ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಭದ್ರತಾ ಕೊಠಡಿ ಸುತ್ತಲೂ ಬಿಗಿ ಭದ್ರತೆ

ಸೆ. 3ರಂದು ಮತ ಎಣಿಕೆ ಕಾರ್ಯಕ್ಕೆ ಸಹ್ಯಾದ್ರಿ ಕಾಲೇಜು ಸಜ್ಜು, ಅಂದೇ ಫಲಿತಾಂಶ
Last Updated 31 ಆಗಸ್ಟ್ 2018, 15:21 IST
ಅಕ್ಷರ ಗಾತ್ರ

ಶಿವಮೊಗ್ಗ:ನಗರ ಪಾಲಿಕೆ ಚುನಾವಣೆಯ ಎಲ್ಲ 303 ಮತಗಟ್ಟೆಗಳ ಮತಯಂತ್ರಗಳು ಶುಕ್ರವಾರ ಸಂಜೆ ಸಹ್ಯಾದ್ರಿ ಕಾಲೇಜಿನ ಭದ್ರತಾ ಕೊಠಡಿ ಸೇರಿದವು.

ಮತಯಂತ್ರಗಳನ್ನು ಸಂರಕ್ಷಿಸಿಡಲು ಎರಡು ಕೊಠಡಿಗಳನ್ನು ಮೀಸಲಿಡಲಾಗಿದೆ. ಕೊಠಡಿಗಳಿಗೆ ಬೀಗ ಜಡಿಯಲಾಗಿದ್ದು, ಬೀಗಗಳನ್ನು ಸೀಲ್‌ ಮಾಡಲಾಗಿದೆ. ಎರಡೂ ಕೊಠಡಿಗಳ ಮುಂದೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ಕಾಲೇಜು ಆವರಣದ ಎಲ್ಲೆಡೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆವರಣದ ಸುತ್ತಲೂ ಪೊಲೀಸ್ ಪಹರೆ ಹಾಕಲಾಗಿದೆ. ಮತಯಂತ್ರ ಇಡುವ ಮೊದಲು ಹಾಗೂ ನಂತರ ಶ್ವಾನದಳದ ಸಿಬ್ಬಂದಿ ತಪಾಸಣೆ ನಡೆಸಿದರು.

ಸಂಜೆ 5ಕ್ಕೆ ಮತದಾನ ಮುಗಿದನಂತರ ಸಂಜೆ 6ರಿಂದ ಡಿ ಮಸ್ಟರಿಂಗ್ ಪ್ರಕ್ರಿಯೆ ಆರಂಭವಾಯಿತು. ಮತಯಂತ್ರಗಳನ್ನು ಹೊತ್ತ ಬಸ್‌ಗಳು ಒಂದೊಂದಾಗಿ ಸಂಜೆ 8ರವರೆಗೆ ಸಹ್ಯಾದ್ರಿ ಕಾಲೇಜು ಆವರಣ ತಲುಪಿದವು. ಚುನಾವಣಾಧಿಕಾರಿಗಳು ಪ್ರತಿಯೊಂದು ಮತಯಂತ್ರವನ್ನೂ ಪರಿಶೀಲಿಸಿ, ಲೆಕ್ಕ ತೆಗೆದುಕೊಂಡರು. ನಂತರ ಸಾಲಾಗಿ ಭದ್ರತಾ ಕೊಠಡಿಯಲ್ಲಿ ಜೋಡಿಸಿಟ್ಟರು.

ಮತದಾನಕ್ಕೆ ನಾಗರಿಕರ ನಿರಾಸಕ್ತಿ:ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 2,73,792 ಮತದಾರರು ಇದ್ದರೂ ಮತಗಟ್ಟೆಗೆ ಬಂದು ಮತಚಲಾಯಿಸಿದ್ದು ಶೇ 59.24 ಮತದಾರರು. ಮತದಾನ ಕುರಿತು ನಗರದ ನಾಗರಿಕರ ನಿರಾಸಕ್ತಿಗೆ ಈ ಚುನಾವಣೆ ಸಾಕ್ಷಿಯಾಯಿತು. 2013ರಲ್ಲಿ ನಡೆದಿದ್ದ ಅಂದಿನ ನಗರಸಭೆ ಚುನಾವಣೆಯಲ್ಲಿ ಶೇ 62ರಷ್ಟು ಮತದಾನವಾಗಿತ್ತು. ಈ ಬಾರಿ 53 ಸಾವಿರ ಹೊಸ ಮತದಾರರ ಸೇರ್ಪಡೆಯಾಗಿತ್ತು. ಹಾಗಾಗಿ,ಮತದಾನದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ಬಾರಿಗಿಂತ ಕಡಿಮೆ ಮತದಾನವಾಗಿದೆ. ವಿದ್ಯಾವಂತರು, ನೌಕರರ ವರ್ಗ ಹೆಚ್ಚಾಗಿ ಇರುವ ಬಡಾವಣೆಗಳಲ್ಲೇ ಅತಿ ಕಡಿಮೆ ಮತದಾನವಾಗಿದೆ.

1ನೇ ವಾರ್ಡ್‌ನ ಮತಗಟ್ಟೆ 3ರಲ್ಲಿ ಒಂದು ಮತಯಂತ್ರವನ್ನು ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಆ ಮಯತಂತ್ರ ಬದಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT