ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಸಂತ್ರಸ್ತರಿಗೆ ಸಂಕಷ್ಟ

ಪುನರ್‌ವಸತಿ ಪ್ರಸ್ತಾವಕ್ಕೆ ಸುಪ್ರೀಂಕೋರ್ಟ್ ಪೂರ್ವಾನುಮತಿ ಕಡ್ಡಾಯ
Last Updated 23 ನವೆಂಬರ್ 2018, 18:53 IST
ಅಕ್ಷರ ಗಾತ್ರ

ಶಿವಮೊಗ್ಗ: ಐದೂವರೆ ದಶಕಗಳಿಂದ ಸೂಕ್ತ ನೆಲೆ ಕಂಡುಕೊಳ್ಳಲು ಪರಿತಪಿಸುತ್ತಿದ್ದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಭಾಗವಾದ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದಿಂದ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್‌ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಸಲ್ಲಿಸುವ ಎಲ್ಲ ಪ್ರಸ್ತಾವನೆಗಳಿಗೂ ಇನ್ನು ಮುಂದೆ ಸುಪ್ರೀಂ ಕೋರ್ಟ್‌ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್‌.ಸಿ. ರಾಜೇಂದ್ರಕುಮಾರ್ ನ. 5ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.

1958–64ರ ಅವಧಿಯಲ್ಲಿ ನಿರ್ಮಾಣವಾದ ಶರಾವತಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಇವರೆಲ್ಲ ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್ ನೆಲೆ ಕಂಡುಕೊಂಡಿದ್ದರು. ಅವರ ಪುನರ್ವಸತಿಗಾಗಿಯೇ ಅಂದಿನ ಭಾರತ ಸರ್ಕಾರ 8 ಸಾವಿರ ಎಕರೆಗೂ ಹೆಚ್ಚು ಅರಣ್ಯಭೂಮಿ ಮೀಸಲಿಟ್ಟಿತ್ತು. ಆ ಸ್ಥಳದಲ್ಲಿ ಸಂತ್ರಸ್ತರು ನೆಲೆ ನಿಂತು, ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದರೂ, ಅವರ ಅನುಭವದಲ್ಲಿದ್ದ ಆ ಭೂಮಿಯ ಹಕ್ಕು ಸಿಕ್ಕಿರಲಿಲ್ಲ.

ಎರಡು ವರ್ಷಗಳ ಹಿಂದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್‌ಗೋಪಾಲ್, ಅಂದಿನ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಅವರ ಸತತ ಪ್ರಯತ್ನದ ಫಲವಾಗಿ 6,459 ಎಕರೆ ಬಿಡುಗಡೆ ಮಾಡಲಾಗಿತ್ತು. 2 ಸಾವಿರಕ್ಕೂ ಹೆಚ್ಚು ಕುಟುಂಬಗಳ ಹೆಸರಿಗೆ 6 ಸಾವಿರ ಎಕರೆ ಹಂಚಿಕೆ ಮಾಡಲಾಗಿತ್ತು. ಹಕ್ಕುಪತ್ರ, ಪಹಣಿ ವಿತರಿಸಲಾಗಿತ್ತು. ಇನ್ನೂ ಸಾವಿರಾರು ಜನರು ಭೂ ಹಕ್ಕಿನ ನಿರೀಕ್ಷೆಯಲ್ಲಿ ಇದ್ದರು. ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹೊರಡಿಸಿರುವ ಈ ಆದೇಶ ಅವರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ.

ಮುಳುಗಡೆಯ ಇತಿಹಾಸ: ಪ್ರಪಂಚದ ಯಾವುದೇ ಭಾಗದಲ್ಲಿ ಜಲಾಶಯಗಳ ನಿರ್ಮಾಣಕ್ಕಾಗಿ ಅಲ್ಲಿನ ಜನ ವಸತಿ ಪ್ರದೇಶವನ್ನು ಒಮ್ಮೆ ಮಾತ್ರ ಕಳೆದುಕೊಂಡಿದ್ದಾರೆ. ಆದರೆ, ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಜನರನ್ನು ಜಲಾಶಯಗಳ ನಿರ್ಮಾಣಕ್ಕಾಗಿಯೇ ಹಲವು ಬಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಕ್ಕಲೆಬ್ಬಿಸಲಾಗಿದೆ.

ಮಲೆನಾಡಿನ ಜೀವನದಿ ಶರಾವತಿಗೆ ಸ್ವಾತಂತ್ರ್ಯಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64ರ ಅವಧಿಯಲ್ಲಿ ಲಿಂಗನಮಕ್ಕಿ, ನಂತರ ಚಕ್ರ–ಸಾವೇಹಕ್ಲು, ಮಾಣಿ ನಿರ್ಮಾಣವಾದವು. ಮತ್ತೊಂದು ತುದಿಯಲ್ಲಿ ನೀರಾವರಿ ಉದ್ದೇಶಕ್ಕೆ 1960ರ ದಶಕದಲ್ಲಿ ಭದ್ರಾ ನದಿಗೆ ಲಕ್ಕವಳ್ಳಿ ಬಳಿ, ತುಂಗಾನದಿಗೆ ಗಾಜನೂರು ಬಳಿ ಅಣೆಕಟ್ಟೆ ನಿರ್ಮಿಸಲಾಯಿತು.

‘1960ರಿಂದ 1980ರವರೆಗಿನ ಎರಡು ದಶಕಗಳ ಅವಧಿಯಲ್ಲಿ ಜಲಾಶಯಗಳ ಕಾರಣಕ್ಕಾಗಿ 20 ಸಾವಿರಕ್ಕೂ ಹಚ್ಚು ಕುಟುಂಬಗಳು ನೆಲೆ ಕಳೆದುಕೊಂಡಿವೆ. ನಾವೆಲ್ಲ ನೆಲೆಸಿರುವ ಬಹುತೇಕ ಸ್ಥಳ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ, ಅಭಯಾರಣ್ಯಗಳ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ, ಸುಪ್ರೀಂಕೋರ್ಟ್‌ ಪೂರ್ವಾನುಮತಿ ಪಡೆಯುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಸಮಯವೂ ಹಿಡಿಯುತ್ತದೆ. ಸರ್ಕಾರದ ಈ ಆದೇಶ ಸಂತ್ರಸ್ತರ ಪಾಲಿಕೆ ಉರುಳಾಗಲಿದೆ’ ಎಂದು ಅಳಲು ತೋಡಿಕೊಂಡರು ಮುಳುಗಡೆ ಸಂತ್ರಸ್ತ ಬೀರಾನಾಯ್ಕ.

‘ಇದುವರೆಗೆ ಬಿಡುಗಡೆಯಾಗಿರುವ ಭೂಮಿ 6ರಿಂದ 7 ಸಾವಿರ ಎಕರೆ. ಇನ್ನೂ ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ಸಂತ್ರಸ್ತರಿಗೆ ದೊರಕಿಸಬೇಕಿದೆ. ಸರ್ಕಾರ ತಕ್ಷಣ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸುತ್ತಾರೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್.

ಇದುವರೆಗೂ ನೀಡಿದ ಭೂಮಿ (ಎಕರೆಗಳಲ್ಲಿ)

ಮೊದಲ ಹಂತ: 2890.36

ಎರಡನೇ ಹಂತ: 1801.12

ಮೂರನೇ ಹಂತ: 1767.23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT