ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು–ಶಿವಮೊಗ್ಗ ಮಧ್ಯೆ ಚತುಷ್ಪಥ ರಸ್ತೆ: ಸಂಸದ ಬಿ.ವೈ. ರಾಘವೇಂದ್ರ

ಪ್ರೆಸ್‌ಟ್ರಸ್ಟ್ ಸಂವಾದ ಕಾರ್ಯಕ್ರಮ
Last Updated 1 ಡಿಸೆಂಬರ್ 2018, 9:59 IST
ಅಕ್ಷರ ಗಾತ್ರ

ಶಿವಮೊಗ್ಗ: ತುಮಕೂರು–ಶಿವಮೊಗ್ಗ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ₨ 5 ಸಾವಿರ ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ಹಂಚಿಕೊಂಡರು.

ಪ್ರೆಸ್‌ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಮಾರ್ಗ ಚತುಷ್ಪಥ ರಸ್ತೆಯಾಗಬೇಕು ಎನ್ನುವುದು ಬಹುದಿನದ ಬೇಡಿಕೆ. ಈಗ ಈಡೇರಿದೆ. ನಾಲ್ಕು ಹಂತಗಳಲ್ಲಿಗುತ್ತಿಗೆನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.

ರೈಲು ಮಾರ್ಗವೂ ದ್ವಿಪಥ:

ಬೀರೂರು– ಶಿವಮೊಗ್ಗ ಮಧ್ಯದ ರೈಲು ಮಾರ್ಗವೂ ದ್ವಿಪಥವಾಗುತ್ತಿದೆ. ಬೆಂಗಳೂರಿಗೆ ಶತಾಬ್ಧಿ ರೈಲು ಸಂಚಾರಕ್ಕೆ ಮನವಿ ಮಾಡಲಾಗಿದೆ. ಈ ರೈಲು ಮುಂಜಾನೆ ಶಿವಮೊಗ್ಗ ಬಿಟ್ಟು 10.30ಕ್ಕೆ ಬೆಂಗಳೂರಿಗೆ ಸೇರುತ್ತದೆ. 5.30ಕ್ಕೆ ಬೆಂಗಳೂರು ಬಿಟ್ಟು ಶಿವಮೊಗ್ಗ ತಲುಪಲಿದೆ ಎಂದು ವಿವರ ನೀಡಿದರು.

ಸಮಗ್ರ ನೀರಾವರಿ ಯೋಜನೆ:

ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸೊರಬ, ಶಿಕಾರಿಪುರ ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ. ಈ ನೀರಾವರಿ ಯೋಜನೆಗಳಿಂದ ಜಿಲ್ಲೆಯ ನೂರಾರು ಕೆರೆಗಳಿಗೆ ನೀರು ಹರಿಸಿದಂತಾಗುತ್ತದೆ. ರೈತರಿಗೆ ವರವಾಗುತ್ತದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈಚೆಗೆ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೇವೆ ಎಂದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಸಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ಸುಮಾರು 61 ಕೆರೆಗಳಿಗೆ ನೀರು ತುಂಬಿಸಬಹುದು. ಸೊರಬ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೆರೆಗಳುಇವೆ.₨ 369 ಕೋಟಿ ವೆಚ್ಚದ ಮೂಡಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ಬರಗಾಲದ ದವಡೆಗೆ ಸಿಲುಕಿರುವ ಸುಮಾರು 350ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಬಹುದು. ಈಗಾಗಲೇ ಸರ್ವೆ ಕಾರ್ಯ ನಡೆದಿದೆ. ಸರ್ವೆಗಾಗಿಯೇ ₨ 42 ಲಕ್ಷ ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಸೊರಬ ತಾಲ್ಲೂಕಿನ ಮೂಗೂರು ಏತ ನೀರಾವರಿ ಯೋಜನೆ, ದಂಡಾವತಿ ಯೋಜನೆ ಕಾಮಗಾರಿ ಆರಂಭಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ದಂಡಾವತಿ ಜಲಾಶಯ ಯೋಜನೆ ವರದಿಯನ್ನು ಸ್ವಲ್ಪ ಮಾರ್ಪಾಡು ಮಾಡಿ ಅನುಷ್ಠಾನಗೊಳಿಸಲಾಗುವುದು. ದಂಡಾವತಿ ಯೋಜನೆ ಜಾರಿಗೆ ಬಂದರೆ ಸುಮಾರು 8 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ ಎಂದರು.

ಹಿರೇಕೆರೂರು ತಾಲ್ಲೂಕಿನ ಪುರದಕೆರೆ ಬಳಿ ಹರಿಯುವ ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ ಕೆರೆಗಳಿಗೆ ನೀರು ಹರಿಸಲುಮನವಿ ಮಾಡಲಾಗಿದೆ.ಸರ್ವೆ ಕಾರ್ಯಕ್ಕೆ ₨ 85 ಲಕ್ಷ ಅನುದಾನ ದೊರಕಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.

ಕಲ್ಲುಹೊಡ್ಡು ಹಳ್ಳ ಯೋಜನೆಯಿಂದ ಸುಮಾರು 14 ಗ್ರಾಮಗಳ ವ್ಯಾಪ್ತಿಯ 1,950 ಹೆಕ್ಟೇರ್ ಪ್ರದೇಶದ ಭೂಮಿಗೆ ಶಾತ್ವತ ನೀರಾವರಿ ಯೋಜನೆ ಕಲ್ಪಿಸಬಹುದು. 2006ರಲ್ಲಿಯೇ ಇದಕ್ಕೆ ಅನುಮೋದನೆ ಸಿಕ್ಕಿತ್ತು. ಆಗ ₨ 20 ಕೋಟಿ ವೆಚ್ಚವಿತ್ತು. ಈಗ ₨ 80 ಕೋಟಿಗೆ ಏರಿಕೆಯಾಗಿದೆ ಎಂದರು.

ಹೊನ್ನಾಳಿ ತಾಲ್ಲೂಕಿನ ಚೀಲೂರು ಬಳಿ ಹರಿಯುವ ತುಂಗಭದ್ರ ನದಿಯಿಂದ ಶಿಕಾರಿಪುರದ ಅಂಜನಾಪುರ ಜಲಾಶಯಕ್ಕೆ ನೀರು ತರಲಾಗುವುದು. ಈ ಯೋಜನೆಯಿಂದ ಶಿಕಾರಿಪುರದವರೆಗೂ ಇರುವ ಎಲ್ಲ ಕೆರೆಗಳಿಗೂ ನೀರು ಹಾಯಿಸಲಾಗುವುದು ಎಂದರು.

ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT