ಭಾನುವಾರ, ನವೆಂಬರ್ 17, 2019
28 °C
ಉಪ ಮೇಯರ್ ಚನ್ನಬಸಪ್ಪ, ಆಯುಕ್ತ ಚಿದಾನಂದ ವಟಾರೆ ಭರವಸೆ

ನಗರ ಪಾಲಿಕೆಯಲ್ಲೂ ಶೀಘ್ರ ಸಕಾಲ ಯೋಜನೆ ಜಾರಿ

Published:
Updated:
Prajavani

ಶಿವಮೊಗ್ಗ: ಕಡತಗಳ ವಿಲೇವಾರಿ ವಿಳಂಬ ತಪ್ಪಿಸಲು ಪಾಲಿಕೆಯ ಎಲ್ಲ ವಿಭಾಗಗಳಿಗೂ 10 ದಿನಗಳ ಒಳಗೆ ಸಕಾಲ ಯೋಜನೆ ಜಾರಿಗೊಳಿಸಲಾಗುವುದು ಎಂದು ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ, ಆಯುಕ್ತ ಚಿದಾನಂದ ವಟಾರೆ ಘೋಷಿಸಿದರು. 

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಪಾಲಿಕೆ ವಿರೋಧ ಪ‍ಕ್ಷದ ನಾಯಕ ರಮೇಶ್ ಹೆಗ್ಡೆ, ಕಟ್ಟಡ ಪರವಾನಗಿ, ಪೌತಿಖಾತೆ, ತೆರಿಗೆ ನಿರ್ಧರಣೆ ಸೇರಿದಂತೆ ಎಲ್ಲ ಕಡತಗಳೂ ಸರಿಯಾದ ಸಮಯಕ್ಕೆ ವಿಲೇವಾರಿ ಆಗುತ್ತಿಲ್ಲ. 3,255 ಕಡತಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಸಾರ್ವಜನಿಕರು ಪಾಲಿಕೆಗೆ ನಿತ್ಯ ಅಲೆದಾಡುತ್ತಿದ್ದಾರೆ ಎಂದು ದೂರಿದರು.

ಘನತ್ಯಾಜ್ಯ ನಿರ್ವಹಣೆಗೆ ₨ 22.22 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಒಂದೂ ಪರಿಕರ ಖರೀದಿಸಿಲ್ಲ. 1.68 ಲಕ್ಷ ಮನೆಗಳಿಗೆ ಕಸ ವಿಂಗಡಣಾ ಡಬ್ಬಿಗಳನ್ನು ನೀಡಲು ಸಾಧ್ಯವಾಗಿಲ್ಲ. ಸುಗಮ ಆಡಳಿತ ನಿರ್ವಹಣೆಯಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಮೇಶ್ ಹೆಗ್ಡೆ ಹೇಳಿಕೆಗೆ ಬಹುತೇಕ ಸದಸ್ಯರು ದ್ವನಿಗೂಡಿಸಿದರು.

ಸಕಾಲ ಯೋಜನೆ ಜಾರಿಗೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ವಾರದ ಒಳಗೆ ಎಲ್ಲ ಸಮಸ್ಯೆ ನಿವಾರಿಸಲಾಗುವುದು. ಕಾಲ ಮಿತಿಯ ಒಳಗೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮೇಯರ್ ಭರವಸೆ ನೀಡಿದರು.

ಸದಸ್ಯ ನಾಗರಾಜ ಕಂಕಾರಿ ಮಾತನಾಡಿ, ಪಾಲಿಕೆ ಆಯುಕ್ತರು ನಗರಕ್ಕೆ ಬಂದು ಒಂದು ತಿಂಗಳಾಗಿದೆ. ಈಗ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸವಾಲು ಅವರ ಮುಂದಿಲ್ಲ. ಆದರೂ ಒಂದೂ ಅರ್ಜಿ ವಿಲೇವಾರಿ ಮಾಡಿಲ್ಲ. ಕೆಲವು ಅಧಿಕಾರಿಗಳು ಕಚೇರಿ ಅವಧಿ ಬಿಟ್ಟು ಸಂಜೆ ಪಾಲಿಕೆಗೆ ಬಂದು ಕೂರುತ್ತಾರೆ. ಅವರಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕು. ಬಯೊಮೆಟ್ರಿಕ್‌ ಇದ್ದರೂ ಬಳಸದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿ ತಿಂಗಳು ಪಾಲಿಕೆ ಸಭೆ ನಡೆಸಬೇಕು. ಪಾಲಿಕೆಯಲ್ಲಿ ನಗರ ಯೋಜನಾ ಅಧಿಕಾರಿ ಇಲ್ಲದೆ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಸಾರ್ವಜನಿಕರಿಗೆ ಕಷ್ಟವಾಗಿದೆ. ಅಗತ್ಯ ವಾಹನಗಳನ್ನು ಖರೀದಿಸದ ಪರಿಣಾಮ ನಿತ್ಯವೂ ಬೀಳುವ 168 ಟನ್‌ ಕಸ ವಿಲೇವಾರಿಗೆ ತೊಡಕಾಗಿದೆ.  ನಗರದ ರಸ್ತೆಗಳು ಹಾಳಾಗಿವೆ. ಗುಂಡಿಗಳಲ್ಲಿಸ ಸಂಚರಿಸುವುದೇ ದುಸ್ತರವಾಗಿದೆ. ಬೀಡಾಡಿ ದಿನಗಳ ಹಾವಳಿ ಹೆಚ್ಚಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ ಎಂದು ಸದಸ್ಯರು ದೂರಿದರು.

ಪಾಲಿಕೆಯ ಎಲ್ಲ ಅಧಿಕಾರಿಗಳು ಸಿಬ್ಬಂದಿ ಎರಡು ತಿಂಗಳು ನೆರೆ ಪರಿಹಾರ ಕಾರ್ಯಕ್ಕೆ ಕೈಜೋಡಿಸಿದ್ದರು. ಹಾಗಾಗಿ, ಇತರೆ ಕೆಲಸ ಕಾರ್ಯಗಳು ವಿಳಂಬವಾಗಿವೆ.  ಪಾಲಿಕೆ ಆಡಳಿತ ನಿಷ್ಕ್ರಿಯವಾಗಿಲ್ಲ. ಸಿಬ್ಬಂದಿ ಕೊರತೆ ಮತ್ತೊಂದು ಕಾರಣ ಎಂದು ಉಪ ಮೇಯರ್ ಸಮಜಾಯಿಷಿ ನೀಡಿದರು.

ಪ್ರವಾಹ ನಿರ್ವಹಣೆಗೆ ₨ 25 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಇದುವರೆಗೂ ಪೈಸೆ ಬಿಡುಗಡೆಯಾಗಿಲ್ಲ. ಬಿದ್ದ ಮನೆಗಳ ದುರಸ್ತಿಗೆ ಹಣ ನೀಡಿಲ್ಲ. ಮನೆ ಕಳೆದುಕೊಂಡವರಿಗೆ ಬಾಡಿಗೆ ಪರಿಹಾರ ₨ 5 ಸಾವಿರ ಕೊಟ್ಟಿಲ್ಲ ಎಂದು ರಮೇಶ್ ಹೆಗ್ಡೆ 

ಮೇಯರ್ ಲತಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. 

ಪ್ರತಿಕ್ರಿಯಿಸಿ (+)