ಗುರುವಾರ , ಡಿಸೆಂಬರ್ 5, 2019
21 °C
ಸಂವಾದ ಕಾರ್ಯಕ್ರದಲ್ಲಿ 100 ದಿನಗಳ ಹಾದಿ ಮೆಲುಕು ಹಾಕಿದ ಸಿ.ಎಸ್. ಷಡಾಕ್ಷರಿ

1,200 ಆಸ್ಪತ್ರೆಗಳಲ್ಲಿ ನೌಕರರಿಗೆ ನಗದು ರಹಿತ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದ 1,200 ಆಸ್ಪತ್ರೆಗಳಲ್ಲಿ ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆ, ಸರ್ಜರಿ ಸೌಲಭ್ಯ ಒದಗಿಸಲು ಸಂಘ ಶ್ರಮಿಸಿದೆ. ತೃತೀಯ ಹಂತದ ಕಾಯಿಲೆಗಳಿಗೆ ಹಿಂದಿನಂತೆ ಮರುಪಾವತಿ ವ್ಯವಸ್ಥೆ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ರಾಜ್ಯ ಸಂಘದ ಚುಕ್ಕಾಣಿ ಹಿಡಿದು 100 ದಿನ ತುಂಬಿದ ಹಿನ್ನೆಲೆಯಲ್ಲಿ ಪ್ರೆಸ್‌ಟ್ರಸ್ಟ್‌ ಸೋಮವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಕೊನೆಯ ಅಸ್ತ್ರವಾಗಬೇಕು. ಮಾತುಕತೆ, ಸಂಧಾನದ ಮೂಲಕವೇ 100 ದಿನಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಸಂಘದ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಮೃತ ನೌಕರರ ಅಂತ್ಯ ಸಂಸ್ಕಾರದ ವೆಚ್ಚವನ್ನು ₨ 5 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಶೇ 4.75 ತುಟ್ಟಿಭತ್ಯೆ ಘೋಷಿಸಲಾಗಿದೆ. ಸರ್ಕಾರಿ ನೌಕರರ ವಿರುದ್ಧ ಬರುವ ಮೂಗರ್ಜಿಗಳನ್ನು ವಿಚಾರಣೆ ಮಾಡದಂತೆ ಸಂಘ ಮಾಡಿದ ಮನವಿಗೆ ಸರ್ಕಾರ ಸ್ಪಂದಿಸಿದೆ. ಸರಿಯಾದ ಮಾಹಿತಿ ಇದ್ದರೆ ಮಾತ್ರ ತನಿಖೆ ನಡೆಸಲಾಗುತ್ತದೆ ಎಂದು ವಿವರ ನೀಡಿದರು.

ನೌಕರರು ಜನರ ಜತೆ ಸೌಹಾರ್ದವಾಗಿ ನಡೆದುಕೊಳ್ಳಬೇಕು. ಇರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಜನಸ್ನೇಹಿ ಆಡಳಿತ ನೀಡಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ಸ್ಥಾಪಿಸಬೇಕು ಎನ್ನುವುದು ಸಂಘದ ಆಶಯ. ಅದಕ್ಕಾಗಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಹಲವು ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಉತ್ತಮ ನಡವಳಿಕೆ ರೂಢಿಸಿಕೊಳ್ಳಲು ಸಹಕರಿಸಲಾಗುತ್ತಿದೆ ಎಂದರು.

100 ದಿನಗಳ ಅವಧಿ ತೃಪ್ತಿ ತಂದಿದೆ. ಸಾಕಷ್ಟು ಕೆಲಸಗಳಾಗಿವೆ. ವಿಧಾನಸೌಧ ಪ್ರವೇಶಕ್ಕೆ ಇದ್ದ ಅಡೆತಡೆ ನಿವಾರಿಸಲಾಗಿದೆ. ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದ ಜಂಟಿ ಸಮಾಲೋಚನಾ ಸಮಿತಿ ರಚಿಸಲಾಗಿದೆ. ನೌಕರರ ಮೇಲೆ ನಡೆಯುವ ಹಲ್ಲೆ ತಡೆಗಟ್ಟುವುದು, ಸೇವಾ ಸೌಲಭ್ಯಗಳ ಪಾವತಿ ವಿಳಂಬ ತಪ್ಪಿಸುವುದು, ತಿಂಗಳ ಮೊದಲ ವಾರದಲ್ಲೇ ವೇತನ ನೀಡುವುದಕ್ಕೆ ಒತ್ತು ನೀಡಲಾಗಿದೆ ಎಂದು ವಿವರ ನೀಡಿದರು.

ಕೆಜಿಐಡಿ ಸಂಪೂರ್ಣ ಗಣಕೀಕರಣವಾಗಿದೆ. ಶಿವಮೊಗ್ಗದಲ್ಲಿ ಭವನ ನಿರ್ಮಾಣಕ್ಕೆ ₨ 2 ಕೋಟಿ, ಕೇಂದ್ರ ಸಂಘದ ಕಟ್ಟಡ ನವೀಕರಣಕ್ಕೆ ₨ 8.6 ಕೋಟಿ ಮಂಜೂರಾಗಿದೆ. ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ₨ 50 ಸಾವಿರ ನೀಡಲಾಗುತ್ತಿತ್ತು. ಈಗ ₨ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ₨ 1 ಕೋಟಿ ಏರಿಕೆ ಮಾಡಲಾಗಿದೆ. ಸಂಘದ ವೆಬ್‌ಸೈಟ್ ತೆರೆಯಲಾಗಿದೆ. ಸರ್ವೋತ್ತಮ ಪ್ರಶಸ್ತಿಗಳನ್ನು 6ರಿಂದ 10ಕ್ಕೆ ಹೆಚ್ಚಿಸಲಾಗಿದೆ. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಒತ್ತು ನೀಡಲಾಗಿದೆ ಎಂದರು.

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಶ್ರಮಿಸುವುದು ಸಂಘದ ಮುಂದಿರುವ ದೊಡ್ಡ ಸವಾಲು. ಈಗಾಗಲೇ ಸರ್ಕಾರ ವರ್ಗಾವಣೆ ನೀತಿಯಲ್ಲಿ ಸಮಗ್ರ ಬದಲಾವಣೆ ತರುತ್ತಿದೆ. ಶಿಕ್ಷಕರ ವರ್ಗಾವಣೆಯೂ ಶಿಕ್ಷಕ ಸ್ನೇಹಿಯಾಗಲಿದೆ. ಖಜಾನೆ–2ರಿಂದಾಗಿ ಮಾರ್ಚ್ ನಂತರ ವೇತನವೂ ಸಮಯಕ್ಕೆ ಸರಿಯಾಗಿ ದೊರೆಯಲಿದೆ ಎಂದು ವಿವರ ನೀಡಿದರು. 

ರಾಜ್ಯದಲ್ಲಿ ಈಗಾಗಲೇ ಪ್ರವಾಸ ಆರಂಭಿಸಿದ್ದೇನೆ. 15 ಜಿಲ್ಲೆಗಳಿಗೆ ಭೇಟಿ ನೀಡಿ ಚರ್ಚಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ವಸತಿ ಗೃಹಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ನೌಕರರ ಗುಣಮಟ್ಟ ಕಾಪಾಡಲು ಸೂಕ್ತ ತರಬೇತಿ ನೀಡಲಾಗುತ್ತಿದೆ. ಎಲ್ಲ ಇಲಾಖೆಗಳ ಮುಖ್ಯಸ್ಥರ ಜತೆ ಚರ್ಚಿಸಲಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

 

ಪ್ರತಿಕ್ರಿಯಿಸಿ (+)