ತಿಪಟೂರು | ತೆನೆ ಹೊರಲು ಶಾಂತಕುಮಾರ್ ಸಜ್ಜು

ತಿಪಟೂರು: ತಿಪಟೂರು ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಸಿಗಬಹುದು ಎಂದು ಕಾದು ಸುಸ್ತಾದ ಕೆ.ಟಿ.ಶಾಂತಕುಮಾರ್ ಕೊನೆಗೂ ಪಕ್ಷ ತೊರೆದು ಜೆಡಿಎಸ್ ಸೇರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಜೆಡಿಎಸ್‌ನಿಂದ ಸ್ಪರ್ಧಿಸಲು ಟಿಕೆಟ್ ಸಿಗುವುದು ಖಚಿತವಾಗಿದೆ. ಹಾಗಾಗಿ ಪಕ್ಷ ಸೇರ್ಪಡೆ ಪ್ರಕಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ದಳಪತಿಗಳು ಪ್ರಕಟಿಸಿದ್ದರೂ, ತಿಪಟೂರು ಕ್ಷೇತ್ರ ಖಾಲಿ ಉಳಿಸಿಕೊಂಡಿದ್ದರು. ಜೆಡಿಎಸ್‌ನಿಂದ ಕಣಕ್ಕಿಳಿಸಲು ಸಮರ್ಥ ಅಭ್ಯರ್ಥಿಗಳು ಇಲ್ಲವಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್– ಬಿಜೆಪಿ ನಡುವೆ ಮಾತ್ರ ಪೈಪೋಟಿ ಎಂಬ ವಾತಾವರಣ ನಿರ್ಮಾಣವಾಗಿತ್ತು. ಈಗ ಶಾಂತಕುಮಾರ್ ಪಕ್ಷಕ್ಕೆ ಬಂದಿದ್ದು, ಸ್ಪರ್ಧಿಸುವುದು ಖಚಿತವಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್ ಕೊಡದಿದ್ದರೆ ಪಕ್ಷ ತೊರೆಯುವುದಾಗಿ ಹೇಳಿದ್ದರು. ಟಿಕೆಟ್ ಸಿಗುವುದು ಖಚಿತವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರುತ್ತಿದ್ದಾರೆ. ಫೆ. 3ರಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಆಗಲಿದ್ದಾರೆ. ತಾಲ್ಲೂಕಿನ ಕಾರ್ಯಕರ್ತರು, ಬೆಂಬಲಿಗರ ಒತ್ತಾಸೆಯಂತೆ ಪಕ್ಷಕ್ಕೆ ಮರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಿಪಟೂರಿಗೆ ಬಂದ ಹೊಸದರಲ್ಲಿ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಕೆಲವೇ ತಿಂಗಳಲ್ಲಿ ಪಕ್ಷ ತೊರೆದಿದ್ದರು. ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡು ರಾಷ್ಟ್ರ, ರಾಜ್ಯ ಮಟ್ಟದ ನಾಯಕರೊಂದಿಗೆ ಸಂಪರ್ಕ ಸಾಧಿಸಿದ್ದರು. ಅಲ್ಲೂ ನೆಲೆ ನಿಲ್ಲದೆ ಬಿಜೆಪಿ ತೊರೆದಿದ್ದರು. ಪಕ್ಷ ಬಿಟ್ಟ ಮೇಲೆ ಯಾವ ಪಕ್ಷಕ್ಕೂ ಸೇರ್ಪಡೆಯಾಗದೆ, ‘ಸಮಾಜ ಸೇವೆ’ಗೆ ಸೀಮಿತಗೊಂಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು.
ಕಳೆದ ಲೋಕಸಭಾ ಚುನಾವಣೆ ನಂತರದ ಬೆಳವಣಿಗೆಯಲ್ಲಿ ಲೋಕೇಶ್ವರ ಜೆಡಿಎಸ್ ತೊರೆದಿದ್ದು, ತಾಲ್ಲೂಕಿನಲ್ಲಿ ಪಕ್ಷಕ್ಕೆ ನಾವಿಕನಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಇರುವ ಸ್ಥಳೀಯ ಮುಖಂಡರಲ್ಲೂ ಒಗ್ಗಟ್ಟು ಇಲ್ಲವಾಗಿತ್ತು. ರಿಯಲ್ ಎಸ್ಟೇಟ್ ಕುಳಗಳು, ಸ್ಥಳೀಯರಲ್ಲದವರು ಟಿಕೆಟ್ ಆಕಾಂಕ್ಷಿಗಳಾಗಿ ಇಲ್ಲಿಗೆ ಬರಲು ಆರಂಭಿಸಿದ್ದರೂ ಎಚ್.ಡಿ.ಕುಮಾರಸ್ವಾಮಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದರು. ಇದೀಗ ತಾಲ್ಲೂಕಿನ ಹಿರಿಯ ಮುಖಂಡರ ಮನವೊಲಿಸಿ, ಕಾರ್ಯಕರ್ತರನ್ನು ಒಗ್ಗೂಡಿಸಿ ಶಾಂತಕುಮಾರ್ ಚುನಾವಣೆ ಎದುರಿಸಬೇಕಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.