ಎಸ್ಸಿ, ಎಸ್ಟಿ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಣೆ ಕಾಯ್ದೆ: 13ಕ್ಕೆ ಸಮಾವೇಶ

7

ಎಸ್ಸಿ, ಎಸ್ಟಿ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಣೆ ಕಾಯ್ದೆ: 13ಕ್ಕೆ ಸಮಾವೇಶ

Published:
Updated:
Deccan Herald

ರಾಮನಗರ: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಿಸುವ ಕಾಯ್ದೆ 2017ರ ಅನುಷ್ಠಾನಕ್ಕೆ ಆಗ್ರಹಿಸಿ ಇದೇ 13ರಂದು ನಗರದಲ್ಲಿ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ರ್‍ಯಾಲಿ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಿ. ಶಿವಶಂಕರ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂಬಡ್ತಿ ಹೊಂದಿರುವ ಎಲ್ಲ ಇಲಾಖೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಧಿಕಾರಿ, ನೌಕರರು ಹಿಂಬಡ್ತಿ ಹೊಂದುವ ಪೂರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುದ್ದೆ, ಸ್ಥಳದಲ್ಲಿಯೇ ನಿಯುಕ್ತಿಗೊಳಿಸಿ ಕೂಡಲೇ ಆದೇಶಿಸಬೇಕು’ ಎಂದು ಒತ್ತಾಯಿಸಿದರು.

ಜೇಷ್ಠತೆ ಪಟ್ಟಿಗಳನ್ನು ಇಲಾಖೆಗಳು ಪುನರ್‌ ಪರಿಷ್ಕರಿಸುವಾಗ ಇಲಾಖಾ ಹಂತದಲ್ಲಿ ಎಸ್ಸಿ, ಎಸ್ಟಿ ಅಧಿಕಾರಿ, ನೌಕರರನ್ನು ಒಳಗೊಂಡ ಸಮಿತಿ ರಚಿಸಿ ಪಟ್ಟಿಯನ್ನು ಪರಿಷ್ಕರಿಸಿ ಸೂಕ್ತ ಆದೇಶ ನೀಡಬೇಕು. ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ನೌಕರರಿಗೆ ಜೇಷ್ಠತೆಯನ್ನು ವಿಸ್ತರಿಸುವ ಸಂಬಂಧ ರಾಜ್ಯ ಸರ್ಕಾರ 2017ರಲ್ಲಿ ರೂಪಿಸಿರುವ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ನ್ಯಾಯಾಲಯ ಕೋರಿದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿರಲಿಲ್ಲ. ಇದರಿಂದಾಗಿ ಎಸ್ಸಿ, ಎಸ್ಟಿ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಅವರ ಹಿತ ಕಾಯಲು, ಅವರಿಗೆ ನೀಡಲಾಗಿರುವ ಬಡ್ತಿ ಮತ್ತು ಜೇಷ್ಠತೆಯನ್ನು ಕಾಪಾಡಲು ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ಅವರು ಜೂನ್ 18ರಂದು ಸಹಿ ಹಾಕಿದ್ದಾರೆ. ಸರ್ಕಾರವು ಜೂನ್ 23ರಂದು ಈ ಸಂಬಂಧ ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಿದೆ. ಆದರೆ, ಈಗಿನ ಮೈತ್ರಿ ಸರ್ಕಾರವು, ನ್ಯಾಯಾಲಯದಲ್ಲಿ ನಿಂದನಾ ಅರ್ಜಿ ಬಾಕಿ ಇದೆ ಎಂದು ನೆಪವೊಡ್ಡಿ ದಲಿತ ವರ್ಗದ ಅಧಿಕಾರಿ ಮತ್ತು ನೌಕರರ ಬಗ್ಗೆ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತೀಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಚಲುವರಾಜು ಮಾತನಾಡಿ, ಬಡ್ತಿ ಮೀಸಲಾತಿ ರದ್ದತಿಯಿಂದಾಗಿ ಎಸ್ಸಿ, ಎಸ್ಟಿ ನೌಕರರಿಗೆ ತೀವ್ರ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸಬೇಕಾದ ಅವಶ್ಯಕತೆ ಇದೆ. ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ನೀಡಿದ ಆದೇಶದಲ್ಲಿ ಎಸ್ಸಿ, ಎಸ್ಟಿ ನೌಕರರ ಹಿತ ಕಡೆಗಣಿಸಲಾಗಿದೆ ಎಂದು ತಿಳಿಸಿದರು.

ಸಮಿತಿಯ ಕೋಶಾಧ್ಯಕ್ಷ ಡಾ.ಎಸ್. ವಿಜಯಕುಮಾರ್ ಮಾತನಾಡಿ, ನೌಕರರ ಬೇಡಿಕೆಗೆ ಸ್ಪಂದನೆ ದೊರಕದೇ ಇದ್ದಲ್ಲಿ ರಾಜ್ಯದಾದ್ಯಂತ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐದು ಸಾವಿರ ಸರ್ಕಾರಿ ನೌಕರರು ಹಿಂಬಡ್ತಿ ಹೊಂದಿದ್ದಾರೆ. 60 ಸಾವಿರ ನೌಕರರರು ಹಿಂಬಡ್ತಿಯಿಂದ ಆಗುತ್ತಿರುವ ನೋವನ್ನು ಅನುಭವಿಸುತ್ತಿದ್ದಾರೆ. 4 ನೌಕರರು ಮರಣ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿಯ ಉಪಾಧ್ಯಕ್ಷ ಆರ್. ಮೋಹನ್, ಖಜಾಂಚಿ ಎಂ.ಎಲ್. ಸತ್ಯನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ವಿ. ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಜಯಪ್ರಕಾಶ್, ದಲಿತ ಸಂಘಟನೆಗಳ ಮುಖಂಡರಾದ ಕುಮಾರ್, ಹೊನ್ನಸ್ವಾಮಯ್ಯ, ರಾಜ್ಯ ದಲಿತ ಪದವೀಧರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ. ಲೋಕೇಶ್ ಇದ್ದರು.

ಮುಖ್ಯಾಂಶಗಳು
* ಜೇಷ್ಠತೆ ವಿಸ್ತರಣೆ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರ ಹಿಂದೇಟು: ಆರೋಪ
* ರಾಜ್ಯದಲ್ಲಿ 5 ಸಾವಿರ ಎಸ್ಸಿ, ಎಸ್ಟಿ ನೌಕರರಿಗೆ ಹಿಂಬಡ್ತಿ
* ಪವಿತ್ರಾ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡದ ಸರ್ಕಾರ: ದೂರು

Tags: 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !