ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಯೋಜನೆಗಳು ಪರಿಸರಕ್ಕೆ ಮಾರಕ

ಸಹ್ಯಾದ್ರಿ ವಿಜ್ಞಾನ ಕಾಲೇಜು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್ ಎಚ್ಚರಿಕೆ
Last Updated 25 ಜೂನ್ 2019, 11:22 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರ ರೂಪಿಸುವ ಹಲವು ಯೋಜನೆಗಳು ಅವೈಜ್ಞಾನಿಕವಾಗಿವೆ.ಇಂತಹ ಮಾರಕ ಯೋಜನೆಗಳನ್ನು ರೂಪಿಸುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್ ಸಲಹೆ ನೀಡಿದರು.

ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಯೋಜನೆ ರೂಪಿಸುವ ಮೊದಲು ಸಾರ್ವಜನಿಕ ಸಭೆಗಳನ್ನು ಆಯೋಜಿಸಬೇಕು. ಜನರ ಅಭಿಪ್ರಾಯ ಪಡೆಯಬೇಕು. ಹಾಗೆ ಮಾಡಿದರೆ ಅನುಷ್ಠಾನ ಪೂರ್ವದಲ್ಲೇ ಯೋಜನೆಯ ಲಾಭ ನಷ್ಟ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜನರ ಅಭಿಪ್ರಾಯಕ್ಕೂ ಮನ್ನಣೆ ದೊರೆಯುತ್ತದೆ ಎಂದರು.

ಸರ್ಕಾರ ಸುಸ್ಥಿರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಬೆಂಗಳೂರಿಗೆ ಮಲೆನಾಡಿನಿಂದ ನೀರು ತೆಗೆದುಕೊಂಡು ಹೋಗುವ ಅವೈಜ್ಞಾನಿಕ ಯೋಜನೆ ಕೈಬಿಡಬೇಕು. ಇಂತಹ ಯೋಜನೆಗಳನ್ನು ರೂಪಿಸಿದರೆ ಮಲೆನಾಡಿನ ಪರಿಸರವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರಿಗೆ ಬೃಹತ್‌ ಪ್ರಮಾಣದಲ್ಲಿ ವಲಸೆ ಬರುವವರಿಗೆ ಕಡಿವಾಣ ಹಾಕಬೇಕು. ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಸಪಡಿಸಬೇಕು. ಕೃಷಿಗೆ ಪೂರಕ ಯೋಜನೆ ರೂಪಿಸಬೇಕು. ಅಲ್ಲಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡಬೇಕು. ಆಗ ಬೃಹತ್ ನಗರಗಳಿಗೆ ವಲಸೆ ಕಡಿಮೆಯಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಮಲೆನಾಡಿನ ಜನರು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಸಾಕಷ್ಟು ಅರಣ್ಯ ಕಳೆದುಕೊಂಡಿದ್ದಾರೆ. ಇಂತಹ ಯೋಜನೆಗಳು ಜಾರಿಯಾದರೆ ಸಂಪೂರ್ಣ ಪಶ್ಚಿಮ ಘಟ್ಟ ನಾಶವಾಗುತ್ತದೆ. ಜೀವ ವೈವಿಧ್ಯ ಕಣ್ಮರೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ವಿನಯ್, ಜ್ಯೋತಿ ಅರಳಪ್ಪ, ಭಾರತಿ ರಾಮಕೃಷ್ಣ, ಜಗದೀಶ್, ದೇವನೂರು ಜಯಣ್ಣ, ಸ್ಮಿತಾ, ಮೋಹನ್, ಶೈಲಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT