ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಗೆದ್ದರೆ ಇತಿಹಾಸ ನಿರ್ಮಾಣ

ಶಿಕಾರಿಪುರ, ಸೊರಬ ಬಿಟ್ಟರೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿಲ್ಲ ಕುಟುಂಬ ರಾಜಕಾರಣ
Last Updated 10 ಏಪ್ರಿಲ್ 2018, 11:33 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸತತ 9ನೇ ಬಾರಿ ಕಣಕ್ಕೆ ಇಳಿಯುತ್ತಿದ್ದು, ಈ ಬಾರಿ ಗೆದ್ದರೆ ಜಿಲ್ಲೆಯ ಇತಿಹಾಸದಲ್ಲಿ ದಾಖಲೆ ನಿರ್ಮಾಣವಾಗಲಿದೆ.

1983ರಿಂದ 2013ರವರೆಗೆ ನಡೆದ 8 ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅವರು 7 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಯಡಿಯೂರಪ್ಪ ಬಿಟ್ಟರೆ ಇದುವರೆಗೂ ಜಿಲ್ಲೆಯಿಂದ 7 ಬಾರಿ ಶಾಸಕರಾಗಿ ಆಯ್ಕೆಯಾದವರು ಸೊರಬದ ಎಸ್. ಬಂಗಾರಪ್ಪ ಮಾತ್ರ.

ಅವರು ಕೊನೆಯದಾಗಿ ವಿಧಾನಸಭೆ ಪ್ರವೇಶಿಸಿದ್ದು 1994ರಲ್ಲಿ. ಆನಂತರ ಅವರ ಚಿತ್ತ ಲೋಕಸಭೆಯತ್ತ ಹರಿದ ಕಾರಣ ಮತ್ತೆಂದೂ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ. ಯಡಿಯೂರಪ್ಪ ಮಾತ್ರ ನಾಲ್ಕು ದಶಕ ನಿರಂತರ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಗೆಲುವು ಪಡೆದರೆ ಅತಿ ಹೆಚ್ಚು ಬಾರಿ ಜಿಲ್ಲೆಯಿಂದ ಆಯ್ಕೆಯಾದ ಶಾಸಕ ಎಂಬ ದಾಖಲೆ ಬರೆಯಲಿದ್ದಾರೆ.

1983ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ 1985, 1989, 1994ರ ಚುನಾವಣೆಯಲ್ಲಿ ಸತತ ಗೆಲುವು ಕಂಡರು. 1999ರಲ್ಲಿ ಕಾಂಗ್ರೆಸ್‌ನ ಮಹಾಲಿಂಗಪ್ಪ ಅವರು ಯಡಿಯೂರಪ್ಪ ಗೆಲುವಿನ ಓಟಕ್ಕೆ ತಡೆ ಹಾಕಿದ್ದರು.2004, 2008 ಹಾಗೂ 2013ರ ಚುನಾವಣೆಯಲ್ಲಿ ಮತ್ತೆ ಗೆಲುವಿನ ಓಟ ಮುಂದುವರಿಸಿದ್ದರು.

ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್: ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಶಾಂತವೀರಪ್ಪ ಗೌಡ 2014ರ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. ನಂತರ ದಿಢೀರ್ ಎಂದು ಪಕ್ಷ ಬದಲಿಸಿ ಬಿಜೆಪಿ ಪಾಳಯ ಸೇರಿದ್ದರು. ಈ ಅನಿರೀಕ್ಷಿತ ಬೆಳವಣಿಗೆಗಳ ಪರಿಣಾಮ ಆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ. ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಈಗ ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್ ಹೆಸರು ಚಲಾವಣೆಯಲ್ಲಿದೆ. ಆದರೆ, ಇದುವರೆಗೂ ಕಾಂಗ್ರೆಸ್ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ.

ಈಶ್ವರಪ್ಪ ಅವರದು 7ನೇ ಬಾರಿ ಸ್ಪರ್ಧೆ: ಜಿಲ್ಲೆಯಲ್ಲಿ ಯಡಿಯೂರಪ್ಪ ಬಿಟ್ಟರೆ ಬಿಜೆಪಿಯ ಮುಖಂಡರಲ್ಲಿ ಕೆ.ಎಸ್. ಈಶ್ವರಪ್ಪ ಅವರೇ ಅತ್ಯಂತ ಹಿರಿಯರು. 1989ರಲ್ಲಿ ಮೊದಲ ಪ್ರಯತ್ನದಲ್ಲೇ ಗೆಲುವು ಪಡೆದಿದ್ದ ಅವರು ಇದುವರೆಗೂ 6 ಚುನಾವಣೆ ಎದುರಿಸಿದ್ದಾರೆ. 4 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿಯೂ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, 7ನೇ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಸೀಮಿತ ಚೌಕಟ್ಟು: ರಾಜ್ಯದ ಬೇರೆ ಭಾಗಗಳಲ್ಲಿ ಇದ್ದಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿ ಕಂಡುಬಂದಿಲ್ಲ. ಸೊರಬ, ಶಿಕಾರಿಪುರದಲ್ಲಿ ಮಾತ್ರ ತಂದೆ, ಮಕ್ಕಳು ವಿಧಾನಸಭೆ ಪ್ರವೇಶಿಸಿದ್ದಾರೆ. ಸತತ 7 ಅವಧಿ ಶಾಸಕರಾಗಿದ್ದ ಬಂಗಾರಪ್ಪ ಅವರು 1996ರಲ್ಲಿ ಲೋಕಸಭೆಗೆ ಆಯ್ಕೆಯಾದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ತೆರವಾದ ಸೊರಬ ವಿಧಾನಸಭಾ ಕ್ಷೇತದ ಉಪ ಚುನಾವಣೆಯಲ್ಲಿ ಅವರ ಪುತ್ರ ಕುಮಾರ್ ಬಂಗಾರಪ್ಪ ಗೆಲುವು ಕಂಡಿದ್ದರು. ನಂತರ 1999, 2004ರಲ್ಲೂ ಅವರೇ ಆಯ್ಕೆಯಾಗಿದ್ದರು. 2013ರಲ್ಲಿ ಅವರ ಮತ್ತೊಬ್ಬ ಪುತ್ರ ಮಧು ಬಂಗಾರಪ್ಪ ಸಹೋದರನ (ಕುಮಾರ್ ಬಂಗಾರಪ್ಪ) ವಿರುದ್ಧವೇ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು.

ಯಡಿಯೂರಪ್ಪ ಅವರು 2014ರಲ್ಲಿ ಲೋಕಸಭೆಗೆ ಆಯ್ಕೆಯಾದಾಗ ತೆರವಾದ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪುತ್ರ ಬಿ.ವೈ. ರಾಘವೇಂದ್ರ ಆಯ್ಕೆಯಾಗಿದ್ದರು.

ಶಿಕಾರಿಪುರದಲ್ಲಿ ಮತ್ತೆ ಈ ಬಾರಿ ತಂದೆಯೇ ಸ್ಪರ್ಧಿಸುತ್ತಿರುವ ಕಾರಣ ರಾಘವೇಂದ್ರಗೆ ಅವಕಾಶ ಸಿಕ್ಕಿಲ್ಲ. ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪ
ಪುತ್ರರ ಮಧ್ಯೆ ಸ್ಪರ್ಧೆ ಯಥಾಪ್ರಕಾರ ಈ ಬಾರಿಯೂ ಮುಂದುವರಿದಿದೆ.

ಎರಡು ಕ್ಷೇತ್ರ ಹೊರತುಪಡಿಸಿದರೆ ಉಳಿದ 5 ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣ ಇದುವರೆಗೂ ನಡೆದಿಲ್ಲ.ಈ ಬಾರಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕರಿಯಣ್ಣ ಅವರ ಪುತ್ರ ಡಾ.ಶ್ರೀನಿವಾಸ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಭದ್ರಾವತಿಯಲ್ಲಿ ಮಾಜಿ ಶಾಸಕ ರಾಜಶೇಖರಪ್ಪ ಅವರ ಪುತ್ರ ಪ್ರವೀಣ್ ಪಟೇಲ್ ಬಿಜೆಪಿಯಿಂದ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಉಳಿದಂತೆ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಅಂತಹ ವಾತಾವರಣ ಸದ್ಯಕ್ಕೆ ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT