ರಾಮನಗರ: ಸಾವನದುರ್ಗ ಔಷಧಿವನಕ್ಕೆ ಬೇಕಿದೆ ಚಿಕಿತ್ಸೆ

7

ರಾಮನಗರ: ಸಾವನದುರ್ಗ ಔಷಧಿವನಕ್ಕೆ ಬೇಕಿದೆ ಚಿಕಿತ್ಸೆ

Published:
Updated:
Prajavani

ರಾಮನಗರ: ಅಪರೂಪದ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳು ಅರಣ್ಯ ಪ್ರದೇಶದಿಂದ ಕಣ್ಮರೆಯಾಗುತ್ತಿವೆ. ಇಲ್ಲಿನ ಸಾವನದುರ್ಗದಲ್ಲಿರುವ ಔಷಧಿ ಗಿಡಮೂಲಿಕೆಗಳ ವನ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಮಾಗಡಿಯ ಸಾವನದುರ್ಗ ಪ್ರಮುಖ ಪ್ರವಾಸಿ ತಾಣ. ಇದರ ತಪ್ಪಲಲ್ಲಿ ಇರುವ ವನ ನಿರ್ವಹಣೆ ಮಾಡಬೇಕಾದ ಅರಣ್ಯ ಇಲಾಖೆ ಅದೇಕೋ ನಿರ್ಲಕ್ಷ್ಯ ತೋರಿದೆ. ಸಾವನದುರ್ಗ ಅರಣ್ಯ ಪ್ರದೇಶ ವಿಶಿಷ್ಟ ಪಕ್ಷಿ ಮತ್ತು ಚಿಟ್ಟೆಗಳ ಆವಾಸ ಸ್ಥಾನ. ದೇಶ ವಿದೇಶಗಳಿಂದ ಇಲ್ಲಿಗೆ ಬರುವ ಪಕ್ಷಿಗಳು ಸಂತಾನ ವೃದ್ಧಿ ಮಾಡಿಕೊಂಡು ಹೋಗುತ್ತವೆ. ಅದೇರೀತಿ ವಿವಿಧ ಜಾತಿಯ ಚಿಟ್ಟೆಗಳಿಗೂ ಇದು ನೆಚ್ಚಿನ ತಾಣವಾಗಿದೆ. ಈ ವನವನ್ನು ನಿರ್ವಹಿಸುವಲ್ಲಿ ಮಾಗಡಿ ಅರಣ್ಯ ಇಲಾಖೆಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಇಲ್ಲಿನ ಫಲಕಗಳು ಬಣ್ಣ ಕಂಡು ಎಷ್ಟು ವರ್ಷಗಳಾಗಿವೆ. ಇದೊಂದು ಪವಿತ್ರವನ. ಆದರೆ ಇಲ್ಲಿರುವ ದೇವಾಲಯಕ್ಕೆ ಬರುವ ಕೆಲ ಭಕ್ತರು ಈ ವನದಲ್ಲಿಯೇ ಮಾಂಸದ ಅಡುಗೆ ಮಾಡಿ ಸೇವಿಸಿ ಹೋಗುವುದಲ್ಲದೆ, ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಬಿಸಾಡುತ್ತಿದ್ದಾರೆ. ಇದನ್ನು ತಡೆಯಲು ಅರಣ್ಯ ಸಿಬ್ಬಂದಿ ಮುಂದಾಗಿಲ್ಲ. ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಮಾಕಳಿ ಬೇರಿಗೆ ಕನ್ನ: ಆಯುರ್ವೆದ ಹಾಗೂ ನಾಟಿ ಔಷಧಗಳಲ್ಲಿ ಮಾಕಳಿ ಬೇರಿಗೆ ವಿಶೇಷ ಸ್ಥಾನವಿದೆ. ಮಾಕಳಿ ಸಸ್ಯದ ಎಲೆಗಳು ದೀರ್ಘ ವೃತ್ತಾಕಾರದಲ್ಲಿದ್ದು, ಬೇರುಗಳು ವಿಶಾಲವಾಗಿ ಹಬ್ಬಿಕೊಳ್ಳುತ್ತವೆ. ಇದರ ಬೇರುಗಳ ಹೊರಪದರವು ಮೆತ್ತಗಿದ್ದು, ಒಳಪದರವು ಗಟ್ಟಿಯಾಗಿರುತ್ತದೆ. ಜತೆಯಲ್ಲಿ ವೆನಿಲಾದಂತಹ ಸಣ್ಣ ಪರಿಮಳವಿರುತ್ತದೆ.

ಇದನ್ನು ದೇಹದ ತಂಪಿಗೆ ಹಾಗೂ ರಕ್ತ ಶುದ್ಧಿಗಾಗಿ ಬಳಸಲಾಗುತ್ತದೆ. ಅಜೀರ್ಣ, ಗರ್ಭಾಶಯದ ತೊಂದರೆ, ದೀರ್ಘಕಾಲದ ಸಂಧಿವಾತ, ಕೆಲವು ಚರ್ಮ ರೋಗಗಳು, ನಿಶ್ಯಕ್ತಿ, ಹಿಮೋಗ್ಲೋಬಿನ್ ಕೊರತೆ, ಇತ್ಯಾದಿಗಳಿಗೂ ಇದನ್ನು ಔಷಧವಾಗಿ ಬಳಸಲಾಗುತ್ತದೆ.

ಜಂಕ್ಫುಡ್ಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳಿಗೆ ಮಾಕಳಿ ಬೇರಿನ ಅಂಶಗಳು ರಾಮಬಾಣ. ಧಾನ್ಯಗಳು ಮತ್ತು ಉಪ್ಪಿನಕಾಯಿಯಂತಹ ವಸ್ತು ಕೆಡದಂತೆ ಅವುಗಳಲ್ಲಿ ಮಾಕಳಿ ಬೇರಿನ ತುಂಡುಗಳನ್ನು ಬಳಸುತ್ತಾರೆ. ಇಂತಹ ಬೇರಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಈ ವನದಲ್ಲಿ ಅಲ್ಲಲ್ಲಿ ಬೇರಿಗಾಗಿ ಹುಡುಕಾಟ ನಡೆದಿದೆ. ಅಲ್ಲಲ್ಲಿ ಗುಂಡಿಗಳನ್ನು ತೆಗೆದು ಬೇರನ್ನು ಕದ್ದೊಯ್ದಿರುವುದು ಕಾಣಸಿಗುತ್ತದೆ ಎಂದು ಸ್ಥಳೀಯರು ವಿವರಿಸುತ್ತಾರೆ.

314 ವಿವಿಧ ಗಿಡಮೂಲಿಕೆಗಳು
ಅಂದಾಜು 280 ಹೆಕ್ಟೇರ್ ಪ್ರದೇಶದಲ್ಲಿ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳ ವನವೂ ಇದೆ. ಈ ವನದಲ್ಲಿ 314 ವಿವಿಧ ಜಾತಿಯ ಔಷಧೀಯ ಗುಣಗಳ ಸಸ್ಯ ಪ್ರಭೇದಗಳಿವೆ.

ಮಾಕಳಿ ಬೇರು, ಜ್ಯೋತಿ ಸ್ಮೃತಿ, ಬಿಲ್ವಪತ್ರೆ, ಕರಡಿ ಹೂವು, ಕಾಡು ಹುರುಳಿ, ಶತಾವರಿ, ಮಧುನಾಶಿನಿ, ಅಶ್ವಗಂಧ.... ಹೀಗೆ ಹಲವು ಜಾತಿಯ ಪ್ರಮುಖ ಗಿಡಮೂಲಿಕೆಗಳು ಇಲ್ಲಿವೆ. ಈ ಪೈಕಿ ಮಾಕಳಿ ಬೇರು ಸೇರಿ 6 ಜಾತಿಯ ಗಿಡಮೂಲಿಕೆಗಳು ಅಳಿವಿನಂಚಿನಲ್ಲಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !