ಶನಿವಾರ, ಆಗಸ್ಟ್ 24, 2019
23 °C
ಮನದಾಳ ತೆರೆದಿಟ್ಟ ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ.ದಯಾನಂದ

ನನಸಾಗದ ಗಾಂಜಾ ಮುಕ್ತ ಜಿಲ್ಲೆ ಕನಸು

Published:
Updated:
Prajavani

ಶಿವಮೊಗ್ಗ: ಜಿಲ್ಲೆಯ ಹಲವು ವಿದ್ಯಾರ್ಥಿಗಳು ಗಾಂಜಾ ವ್ಯಸನಿಗಳಾಗುತ್ತಿದ್ದಾರೆ. ಭವಿಷ್ಯ ಕಂಡುಕೊಳ್ಳುವ ಮೊದಲೇ ಅವರ ಬದುಕು ಕಮರುತ್ತಿದೆ. ಇಂತಹ ಜಾಲಕ್ಕೆ ಕಡಿವಾಣ ಹಾಕಲು ಸಂಕಲ್ಪ ಮಾಡಿದ್ದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮನದಾಳ ತೆರೆದಿಟ್ಟರು.

ಪ್ರೆಸ್‌ಟ್ರಸ್ಟ್‌ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಾಂಜಾ ಮುಕ್ತ ಸಮಾಜ ನಿರ್ಮಾಣಕ್ಕೆ ಅಧಿಕಾರಿಗಳು, ವೈದ್ಯರು, ಮಾನಸಿಕ ತಜ್ಞರ ಜತೆ ಸಭೆ ನಡೆಸಲಾಗಿತ್ತು. ಯುವಜನರ ಮನಸು ಬದಲಿಸಲು ಸೂಕ್ತ ಯೋಜನೆ ರೂಪುಗೊಂಡಿತ್ತು. ಆದರೆ, ಅದು ಕಾರ್ಯಗತವಾಗುವ ಮೊದಲೆ ವರ್ಗಾವಣೆಯಾಯಿತು ಎಂದರು.

‘ಶರಾವತಿ ಸಂತ್ರಸ್ಥರಿಗೆ ಸಹಾಯ ಮಾಡಲು ಅರಣ್ಯ ಅಧಿಕಾರಿಗಳ ಜತೆ ಚರ್ಚಿಸಲಾಗಿತ್ತು. 70 ವರ್ಷಗಳಿಂದ ಜೀವಂತವಾಗಿರುವ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕನಸು ಕಂಡಿದ್ದೆ. ಆ ಕೆಲಸ ಮಾಡಲೂ ಸಾಧ್ಯವಾಗಲಿಲ್ಲ ಎಂಬ ನೋವು ನನಗಿದೆ’ ಎಂದರು.

ಅಲೆಮಾರಿಗಳಿಗೆ ಬಿಪಿಎಲ್ ಕಾರ್ಡ್‌ ವಿತರಿಸಲು ವಸತಿ ಪ್ರಮಾಣ ಪತ್ರ ನೀಡಿದ್ದೆ. ಅವರಿಗೆ ಬದುಕು ಕಟ್ಟಿಕೊಡಬೇಕಿತ್ತು. ಹೀಗೆ ಈ ಮೂರು ಮೂರ್ಣವಾಗದೇ ಕೆಲಸ ಉಳಿದವು ಎಂದು ಭಾವುಕರಾದರು.

‘364 ದಿನಗಳೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜನರ ಜತೆ ಬೆರೆತರೆ ಸುಖ ಮತ್ತು ತೃಪ್ತಿ ಇರುತ್ತದೆ. ಹೊಗಳಿಕೆ ಕಿರೀಟವಲ್ಲ, ಅದು ನಮ್ಮ ಕೆಲಸಗಳಿಗೆ ಪ್ರೇರಕ. ಕಡತಗಳ ವಿಲೇವಾರಿ, ರಸ್ತೆಗಳ ರಿಪೇರಿ ಇವಷ್ಟೇ ಕೆಲಸವಲ್ಲ. ಇಡೀ ಸಮಾಜದ ಪರಿವರ್ತನೆಗೆ ಚಿಂತಿಸುವುದು ಒಬ್ಬ ಒಳ್ಳೆಯ ಅಧಿಕಾರಿಯ ಲಕ್ಷಣ. ಮುಖ್ಯವಾಗಿ ಯುವಕರ ಮನಸ್ಸು ತಲುಪಬೇಕಿದೆ. ಸಮಾಜವನ್ನು ಸಾಂಸ್ಕೃತಿಕ, ಸಾಹಿತ್ಯ ಹಾಗೂ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದೇ ಅಧಿಕಾರಿಗಳ ಕೆಲಸ ಎಂದು ವಿಶ್ಲೇಷಿಸಿದರು.

ಹಿರಿಯ ಪತ್ರಕರ್ತರಾದ ಗೋಪಾಲ್‌ ಯಡಗೆರೆ, ಹೊನ್ನಾಳಿ ಚಂದ್ರಶೇಖರ್, ರಾಮಚಂದ್ರ ಗುಣಾರಿ, ಪ್ರಸನ್ನ, ಎಸ್.ಆರ್‌.ಹಾಲಸ್ವಾಮಿ ಮಾತನಾಡಿದರು. ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

Post Comments (+)