ನಾಲ್ಕು ದಿನಗಳು ಸಹ್ಯಾದ್ರಿ ಸಂಭ್ರಮ

7
ಬಸ್‌, ಹೆಲಿ ಟೂರ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು, ಕ್ರೀಡೆ,

ನಾಲ್ಕು ದಿನಗಳು ಸಹ್ಯಾದ್ರಿ ಸಂಭ್ರಮ

Published:
Updated:
Prajavani

ಶಿವಮೊಗ್ಗ: ಒಂದು ದಶಕದ ನಂತರ ನಡೆಯುತ್ತಿರುವ ಜಿಲ್ಲೆಯ ಸಂಸ್ಕೃತಿ, ಪರಂಪರೆಗಳ ಪ್ರತೀಕ ‘ಸಹ್ಯಾದ್ರಿ ಉತ್ಸವ’ಕ್ಕೆ ಇಡೀ ಶಿವಮೊಗ್ಗ ಮಧುಮಗಳಂತೆ ಶೃಂಗಾರಗೊಂಡಿದೆ.

ಸಿದ್ಧಗಂಗಾ ಶ್ರೀಗಳ ನಿಧನದ ಪರಿಣಾಮ ಪೂರ್ವ ನಿಗದಿಯಂತೆ 5 ದಿನಗಳ ಬದಲಾಗಿ, 4 ದಿನಗಳು ಉತ್ಸವ ಜರುಗಲಿದ್ದು, ಜ. 24ರಂದು ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಸಾಹಿತಿ ನಾ. ಡಿಸೋಜ ಚಾಲನೆ ನೀಡುವರು. 24ರಿಂದ 27ರವರೆಗೆ ನಿಗದಿತ ಎಲ್ಲ ಕಾರ್ಯಕ್ರಮಗಳು ಯಥಾ ಪ್ರಕಾರ ನಡೆಯಲಿವೆ.

ಉತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳು, ಕಟ್ಟಡಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿವೆ. ಫ್ಲೆಕ್ಸ್‌ಗಳು, ಬ್ಯಾನರ್, -ಬಂಟಿಂಗ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಹಳೆ ಕಾರಾಗೃಹದ ಆವರಣದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಡೆಯಲಿವೆ. ಕುವೆಂಪು ರಂಗಮಂದಿರ, ರಂಗಾಯಣ, ಅಂಬೇಡ್ಕರ್ ಭವನ, ಸಹ್ಯಾದ್ರಿ ಕಾಲೇಜು ಆವರಣ ಸೇರಿದಂತೆ ಸಮನಾಂತರ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು, ರಂಗಪ್ರದರ್ಶನ, ಚಿತ್ರ ಪ್ರದರ್ಶನಗಳು ನಡೆಯಲಿವೆ.

24ರಂದು ಮಧ್ಯಾಹ್ನ 2ಕ್ಕೆ ನಗರದ ಕುವೆಂಪು ರಂಗಮಂದಿರದ ಆವರಣದಿಂದ ಉತ್ಸವದ ಮೆರವಣಿಗೆ ಸಾಗಲಿದೆ. ಡೊಳ್ಳುಕುಣಿತ, ಹಲಗೆ, ನಂದಿಕೋಲು ಸೇರಿದಂತೆ ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು, ಪಾರಂಪರಿಕ ಶೈಲಿಯ ಉಡುಪು ಧರಿಸಿದ ಕಾಲೇಜುಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸುವರು. ಮೆರವಣಿಗೆ ಮೆರಗು ತರಲಿವೆ. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಹಳೇ ಕಾರಾಗೃಹದ ಆವರಣ ಸೇರಲಿದೆ.

ಪ್ರದರ್ಶನ ಮತ್ತು ಮಾರಾಟ
ಪ್ರಧಾನ ವೇದಿಕೆಯ ಸುತ್ತಲೂ ಸುಮಾರು 200ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದೆ. ಕೃಷಿ, ಕೈಗಾರಿಕೆ, ಖಾದಿ, ಜವಳಿ, ತೋಟಗಾರಿಕೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರ ಮಳಿಗೆ ತೆರೆಯಲಾಗಿದೆ.

24ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ‘ಜನಪದ ಭಾರತ’ ಕಾರ್ಯಕ್ರಮವನ್ನು ವಿವಿಧ ರಾಜ್ಯಗಳ 215ಕ್ಕೂ ಹೆಚ್ಚಿನ ಕಲಾವಿದರು ನಡೆಸಿಕೊಡಲಿದ್ದಾರೆ. 21 ವಾದ್ಯ ಪರಿಕರ ಒಳಗೊಂಡ ಕಲಾವಿದರು ಒಂದೆಡೆ ಕಲೆತು ಕರ್ನಾಟಕ ಮತ್ತು ಹಿಂದೂಸ್ತಾನಿ ಜುಗಲ್‌ಬಂಧಿ ಕಾರ್ಯಕ್ರಮ ನಡೆಸಲಿದ್ದಾರೆ. 50ರಿಂದ -70ಜನಪದ ಕಲಾವಿದರ ಕಲಾಪ್ರದರ್ಶನವೂ ಇರುತ್ತದೆ. ರಘು ದೀಕ್ಷಿತ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಈ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಗೋಂದಿ ಚಟ್ನಳ್ಳಿಯಲ್ಲಿ ಕೆಸರುಗದ್ದೆ ಓಟ, ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ, ಅಬ್ಬಲಗೆರೆ ಗ್ರಾಮದಲ್ಲಿ ಎತ್ತಿನಗಾಡಿ ಓಟ, ಗೋಪಾಳದಲ್ಲಿ ಈಜು, ಸ್ಕೇಟಿಂಗ್, ಟೆನಿಸ್‌ ಸ್ಪರ್ಧೆಗಳು ನಡೆಯಲಿವೆ.

ಫಲಪುಷ್ಪ ಪ್ರದರ್ಶನ
ಗಾಂಧಿಪಾರ್ಕ್‌ನ ಅಂಬೇಡ್ಕರ್ ಭವನದ ಆವರಣದಲ್ಲಿ ಜ. 24ರಿಂದ 27ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾಸಂಘದ ಸಹಯೋಗದಲ್ಲಿ ಗಣರಾಜ್ಯೋತ್ಸವ ಹಾಗೂ ಸಹ್ಯಾದ್ರಿ ಉತ್ಸವದ ಅಂಗವಾಗಿ ಈ ಪ್ರದರ್ಶನ ಆಯೋಜಿಸಲಾಗಿದೆ. ಈ ಫಲ-ಪುಷ್ಪ ಪ್ರದರ್ಶನದ ವಿಶೇಷವಾಗಿ ಅಮರ್‌ ಜವಾನ್ ಹೂವಿನ ಆಕೃತಿ, ಮೇಕ್ ಇನ್ ಇಂಡಿಯಾ ಸಿಂಹದ ಲಾಂಛನ, ವಿವಿಧ ಹಣ್ಣುಗಳ ಆಕೃತಿಯ ಫೋಟೊ ಫ್ರೇಮ್‌ಗಳು, ಮಕ್ಕಳ ಆಕರ್ಷಣೆಯ ಕಲಾಕೃತಿಗಳು, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿತೆ, ವಿವಿಧ ತರಕಾರಿ ಕೆತ್ತನೆಗಳು, ತರಕಾರಿಗಳಿಂದ ಮಾಡಿದ ನವಿಲು ಆಕೃತಿಗಳು ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಗಳಾಗಿವೆ.

ಮಹಿಳೆಯರಿಗಾಗಿ ಹೂ, ಎಲೆ, ಬೀಜ, ಧಾನ್ಯಗಳನ್ನು ಬಳಸಿ ಚಿತ್ರಿಸಿದ ರಂಗೋಲಿ ಸ್ಪರ್ಧೆ ಇಡಲಾಗಿದೆ. ಫಲ-ಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಆಹಾರ ಮೇಳ, ಮಕ್ಕಳ ಆಕರ್ಷಣೆಗಾಗಿ ವಿವಿಧ ಅಮ್ಯೂಸ್ಮೆಂಟ್ ಪಾರ್ಕ್‌ ಆರಂಭಿಸಲಾಗುವುದು. ಪ್ರತಿದಿನ ಸಂಜೆ ಆಹ್ವಾನಿತರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜ. 25, 26ರಂದು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಇರುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !