ಬುಧವಾರ, ನವೆಂಬರ್ 20, 2019
21 °C

ಉಕ್ಕಿ ಹರಿದ ನದಿಗಳ ಪ್ರವಾಹ ಇಳಿಮುಖ | ಮರಳಿನ ರಾಶಿ ಟೆಂಡರ್‌ಗೆ ಭಾರಿ ಪೈಪೋಟಿ

Published:
Updated:
Prajavani

ಶಿವಮೊಗ್ಗ: ಮಳೆಯಿಂದ ಉಕ್ಕಿ ಹರಿದ ನದಿಗಳ ಪ್ರವಾಹ ಇಳಿಮುಖವಾಗಿದೆ. ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿರುವ ಮರಳಿನ ರಾಶಿ ಗುತ್ತಿಗೆ ಪಡೆಯಲು ಭಾರಿ ಪೈಪೋಟಿ ನಡೆದಿದೆ.

ತುಂಗಾ, ಭದ್ರಾ, ತುಂಗಭದ್ರಾ, ಮಾಲತಿ, ಶರಾವತಿ, ಕುಮುದ್ವತಿ, ವರದಾ ನದಿಗಳ ತೀರಗಳ 45 ಬ್ಲಾಕ್‌ಗಳಲ್ಲಿ ಉತ್ಕೃಷ್ಟ ದರ್ಜೆಯ ಮರಳು ದೊರೆಯುತ್ತದೆ. ಜಿಲ್ಲೆಯಲ್ಲಿ ಗುತ್ತಿಗೆದಾರರು ಇದುವರೆಗೆ ನಡೆದ 30 ಬ್ಲಾಕ್‌ಗಳ ಹರಾಜಿನಲ್ಲಿ 10 ಟನ್‌ ಮರಳಿಗೆ ನಮೂದಿಸಿದ ಗರಿಷ್ಠ ದರ ₹ 11,900 ದಾಟಿರಲಿಲ್ಲ. ಈಚೆಗೆ ಸುರಿದ ಮಳೆಗೆ ಜಿಲ್ಲೆಯ ನದಿಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಹಲವು ಗುಡ್ಡಗಳು ಕೊಚ್ಚಿ ಹೋಗಿದ್ದವು. ಇದರಿಂದ ನದಿ ಪಾತ್ರಗಳಲ್ಲಿ ಮರಳಿನ ರಾಶಿ ಸೃಷ್ಟಿಯಾಗಿದೆ. ಹಾಗಾಗಿ, ಮರಳು ಗುತ್ತಿಗೆ ಪಡೆಯಲು ಭಾರಿ ಪೈಪೋಟಿ ಕಂಡುಬಂದಿದೆ.

ತೀರ್ಥಹಳ್ಳಿ ತಾಲ್ಲೂಕಿನ ದಬ್ಬಣಗದ್ದೆ, ಬಗ್ಗೂಡಿಗೆ, ಹುಣಸವಳ್ಳಿ, ಮುಂಡವಳ್ಳಿ, ಮಾಳೂರಿನ 5 ಬ್ಲಾಕ್‌ಗಳಿಗೆ ಈಚೆಗೆ ನಡೆದ ಹರಾಜಿನಲ್ಲಿ 10 ಟನ್‌ ಮರಳಿಗೆ ಗರಿಷ್ಠ ದರ ₹ 42 ಸಾವಿರ ನಮೂದಿಸಲಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ಇದು ಅಧಿಕ ದರ. ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ರೌಡಿಶೀಟರ್‌ಗಳು, ರಾಜಕಾರಣಿಗಳು, ಪತ್ರಕರ್ತರು, ಪ್ರಭಾವಿಗಳು ನೇರವಾಗಿ, ಪರೋಕ್ಷವಾಗಿ ಕೈಜೋಡಿಸಿದ್ದಾರೆ. ಪ್ರತಿ ಮರಳು ಕ್ವಾರಿ 10 ರಿಂದ 12 ಎಕರೆ ವಿಸ್ತಾರ ಹೊಂದಿದೆ. ಪ್ರತಿಯೊಂದರಲ್ಲೂ ಸರಾಸರಿ 10 ಸಾವಿರ ಕ್ಯುಬಿಕ್ ಮೀಟರ್‌ವರೆಗೆ ಮರಳು ಸಿಗುತ್ತದೆ. ಈ ಬಾರಿ ಮರಳಿನ ಪ್ರಮಾಣ ದ್ವಿಗುಣವಾಗಲಿರುವುದು ಪೈಪೋಟಿಗೆ ದಾರಿ ಮಾಡಿಕೊಟ್ಟಿದೆ.

ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲೂ ಕರಾಮತ್ತು: ಚೆಕ್‌ಪೋಸ್ಟ್‌, ಸ್ಟಾಕ್‌ಯಾರ್ಡ್‌ಗಳ ಜತೆಗೆ ಎಲ್ಲ ಮರಳು ಬ್ಲಾಕ್‌ಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮರಳು ಸಾಗಣೆ ಲಾರಿಗಳ ತಪಾಸಣೆಗಾಗಿ ಇರುವ 8 ಚೆಕ್‌ಪೋಸ್ಟ್‌ಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇವೆ.

ಸರ್ಕಾರ ನಿಗದಿಪಡಿಸಿದ ಸಂಸ್ಥೆಯಿಂದಲೇ ಪ್ರತಿ ಸಿ.ಸಿ.ಟಿ.ವಿ ಕ್ಯಾಮೆರಾಕ್ಕೆ ₹10 ಸಾವಿರ ನೀಡಬೇಕು. ಪ್ರತಿ ತಿಂಗಳು ನಿರ್ವಹಣೆಗೆ ₹1,200 ಕಟ್ಟಬೇಕು. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಒಂದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಮರಳು ಸಾಗಣೆಯ ಚಲನವಲನ ದಾಖಲಾಗುವುದಿಲ್ಲ! 

‘ನಿಯಮದ ಪ್ರಕಾರ ಅಧಿಕ ದರ ನಮೂದಿಸಿದವರಿಗೆ ಗುತ್ತಿಗೆ ನೀಡಬೇಕು. ಇದೇ ಮೊದಲ ಬಾರಿ ಹೆಚ್ಚಿನ ಮೊತ್ತ ನಮೂದಾಗಿದೆ. ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ವಿವರ ನೀಡುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಸಿ.ಎನ್.ರಶ್ಮಿ.

* ಅಧಿಕೃತವಾಗಿ ಮರಳು ಗುತ್ತಿಗೆ ಪಡೆದವರಿಗೆ ರೌಡಿಗಳಿಂದ ಬೆದರಿಕೆ ಇದ್ದರೆ ದೂರು ನೀಡಬಹುದು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.

-ಕೆ.ಎಂ.ಶಾಂತರಾಜು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರತಿಕ್ರಿಯಿಸಿ (+)