ಸರಣಿ ಕಳ್ಳತನ: ಬೆಚ್ಚಿಬಿದ್ದ ಜನತೆ

7
ಆರು ಮಳಿಗೆಗಳ ಶೆಟರ್ ಮುರಿದು ಕಳವು; ಬುಧವಾರ ನಸುಕಿನಲ್ಲಿ ಕೃತ್ಯ

ಸರಣಿ ಕಳ್ಳತನ: ಬೆಚ್ಚಿಬಿದ್ದ ಜನತೆ

Published:
Updated:
Deccan Herald

ರಾಮನಗರ: ನಗರದ ಆರಕ್ಕೂ ಹೆಚ್ಚು ಅಂಗಡಿ ಮಳಿಗೆಗಳಲ್ಲಿ ಬುಧವಾರ ನಸುಕಿನಲ್ಲಿ ಕಳ್ಳತನವಾಗಿದೆ. ಮುಖ್ಯಮಂತ್ರಿ ಭೇಟಿಗೆ ಮುನ್ನಾ ದಿನದಂದು ನಡೆದಿರುವ ಸರಣಿ ಕಳವಿನ ಸಂಗತಿಯು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ನಗರದ ಟೌನ್‌ ಠಾಣೆ ಹಾಗೂ ಐಜೂರು ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳತನಗಳು ನಡೆದಿವೆ. ಮಾಗಡಿ ರಸ್ತೆಯ ರಾಯರದೊಡ್ಡಿ ಬಳಿಯ ಮೂರು ಕಿರಾಣಿ ಅಂಗಡಿಗಳು, ವಿವೇಕಾನಂದ ನಗರದಲ್ಲಿ ಒಂದು ಸಿಮೆಂಟ್ ಅಂಗಡಿ, ಸಿಎಂಸಿ ಕಾಂಪ್ಲೆಕ್ಸ್ ನಲ್ಲಿ ಒಂದು ರಸಗೊಬ್ಬರ ಮಾರಾಟ ಮಳಿಗೆ ಹಾಗೂ ದಿನಸಿ ಅಂಗಡಿಯಲ್ಲಿ ಶೆಟರ್‌ಗಳನ್ನು ಮೀಟಿ ಒಳನುಗ್ಗಿದ ಕಳ್ಳರು ಕೈಗೆ ಸಿಕ್ಕಿದ್ದನ್ನು ದೋಚಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಒಂದೇ ಗ್ಯಾಂಗ್‌: ಬೈಕ್‌ನಲ್ಲಿ ಓಡಾಡುತ್ತಾ ಮೂವರಿಂದ ನಾಲ್ಕು ಜನರ ತಂಡವು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕಳ್ಳರ ಕೈಚಳಕದ ದೃಶ್ಯಗಳು ಹಾಗೂ ಅವರ ಚಲನವಲನಗಳು ಕಳುವಾದ ಅಂಗಡಿಗಳು ಹಾಗೂ ಅವುಗಳಿಗೆ ಸಮೀಪದ ಕಟ್ಟಡಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಮಾಗಡಿ ರಸ್ತೆಯಲ್ಲಿ ಇರುವ ಅನ್ನಪೂರ್ಣೇಶ್ವರಿ ದಿನಸಿ ಅಂಗಡಿಗೆ ಬುಧವಾರ ಮುಂಜಾನೆ 3.30 ಗಂಟೆ ಸುಮಾರಿಗೆ ಧಾವಿಸುವ ಕಳ್ಳರು ಮೊದಲಿಗೆ ಕಬ್ಬಿಣದ ರಾಡ್‌ನಿಂದ ಶೆಟರ್‌ನ ಎರಡೂ ಕಡೆಯ ಲಾಕ್‌ಗಳನ್ನು ಮೀಟಿ ಕ್ಷಣಾರ್ಧದಲ್ಲಿ ಬೀಗ ಮುರಿದಿದ್ದಾರೆ. ಬಳಿಕ ಒಳಗೆ ನುಗ್ಗಿ ಅಲ್ಲಿನ ಗಲ್ಲಪೆಟ್ಟಗೆಯ ಶೋಧ ನಡೆಸಿದ್ದಾರೆ. ಈ ಎಲ್ಲವೂ ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.  ಉಳಿದ ಅಂಗಡಿಗಳಲ್ಲಿಯೂ ಇದೇ ಮಾದರಿಯಲ್ಲಿ ಕಳ್ಳತನ ನಡೆದಿದೆ.

ಗುರುತು ಪತ್ತೆ: ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳರ ಚಹರೆ ಸ್ಪಷ್ಟವಾಗಿದ್ದು, ವ್ಯಕ್ತಿಗಳ ಗುರುತು ಹಿಡಿಯುವಂತೆ ಇದೆ. ಅಲ್ಲಲ್ಲಿ ಬೆಳರಚ್ಚುಗಳೂ ಪೊಲೀಸರಿಗೆ ದೊರೆತಿವೆ. ಈ ಕಳ್ಳರು ಇಲ್ಲಿಯವರೋ ಇಲ್ಲ ಹೊರಗಿನಿಂದ ಬಂದವರೋ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ರಾತ್ರಿ ಗಸ್ತಿನಲ್ಲಿದ್ದ ಬೀಟ್‌ ಪೊಲೀಸರಿಗೆ ಈ ಗ್ಯಾಂಗ್‌ ಕಾಣಿಸಿಕೊಂಡಿತ್ತು. ಅವರನ್ನು ಬೆನ್ನು ಹತ್ತಲಾಯಿತಾದರೂ ಕೈಗೆ ಸಿಗದೇ ಪರಾರಿಯಾದರು. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಬೆಳರಚ್ಚು ತಜ್ಞರು ಹಾಗೂ ಪೊಲೀಸ್‌ ಸಿಬ್ಬಂದಿ ಕಳವಾದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸರ ನಿರ್ಲಕ್ಷ್ಯ ಆರೋಪ ಈಚೆಗೆ ನಗರದಲ್ಲಿ ಸರಣಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಆರೋಪಿಗಳ ಪತ್ತೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆಯೂ ಇದೇ ಮಾದರಿಯಲ್ಲಿ ಕಳ್ಳತನ ನಡೆದಿತ್ತು.  ಕಳ್ಳರು ಹೆದ್ದಾರಿ ಪಕ್ಕದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡಿದ್ದರು. ಐದಕ್ಕೂ ಹೆಚ್ಚು ಅಂಗಡಿಗಳಲ್ಲಿ ಕೈಚಳಕ ತೋರಿ ಪರಾರಿಯಾಗಿದ್ದರು. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಅಂಗಡಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಿದ್ದೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ.

ನಗರ ವ್ಯಾಪ್ತಿಯಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯು ಜಾರಿಯಲ್ಲಿದೆ. ಹೀಗಿದ್ದೂ ಪದೇ ಪದೇ ಕಳ್ಳತನವಾಗುತ್ತಿರುವುದಕ್ಕೆ ಇಲಾಖೆಯ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರಾದ ನೀಲಕಂಠಸ್ವಾಮಿ ಎಂಬುವರು ದೂರಿದರು.

ಅಕ್ಕಿಮೂಟೆ ಕದ್ದೊಯ್ದರು!
ರಾಯರದೊಡ್ಡಿ ವೃತ್ತ ಸಮೀಪ ಇರುವ ಅನ್ನಪೂರ್ಣೇಶ್ವರಿ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಅಕ್ಕಿಮೂಟೆಗಳನ್ನೇ ಕದ್ದು ಬೈಕಿನಲ್ಲಿ ಸಾಗಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಂಜಾನೆ 3.30ರ ಸುಮಾರಿಗೆ ಕಳ್ಳನೊಬ್ಬ ಒಳಪ್ರವೇಶಿಸಿ ಎರಡು ಅಕ್ಕಿಮೂಟೆಗಳನ್ನು ಎತ್ತಿಕೊಂಡು ಹೊರಬರುತ್ತಾನೆ. ಆಚೆ ಇಬ್ಬರು ಕಾವಲಿದ್ದು, ಮೂವರೂ ಅಲ್ಲಿಂದ ಬೈಕಿನಲ್ಲಿ ಮೂಟೆಗಳನ್ನು ಎತ್ತಿಕೊಂಡು ಹೊರಡುತ್ತಾರೆ. ಕಳೆದ ತಿಂಗಳಷ್ಟೇ ಇದೇ ಅಂಗಡಿಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ನಡೆದಿತ್ತು.

* * * *
ನಮ್ಮ ಅಂಗಡಿಯಲ್ಲಿ ತಿಂಗಳಲ್ಲಿ ಎರಡನೇ ಬಾರಿ ಕಳ್ಳತನವಾಗಿದೆ. ಪೊಲೀಸರು ನಿರ್ಲಕ್ಷ್ಯ ವಹಿಸದೇ ಆರೋಪಿಗಳನ್ನು ಬಂಧಿಸಬೇಕು
ಮಂಜುನಾಥ್‌, ಕಿರಾಣಿ ಅಂಗಡಿ ಮಾಲೀಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !