, ನವಶಕ್ತಿ ವೈಭವ ಪ್ರದರ್ಶಿಸಿದರು. ಶಿವಮೊಗ್ಗದ ಎಟಿಎಎನ್‌ಸಿ ಕಾಲೇಜು ತಂಡ ಮೈಸೂರು ಜಂಬೂ ಸವಾರಿಯ ಮೆರವಣಿಗೆ ಮೂಲಕ ದಸರಾ ವೈಭವ ಬಿಂಬಿಸಿದರು.

ಸರ್ಕಾರು ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಕೊಡಗಲಸರ ತಂಡ ದಕ್ಷಿಣ ಕನ್ನಡ ಸಂಸ್ಕೃತಿಯಾದ ಯಕ್ಷಗಾನ, ಕೋಲ, ಹುಲಿಕುಣಿತ, ಕೊರಗಜ್ಜ ನೃತ್ಯದ ಮೂಲಕ ಗಮನ ಸೆಳೆದರು.

ಜಿಎಫ್‌ಜಿಎಸ್ ಕಳಸ ಕಾಲೇಜು ವಿದ್ಯಾರ್ಥಿಗಳು ಯುದ್ಧವಿಮಾನದ ಪ್ರತಿಕೃತಿಯೊಂದಿಗೆ ವಿದ್ಯಾರ್ಥಿ ಪ್ರತೀಕ್ ಅಭಿನಂದನ್ ಪಾತ್ರದ ಮೂಲಕ ಗಮನ ಸೆಳೆದರು.ನೆರೆ, ಬರಕ್ಕೆ ಸಲುಕಿದ ರೈತರು ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಷಯ ಕುರಿತು ರೈತನ ಅಣುಕು ಶವಯಾತ್ರೆ ಪ್ರದರ್ಶಿಸಲಾಯಿತು. ಚಿಕ್ಕಮಗಳೂರಿನ ಸೆಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯುವಜನತೆಯ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತ ವೇಷಭೂಷಣ ಧರಿಸಿ ಜಾಗೃತಿ ಮೂಡಿಸಿದರು.

ಹೆಗ್ಗೋಡು ಕಾಲೇಜಿನ ವಿದ್ಯಾರ್ಥಿಗಳ ಹುಲಿವೇಷ, ಸೊರಬ ಕಾಲೇಜಿನ ಡೊಳ್ಳು ಕುಣಿತ ಜತೆಗೆ, ವೀರಗಾಸೆ, ಕಾಡು ಜನರ ನೃತ್ಯ, ಹಳ್ಳಿ ಸೊಬಗುಗಮನ ಸೆಳೆದವು. ಪ್ಲಾಸ್ಟಿಕ್ ನಿಷೇಧ, ಸಂಚಾರಿ ನಿಯಮ ಪಾಲನೆ ಸೇರಿದಂತೆ ವಿವಿಧ ವಿಷಯಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT