ಜಾತ್ಯತೀತ ಸಂದೇಶ ಸಾರಿದ ಸಂತ

7
ಕನಕಪುರದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ವಾಮೀಜಿ ಸ್ಮರಣೆ

ಜಾತ್ಯತೀತ ಸಂದೇಶ ಸಾರಿದ ಸಂತ

Published:
Updated:
Prajavani

ಕನಕಪುರ: ಸಿದ್ಧಗಂಗಾಮಠದ ಶಿವಕುಮಾ‍ರ ಸ್ವಾಮೀಜಿ ಲಿಂಗೈಕೈರಾದ ವಿಷಯ ತಿಳಿದು ನಾಡು ಶೋಕಸಾಗರದಲ್ಲಿ ಮುಳುಗಿ ಕಂಬನಿ ಮಿಡಿದಿದೆ ಎಂದು ಹೋಟೆಲ್‌ ನಾಗರಾಜು ಅಭಿಪ್ರಾಯಪಟ್ಟರು.

ನಗರದ ಚನ್ನಬಸಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಇಡೀ ದೇಶವೇ ಕರ್ನಾಟಕದ ಸಿದ್ಧಗಂಗೆ ಮಠದ ಕಡೆ ನೋಡುವಂತೆ ಮಾಡಿರುವವರು ಶಿವಕುಮಾರ ಸ್ವಾಮೀಜಿ. ಅವರು ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಾಗ ಮಠ ಕಷ್ಟದ ಪರಿಸ್ಥಿತಿಯಲ್ಲಿತ್ತು. ಅಂತಹ ಮಠದಲ್ಲಿ ಪ್ರತಿವರ್ಷ 15ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡುವ ಮೂಲಕ ಬಡವರು, ಶೋಷಿತರು, ದಲಿತರ ಬಾಳಿಗೆ ಬೆಳಕಾಗಿದ್ದಾರೆ. ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಶ್ರೀಮಠವನ್ನು ಉತ್ತುಂಗಕ್ಕೆ ಬೆಳೆಸಿದ್ದಾರೆ ಎಂದು ತಿಳಿಸಿದರು.

ಇತರ ಮಠಗಳ ಬಗ್ಗೆ ಆರೋಪ, ಬೇಸರ ವ್ಯಕ್ತವಾಗಿರುವುದು ಕಾಣಬಹುದು. ಆದರೆ, ಶ್ರೀಗಳ ಬಗ್ಗೆ ಯಾರೂ ಕೂಡ ತಪ್ಪಾಗಿ ಮಾತನಾಡಿದ್ದು ಇಲ್ಲ. ತಮ್ಮ 111ನೇ ವರ್ಷದ ಇಳಿವಯಸ್ಸಿನಲ್ಲೂ ಸಮಾಜದ ಬಗ್ಗೆ ಚಿಂತಿಸುತ್ತಾ ಜೀವನ ನಡೆಸಿದ ಸಾಧಕ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಬಿ.ಆರ್‌.ಗಣೇಶ್‌ ಮಾತನಾಡಿ, 12ನೇ ಶತಮಾನದ ಬಸವಣ್ಣ ಅವರಂತೆ ಜಾತ್ಯತೀತ ಮನೋಭಾವದಿಂದ ಬದುಕಿದವರು. ಮಠದಲ್ಲಿ ಗಂಡು ಮತ್ತು ಹೆಣ್ಣು ಎಂಬ ಜಾತಿ ಬಿಟ್ಟು ಬೇರೆ ಯಾವ ಜಾತಿಯನ್ನು ನೋಡಿದವರಲ್ಲ. ಕರ್ನಾಟಕದಲ್ಲಿ ಜಾತ್ಯತೀತ ಸಂದೇಶ ಸಾರಿದ ಮಹನೀಯ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್‌.ದಿಲೀಪ್‌ ಮಾತನಾಡಿ, ಸ್ವಾಮೀಜಿ ಕಷ್ಟದ ಪರಿಸ್ಥಿತಿಯಲ್ಲಿಯೂ ಮಠವನ್ನು ಮುನ್ನಡೆಸಿಕೊಂಡು ಲಕ್ಷಾಂತರ ಮಂದಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಕಾರಣರಾಗಿದ್ದಾರೆ. ಯಾವ ಸ್ವಾರ್ಥ ಇಲ್ಲದೆ ಅವರು ಮಾಡಿರುವ ಕಾಯಕದಿಂದಲೇ ರಾಷ್ಟ್ರವ್ಯಾಪ್ತಿ ಅವರ ಅಗಲಿಕೆಗೆ ಕಂಬನಿ ಮಿಡಿದಿದೆ ಎಂದರು.

ಜೆ.ಡಿ.ಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ವೀರಶೈವ ತಾಲ್ಲೂಕು ಅಧ್ಯಕ್ಷ ಕೈಲಾಶ್‌ ಶಂಕರ್‌, ನಗರಸಭೆ ಮಾಜಿ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಶ್ರೀಗಳು ಕಲಿಯುಗದಲ್ಲಿ ನಡೆದಾಡುವ ದೇವರಾಗಿದ್ದರು. ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಜನರು ಮುಚ್ಚುವ ಮೂಲಕ ಅವರಿಗೆ ನಿಜ ಅರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅಯ್ಯಪ್ಪಸ್ವಾಮಿ ದೇವಾಲಯದಿಂದ ಹೊರಟ ಸ್ವಾಮೀಜಿ ಭಾವಚಿತ್ರ ಹೊತ್ತ ಮೆರವಣಿ ಎಂ.ಜಿ.ರಸ್ತೆ ಮೂಲಕ ಚನ್ನಬಸಪ್ಪ ವೃತ್ತ, ಕೆ.ಎನ್‌.ಎಸ್.ವೃತ್ತದಲ್ಲಿ ಹಾದು ವೇದಿಕೆ ಕಾರ್ಯಕ್ರಮದವರೆಗೂ ಸಾಗಿ ಬಂದಿತು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಅಭಿಮಾನಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ರಾಜಕೀಯ ಮುಖಂಡರು, ವೀರಶೈವ ಮುಖಂಡರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !