ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಲಾಕ್‌ಡೌನ್‌ನಲ್ಲೂ ಹಸಿ ಹುಲ್ಲು ಮಾರಾಟ ನಿರಾತಂಕ

ನಗರದಲ್ಲಿರುವ ಆಕಳು, ಎಮ್ಮೆ, ಕುದುರೆ, ಆಡು ನಿರಾಳ
Last Updated 3 ಮೇ 2020, 2:33 IST
ಅಕ್ಷರ ಗಾತ್ರ

ವಿಜಯಪುರ: ಲಾಕ್‌ಡೌನ್‌ ಅಡೆತಡೆಗಳ ನಡುವೆಯೂ ದಿನಂಪ್ರತಿ ಹಸಿ ಮೇವು ಪೂರೈಕೆ ಮಾಡುವ ಮೂಲಕ ಬೀದಿ ಬದಿ ವ್ಯಾಪಾರಿಗಳು ನಗರದ ಜಾನುವಾರುಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ಸುಲೇಮಾನ್‌ ಮಸೂತಿ(ಅತ್ತಾವುಲ್ಲಾ ಚೌಕ್‌) ಎದುರು ಹಲವಾರು ವರ್ಷಗಳಿಂದ ಹಸಿ ಮೇವು ಮಾರಾಟ ಮಾಡುತ್ತಿರುವ ಸೀತಾಬಾಯಿ ರಾಠೋಡ, ಶಾಂತಾಬಾಯಿ ರಾಠೋಡ, ಮೇನಕಾ ಬಾಯಿ ಚವ್ಹಾಣ, ಮೌಲಾಲಿ ಬಾಗಲಕೋಟೆ, ನಜೀರ್‌ ನದಾಫ್‌, ರುಕ್ಮಾಬಾಯಿ ರಾಠೋಡ ಅವರು ರೈತರ ಹೊಲಗಳಿಂದ ಹಸಿ ಹುಲ್ಲು ತಂದು ಮಾರಾಟ ಮಾಡುವ ಮೂಲಕ ಆಕಳು, ಆಡು, ಎಮ್ಮೆ ಕುದುರೆಗಳು ನಿರಾಳವಾಗುವಂತೆ ಮಾಡಿದ್ದಾರೆ.

ರಫೀಕ್‌ ಎಂಬುವವರು ಜೋಳದ ಒಣ ಕಣಕಿಯನ್ನು ಮಾರಾಟ ಮಾಡುವ ಮೂಲಕ ಜಾನುವಾರುಗಳ ಹೊಟ್ಟೆ ತುಂಬಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸೀತಾಬಾಯಿ ರಾಠೋಡ, ಲಾಕ್‌ಡೌನ್‌ ನಿರ್ಬಂಧಗಳಿವೆ. ಜೊತೆಗೆ ಕೊರೊನಾ ಸೋಂಕು ಹರಡುವ ಭೀತಿ ಇದೆ. ಮನೆಯಲ್ಲಿ ವ್ಯಾಪಾರ ಮಾಡುವುದು ಬೇಡ ಎಂದರೂ ಸಹ ಇಂತಹ ಸಂದರ್ಭದಲ್ಲಿ ಹಸಿ ಮೇವು ಮಾರಾಟ ಮಾಡುವುದನ್ನು ನಿಲ್ಲಿಸಿದರೆ ನಮ್ಮನ್ನೇ ಆಶ್ರಯಿಸಿರುವ ಜಾನುವಾರು ಸಾಕಾಣಿಕೆದಾರರಿಗೆ ತೊಂದರೆಯಾಗುತ್ತದೆ ಎಂದು ಒಂದು ದಿನವೂ ಬಿಡದೇ ಹಸಿ ಹುಲ್ಲು ತಂದು ಮಾರಾಟ ಮಾಡುತ್ತಿದ್ದೇವೆ ಎಂದರು.

ಎಕರೆಗೆ ₹10 ಸಾವಿರದಿಂದ ₹12 ಸಾವಿರಕ್ಕೆ ರೈತರ ಹೊಲವನ್ನು ಪಡಾ ಹಿಡಿಯುತ್ತೇವೆ. ಅಲ್ಲಿ ಸಿಗುವ ಹಸಿ ಹುಲ್ಲನ್ನು ವಾಹನಗಳ ಮೂಲಕ ತಂದು ನಗರದಲ್ಲಿ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.

ವಿಜಯಪುರ ನಗರಕ್ಕೆ ಸಮೀಪ ಇರುವ ಬರಡಗಿ, ಹಂಚಿನಾಳ, ಅತಾಲಟ್ಟಿ, ಕಜಾಪುರ, ಜುಮನಾಳ ಇಟ್ನಳ್ಳಿ, ಶಿವಗಿರಿ ಭಾಗದ ರೈತರ ಜಮೀನುಗಳಿಂದ ಹಸಿ ಜೋಳದ ಗಿಡ, ತೊಗರಿ ತಪ್ಪಲ, ದ್ರಾಕ್ಷಿ ತಪ್ಪಲ, ಮೆಕ್ಕೆ ಜೋಳದ ಬಾಟಿ(ತೆನೆ), ಬಿಳಿ ಜೋಳದ ಬಾಟಿಯನ್ನು ತಂದು ಮಾರುತ್ತೇವೆ ಎಂದರು.

ನಗರದಲ್ಲಿ ಆಡು, ಆಕಳು, ಎಮ್ಮೆ, ಕುದುರೆ ಸಾಕಿರುವವರು ನಮ್ಮ ಬಳಿ ಬಂದು ಕೊಂಡೊಯ್ಯುತ್ತಾರೆ. ₹20ಕ್ಕೆ ಮೂರು ಸೂಡು ಕೊಡುತ್ತೇವೆ ಎಂದು ಹೇಳಿದರು.

ಪ್ರತಿ ದಿನ ಬೆಳಿಗ್ಗೆ 7ರಿಂದ ರಾತ್ರಿ 9ರ ವರೆಗೂ ಮಾರಾಟ ಮಾಡುತ್ತೇವೆ. ಸುಮಾರು 200 ಜನರು ಖರೀದಿಗೆ ಬರುತ್ತಾರೆ. ಲಾಕ್‌ಡೌನ್‌ ಇರುವುದರಿಂದ ಬರುವವರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ ಎಂದರು.

ನಮ್ಮ ಖರ್ಚು ಕಳೆದ ದಿನವೊಂದಕ್ಕೆ ₹500 ಸಿಗುತ್ತದೆ. ಇದ್ದುದರಲ್ಲೇ ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.

* ನಮಗೆ ಕೂರಲು ವ್ಯವಸ್ಥೆ ಇಲ್ಲ, ರಸ್ತೆ ಪಕ್ಕದಲ್ಲಿ ಬಿಸಿಲು, ಮಳೆಯಲ್ಲೇ ವ್ಯಾಪಾರ ಮಾಡುವ ಸ್ಥಿತಿ ಇದೆ. ಪಾಲಿಕೆಯಿಂದ ನೆರಳು ಆಸನದ ಸೌಲಭ್ಯ ಕಲ್ಪಿಸಿದ್ದರೆ ಅನುಕೂಲವಾಗುತ್ತದೆ.

- ಸುಲೇಮಾನ್‌ ಮಜ್ಜಿದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT