ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳ ಅಧ್ವಾನಕ್ಕೆ ಬೇಸತ್ತ ಜನ

ಕಿತ್ತುಹೋದ ವಾಕಿಂಗ್‌ ಪಾಥ್, ಮುರಿದಿರುವ ಮಕ್ಕಳ ಆಟಿಕೆಗಳು
Last Updated 14 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದಲ್ಲಿ ಗಾಂಧಿ ಉದ್ಯಾನ ಸೇರಿ ಅನೇಕ ಬಡಾವಣೆಗಳಲ್ಲಿ ಸಮೃದ್ಧವಾದ ಹಸಿರು ಹಾಗೂ ತಂಪಾದ ವಾತಾವರಣವನ್ನು ಉಳಿಸಿಕೊಳ್ಳಲು ಪಾಲಿಕೆ ಉದ್ಯಾನಗಳನ್ನೇನೋ ನಿರ್ಮಿಸಿದೆ. ಆದರೆ, ನಿರ್ವಹಣೆ ಕೊರತೆಯಿಂದ ಇಂತಹ ಅನೇಕ ಹಸಿರು ತಾಣಗಳು ಪ್ರಶಾಂತತೆ ಬಯಸಿ ಬರುವವರ ಮನಕೆ ಮುದ ನೀಡುವ ಬದಲು ಬೇಸರ ಮೂಡಿಸುವಂತಿವೆ.

ಕೆಲಸದ ಒತ್ತಡದಿಂದ ಒಂದಷ್ಟು ವಿರಾಮಕ್ಕಾಗಿ ಉದ್ಯಾನಗಳನ್ನು ಹೊಕ್ಕರೆ ತಂಗಾಳಿ, ಸೊಂಪಾದ ನೆರಳಿನ ಬದಲಿಗೆ ಕಸದ ರಾಶಿ, ದೂಳು, ಕಿತ್ತುಹೋದ ವಾಕಿಂಗ್‌ ಪಾಥ್, ತುಕ್ಕು ಹಿಡಿದ ಕಸದ ಬುಟ್ಟಿಗಳು... ಹೀಗೆ ಒಂದೊಂದು ಉದ್ಯಾನಗಳಲ್ಲೂ ಒಂದೊಂದು ಕತೆಗಳಿವೆ.

ಪ್ರತಿ ವಾರ್ಡ್‌ನಲ್ಲೂ ಸಾರ್ವಜನಿಕ ಉದ್ಯಾನಗಳಿವೆ. ಬಹುತೇಕ ಕಡೆ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ, ವ್ಯಾಯಾಮಕ್ಕೆ, ಯೋಗ ಮತ್ತು ಮಕ್ಕಳ ಆಟೋಟಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಉದ್ಯಾನಗಳ ಸುತ್ತ ಕಸದ ರಾಶಿಗಳು ರೂಪುಗೊಳ್ಳುತ್ತಿವೆ. ಉದ್ಯಾನಗಳ ಒಳಗಿನ ಕಸದ ಬುಟ್ಟಿಗಳು ಮುರಿದುಬಿದ್ದಿವೆ. ಕೆಲವೆಡೆ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದು, ದುರ್ವಾಸನೆ ಹರಡುತ್ತದೆ. ಇದರಿಂದ ಜನ ವಾಯುವಿಹಾರಕ್ಕಾಗಿ ಉದ್ಯಾನಕ್ಕೆ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಗಾಂಧಿ ಉದ್ಯಾನ, ಗೋಪಾಳದ ಮುಖ್ಯ ಸಿಟಿ ಬಸ್‌ ನಿಲ್ದಾಣದಲ್ಲಿರುವ ಉದ್ಯಾನ, ಗೋಪಾಳ ಬಡಾವಣೆ, ಕೆ.ಎಚ್.ಬಿ ಕಾಲೊನಿ, ಶರಾವತಿ ನಗರ, ಮಿಷನ್ ಕಾಂಪೌಂಡ್, ಅಶೋಕನಗರ, ಬಸವನಗುಡಿ, ವಿನೋಬನಗರ ಉದ್ಯಾನಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲ.

ಅನೇಕ ಉದ್ಯಾನಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ಮುಸ್ಸಂಜೆ ಹೊತ್ತಿನಲ್ಲಿ ಹಾಗೂ ನಸುಕಿನಲ್ಲಿ ವಾಯುವಿಹಾರಕ್ಕೆ ಬರುವವರು ಸಮಸ್ಯೆ ಎದುರಿಸುವಂತಾಗಿದೆ. ಕೆಲವೆಡೆ ಕೈಯಲ್ಲಿ ಟಾರ್ಚ್‌ ಹಿಡಿದು ವಿಹಾರಕ್ಕೆ ಬರಬೇಕಾದ ದುಸ್ಥಿತಿ ಇದೆ. ಕತ್ತಲೆಯಲ್ಲಿ ವಿಷಜಂತುಗಳ ಭಯದಿಂದಲೇ ಹೆಜ್ಜೆ ಹಾಕಬೇಕಾಗಿದೆ.

ನಗರದಲ್ಲಿ ಪರಿಸರ ಉಳಿಸಲು ಅನೇಕ ಉದ್ಯಾನಗಳಲ್ಲಿ ಸಸಿ ನೆಡುವ ಕಾರ್ಯ ನಡೆಯುತ್ತಿದೆ. ಇನ್ನೂ ಹೊಸ ಉದ್ಯಾನಗಳನ್ನು ನಿರ್ಮಿಸುವಂತೆ ಹಲವರ ಆಗ್ರಹವಿದೆ. ಆದರೆ, ಇರುವ ಉದ್ಯಾನಗಳ ಸರಿಯಾದ ನಿರ್ವಹಣೆ ಇಲ್ಲ. ನೆಟ್ಟ ಗಿಡಗಳನ್ನು ಸರಿಯಾಗಿ ಪೋಷಿಸದೆ ಉದ್ಯಾನಗಳು ಹಾಳಾಗಿವೆ.ಕೆಲವೆಡೆ ಪಾರ್ಕ್‌ ನಿರ್ಮಿಸಲು ಜಾಗದ ಕೊರತೆ ಇದೆ. ಆದರೆ, ಸಿಕ್ಕಿರುವ ಜಾಗದಲ್ಲಿ ಚಿಕ್ಕ ಪಾರ್ಕ್‌ ನಿರ್ಮಿಸಿ ಅದರಲ್ಲಿ ಗಿಡ ನೆಟ್ಟರೂ ನಿರ್ವಹಣೆ ಕಾಣದಾಗಿದೆ. ಹಿಂದೆ ನೆಟ್ಟಿದ್ದ ಗಿಡಗಳು ಬಾಡಿಹೋಗಿವೆ.

ಅವ್ಯವಸ್ಥೆಯ ಆಗರವಾದ ಗಾಂಧಿ ಉದ್ಯಾನ:

ನಗರದ ಹೃದಯ ಭಾಗದಲ್ಲಿರುವ ಗಾಂಧಿ ಉದ್ಯಾನವೇ ಅವ್ಯವಸ್ಥೆಯ ತಾಣವಾಗಿದೆ. ಉದ್ಯಾನ ಪ್ರವೇಶಕ್ಕೆ ಶುಲ್ಕವಿದೆ. ಉದ್ಯಾನ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಮೊದಲು ಉದ್ಯಾನ ನಿರ್ವಹಣೆ ಸರಿಯಾಗಿಯೇ ಇತ್ತು. ನಂತರದ ದಿನಗಳಲ್ಲಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ಇಲ್ಲಿ ಮಕ್ಕಳಿಗೆ ಆಡಲು ಜಾರುಬಂಡೆ, ಆಟಿಕೆಗಳು, ಮಿನಿ ರೈಲು, ಈಜುಕೊಳ, ವಿದ್ಯುತ್‌ ವ್ಯವಸ್ಥೆ, ಸಂಗೀತ ಕಾರಂಜಿ, ವಾಕಿಂಗ್‌ ಪಾಥ್, ಕುಳಿತುಕೊಳ್ಳಲು ಬೆಂಚ್‌ ವ್ಯವಸ್ಥೆ, ಹೆಚ್ಚು ಜನ ಕುಳಿತುಕೊಳ್ಳಲು ವಿಶಾಲ ಗೋಪುರಗಳು, ಮೀನು ಸಾಕಾಣಿಕೆ ಕೇಂದ್ರ, ಶೌಚಾಲಯ, ನೀರಿನ ವ್ಯವಸ್ಥೆ, ಬಾತುಕೋಳಿಗಳ ಹೊಂಡ, ಮೀನಿನ ಹೊಂಡ ಇದೆ. ಆದರೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಕಾಗದ ಬಿಸಾಡಲಾಗಿದೆ. ಆಲಂಕಾರಿಕ ವಿದ್ಯುತ್‌ ದೀಪಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಕಸದ ಬುಟ್ಟಿಗಳಿದ್ದರೂ ಕೆಲವರು ಹೊರಗೆ ಕಸ ಬಿಸಾಡುತ್ತಾರೆ. ತೋಟಗಾರಿಕೆ ಇಲಾಖೆ ಪಕ್ಕದ ಉದ್ಯಾನ ರಸ್ತೆಯಲ್ಲಿ ಅನೇಕ ದಿನಗಳಿಂದ ಕಸದ ರಾಶಿ ಬಿದ್ದಿದ್ದು, ಪೌರಕಾರ್ಮಿಕರು ಅದನ್ನು ತೆರವುಗೊಳಿಸಿಲ್ಲ.

ಪ್ರೇಮಿಗಳ ಅಸಭ್ಯ ವರ್ತನೆಗೆ ಬೇಸರ: ಉದ್ಯಾನಎಂದ ಮೇಲೆ ಪ್ರೇಮಿಗಳು ಬರುವುದು ಸಾಮಾನ್ಯ. ಆದರೆ, ಅವರ ಅಸಭ್ಯ ವರ್ತನೆಯಿಂದ ಅಲ್ಲಿಗೆ ಮಕ್ಕಳೊಂದಿಗೆ ಬರುವ ಪೋಷಕರಿಗೆ, ಹಿರಿಯ ನಾಗರಿಕರಿಗೆ ಮುಜುಗರವೆನಿಸುತ್ತದೆ. ಪ್ರತಿದಿನ ಓದಲು ಬರುವ ವಿದ್ಯಾರ್ಥಿಗಳು, ವೃದ್ಧರು, ವಾಯುವಿಹಾರಿಗಳು ಈ ದೃಶ್ಯಗಳನ್ನು ನೋಡಿ ಬೇಸತ್ತಿದ್ದಾರೆ. ಕೆಲವು ಪುಂಡರು ಮದ್ಯಪಾನ ಮಾಡಿ, ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ.

ಮಕ್ಕಳಿಗೆಂದೇ ಇರುವ ಆಟಿಕೆಗಳು ಮುರಿದಿದ್ದು, ಈವರೆಗೂ ಅವುಗಳನ್ನು ತೆರವುಗೊಳಿಸಿ ಬೇರೆ ಆಟಿಕೆಗಳನ್ನು ಅಳವಡಿಸಿಲ್ಲ. ಅಲ್ಲದೇ, ಪುಟಾಣಿ ರೈಲು, ಈಜುಕೊಳಕ್ಕೆ ಶುಲ್ಕ ವಿಧಿಸಿರುವುದರಿಂದ ಬಹುತೇಕ ಪಾಲಕರು ಇಲ್ಲಿಗೆ ಮಕ್ಕಳನ್ನು ಕರೆದೊಯ್ಯಲು ಆಸಕ್ತಿ ತೋರಿಸುತ್ತಿಲ್ಲ.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು 17 ಉದ್ಯಾನಗಳಿವೆ. ಅವುಗಳಲ್ಲಿ 14 ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುವುದು. ಇದರಲ್ಲಿ ಒಂದು ಉದ್ಯಾನದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದಕ್ಕೆ ಟೆಂಡರ್ ಕರೆಯಲಾಗುವುದು. ಉಳಿದಿರುವ 12 ಉದ್ಯಾನಗಳ ಅಭಿವೃದ್ಧಿ ಕಾಮಾಗಾರಿ ಪ್ರಗತಿಯಲ್ಲಿದೆ. ಒಟ್ಟು ₹ 14 ಕೋಟಿ ವೆಚ್ಚದಲ್ಲಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಎಂಜಿನಿಯರ್ಗಣೇಶ್ ತಿಳಿಸಿದರು.

ನಾಗರಿಕರೇ ಅಭಿವೃದ್ಧಿಗೊಳಿಸಿರುವ ಉದ್ಯಾನಗಳು

ಕೆಲವು ಉದ್ಯಾನಗಳನ್ನು ಬಡಾವಣೆಗಳ ನಾಗರಿಕರೇ ಅಭಿವೃದ್ಧಿಗೊಳಿಸಿದ್ದಾರೆ. ಇಂತಹ ಉದ್ಯಾನಗಳಿಗೆ ಪಾಲಿಕೆಯಿಂದ ಯಾವುದೇ ನಿರ್ವಹಣೆ ಇಲ್ಲ. ಸ್ವಯಂ ಪ್ರೇರಿತರಾಗಿ ವಿನೋಬನಗರದಲ್ಲಿರುವಉದ್ಯಾನದಲ್ಲಿ ಗಿಡ ಬೆಳೆಸುವುದು, ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾರೆ. ವಿದ್ಯುತ್‌ ವ್ಯವಸ್ಥೆ, ಬೆಂಚ್‌ ವ್ಯವಸ್ಥೆ ಮಾಡಿದ್ದಾರೆ.

ನಿಧಾನ ಗತಿಯಲ್ಲಿ ಸಾಗುತ್ತಿರುವ ಪಾರ್ಕ್‌ ಕಾಮಗಾರಿ:ಬಸವನಗುಡಿ ವಿನಾಯಕ ಉದ್ಯಾನದ ಅಭಿವೃದ್ಧಿ ಕಾಮಗಾರಿಕಳೆದ ಆರು ತಿಂಗಳಿಂದ ನಡೆಯುತ್ತಿದ್ದು, ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ವಾಕಿಂಗ್ ಪಾಥ್‌ಗೆ ತಂದಿರುವ ಹಾಸುಕಲ್ಲುಗಳನ್ನು ಹಾಗೆಯೇ ಇಡಲಾಗಿದೆ.

ಗಾಂಧಿ ಪಾರ್ಕ್‌ಗೆ ಬೇಸರ ಕಳೆಯಲು ಹಿರಿಯರು ಮಕ್ಕಳೊಂದಿಗೆ ಬರುತ್ತಾರೆ. ಅಲ್ಲಿಗೆ ಬರುವ ಪ್ರೇಮಿಗಳ ಅಸಭ್ಯ ವರ್ತನೆ ಮುಜುಗರ ಉಂಟುಮಾಡುತ್ತದೆ. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು.
–ಬಂಗಾರ ಪ್ರಭಾಕರ್, ಹಿರಿಯ ನಾಗರಿಕ.

ಕೆಲವು ಬಡಾವಣೆಗಳಲ್ಲಿರುವ ಪಾರ್ಕ್‌ಗಳಲ್ಲಿ ವಾಕಿಂಗ್‌ ಪಾಥ್, ಬೆಂಚ್‌ ವ್ಯವಸ್ಥೆ ಇಲ್ಲ. ಪಾಲಿಕೆ ಎಲ್ಲ ಉದ್ಯಾನಗಳನ್ನು ಅಭಿವೃದ್ಧಿಗೊಳಿಸಬೇಕು
–ಗಣೇಶ್ ಭಟ್, ಹಿರಿಯ ನಾಗರಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT