ಆರೋಪಿ ಸಂಬಂಧಿಕರಿಗಾಗಿ ಹುಡುಕಾಟ

7
ರಾಮನಗರದಲ್ಲಿ ವಾಸವಿತ್ತು ಇನ್ನೂ ಎರಡು ಕುಟುಂಬ

ಆರೋಪಿ ಸಂಬಂಧಿಕರಿಗಾಗಿ ಹುಡುಕಾಟ

Published:
Updated:
Deccan Herald

ರಾಮನಗರ: ಶಂಕಿತ ಉಗ್ರ ಮೊಹಮ್ಮದ್ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಜತೆಗೆ ರಾಮನಗರದಲ್ಲಿ ಆತನ ಸಂಬಂಧಿಕರೂ ನೆಲೆಸಿದ್ದು, ಅವರಿಗಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಆರೋಪಿಯ ಬಂಧನದ ಸುದ್ದಿ ತಿಳಿಯುತ್ತಲೇ ಅವರೆಲ್ಲ ಇಲ್ಲಿಂದ ಪರಾರಿಯಾಗಿದ್ದಾರೆ.

ಆರೋಪಿಯ ಸಂಬಂಧಿಕರ ಎರಡು ಕುಟುಂಬಗಳು ರಾಮನಗರದಲ್ಲಿ ವಾಸವಿದ್ದವು. ಎಲ್ಲರೂ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಇಲ್ಲಿಗೆ ವಲಸೆ ಬಂದಿದ್ದರು ಎಂಬ ಅಂಶ ಬಹಿರಂಗವಾಗಿದೆ.

ಜಹಿದುಲ್‌ ರಾಮನಗರದಲ್ಲಿ ಮನೆ ಮಾಡುವ ಒಂದೆರಡು ತಿಂಗಳು ಮುನ್ನವೇ ಆತನ ಭಾವಮೈದುನ ಹಸೇನ್‌ ಇಲ್ಲಿಗೆ ಬಂದು ಮನೆ ಮಾಡಿದ್ದ. ಇಲ್ಲಿನ ಟಿಪ್ಪುನಗರದ ಮುಷ್ತಾಕ್ ಎಂಬುವರ ಮನೆಯನ್ನು ಆತ ಬಾಡಿಗೆಗೆ ಪಡೆದಿದ್ದ. ಕಿವಿಯೋಲೆ, ಬಳೆ ಮೊದಲಾದ ವಸ್ತುಗಳನ್ನು ಮಾರುವ ಕೆಲಸ ಮಾಡಿಕೊಂಡಿದ್ದ. ಅವನೊಂದಿಗೆ ಮಡದಿ, ಇಬ್ಬರು ಪುಟ್ಟ ಮಕ್ಕಳೂ ವಾಸವಿದ್ದರು.

ಆತ ಬಂದ ಎರಡು ತಿಂಗಳ ನಂತರ ಆರೋಪಿಯ ಕುಟುಂಬವು ಟ್ರೂಪ್‌ಲೈನ್‌ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆಯಿತು. ಬಳಿಕ ಆತ ತನ್ನ ಅತ್ತೆ–ಮಾವನನ್ನೂ ಇಲ್ಲಿಗೆ ಕರೆಸಿಕೊಂಡಿದ್ದ. ಜುಲೈ 15ರಂದು ಟಿಪ್ಪುನಗರದಲ್ಲಿನ ಹಸೇನ್‌ ಮನೆ
ಸಮೀಪವೇ ಆಯಿಲ್‌ ಇಮ್ರಾನ್ ಎಂಬುವರಿಗೆ ಸೇರಿದ ಮನೆಯನ್ನು ನೋಡಿದ್ದ. ಆರೋಪಿಯ ಅತ್ತೆ –ಮಾವ ಅದಕ್ಕೆ ₹10 ಸಾವಿರ ಮುಂಗಡವನ್ನೂ ಕೊಟ್ಟು ಹೋದರು. ಬಿಹಾರಕ್ಕೆ ಹೋಗಿ ಬರುತ್ತೇನೆ ಎಂದ ಮಾವ ವಾಪಸ್ ಆಗಲಿಲ್ಲ. ಅತ್ತೆ ಒಬ್ಬರೇ ಜುಲೈ 28ರಂದು ಹೊಸ ಮನೆಗೆ ಬಂದಿದ್ದರು. ಮಾವ ಬಂದ ಬಳಿಕ ಬಾಡಿಗೆ ಕರಾರು ಮಾಡಿಸಿಕೊಳ್ಳುವುದಾಗಿ ಹಸೇನ್ ಮನೆ ಮಾಲೀಕರಿಗೆ ಹೇಳಿದ್ದ.

ಬಂಧನದ ನಂತರ ಎಸ್ಕೇಪ್: ಕೌಸರ್‌ ಬಂಧನವಾಗುತ್ತಲೇ ಆತನ ಪತ್ನಿ ಮೊದಲು ತೆರಳಿದ್ದು ಹಸೇನ್‌ ಮನೆಗೆ. ಅಲ್ಲಿ ಎರಡೂ ಕುಟುಂಬಗಳಿಗೂ ಸುದ್ದಿ ತಲುಪಿ ಅವರೂ ಜಾಗ ಖಾಲಿ ಮಾಡಿದ್ದರು. ಪೊಲೀಸರಿಗೆ ಮಾಹಿತಿ ದೊರೆತು ಅವರು ಶೋಧ ನಡೆಸುವಷ್ಟರಲ್ಲಿ ಒಂದು ಮನೆಗೆ ಬೀಗ ಹಾಕಲಾಗಿತ್ತು. ಇನ್ನೊಂದು ಮನೆಯ ಬಾಗಿಲಷ್ಟೇ ಮುಚ್ಚಿತ್ತು.

ಮತ್ತೆ ಶೋಧ: ಎನ್‌ಐಎ ಅಧಿಕಾರಿಗಳ ತಂಡವು ಸೋಮವಾರ ಮಧ್ಯರಾತ್ರಿ ಮತ್ತೆ ರಾಮನಗರದಲ್ಲಿ ಶೋಧ ನಡೆಸಿತು ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದ ವೇಳೆ ಆತನ ಬಳಿಯಲ್ಲಿ ಇದ್ದ ಲ್ಯಾಪ್‌ಟಾಪ್ ಅನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮರೆತಿದ್ದರು. ಆರೋಪಿಯ ಪತ್ನಿ ಅದನ್ನು ಬಚ್ಚಿಟ್ಟಿರಬಹುದು ಎಂದು ಶಂಕಿಸಲಾಗಿದೆ.

ಬಾಂಗ್ಲಾದೇಶದವನಾದ ಜಹಿದುಲ್‌ ಇಸ್ಲಾಂ ಮೊದಲಿಗೆ ಅಲ್ಲಿಯೇ ಇದ್ದುಕೊಂಡು ಸ್ಫೋಟಗಳಿಗೆ ಸಂಚು ರೂಪಿಸಿದ್ದ. 2014ರಲ್ಲಿ ಬಿಹಾರದ ಮೂಲಕ ಭಾರತಕ್ಕೆ ಬಂದಿದ್ದ. ನಂತರದಲ್ಲಿ ಶಾಹಿದ್ ಬೀಬಿ ಎಂಬಾಕೆಯನ್ನು ಮದುವೆಯಾಗಿದ್ದ. 2015ರಲ್ಲಿ ಪತ್ನಿಯೊಡನೆ ಕರ್ನಾಟಕಕ್ಕೆ ಬಂದಿದ್ದು, ಸದ್ಯ ಇಬ್ಬರೂ ರಾಮನಗರದಲ್ಲಿ ವಾಸವಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !