ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 21 ವಿದ್ಯಾರ್ಥಿಗಳು ಅನುತ್ತೀರ್ಣ

ಶಾಲಾ ವರ್ಚಸ್ಸು ಹೆಚ್ಚಿಸಿಕೊಳ್ಳಲು ಖಾಸಗಿಯಾಗಿ ಪರೀಕ್ಷೆ ಬರೆಸಿದ ಆರೋಪ
Last Updated 29 ಮೇ 2022, 4:46 IST
ಅಕ್ಷರ ಗಾತ್ರ

ಹೊಸನಗರ: ಖಾಸಗಿ ಶಾಲೆಗಳು ಹೆಚ್ಚಿನ ಫಲಿತಾಂಶಕ್ಕಾಗಿ ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಖಾಸಗಿಯಾಗಿ ಬೇರೊಂದು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ಬರೆಯಿಸುವ ಪರಿಪಾಠ ಇದೀಗ ಸರ್ಕಾರಿ ಶಾಲೆಗಳಲ್ಲೂ ಕಂಡುಬರುತ್ತಿದೆ.

ನಿಯಮಿತವಾಗಿ ತರಗತಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ತೆಗೆದುಕೊಳ್ಳಲು ಶಾಲಾಡಳಿತವೇ ಪ್ರೇರೇಪಿಸಿ, ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಿರುವ ಸಂಬಂಧ ತಾಲ್ಲೂಕಿನ ಮಾರುತಿಪುರ ಸರ್ಕಾರಿ ಪ್ರೌಢಶಾಲೆಯ ವಿರುದ್ಧ ಆರೋಪ ಕೇಳಿಬಂದಿದೆ.

ಪರೀಕ್ಷೆಯಲ್ಲಿ ಫೇಲ್: ಶಾಲೆಯಲ್ಲಿ 2021-22ರಲ್ಲಿ 10ನೇ ತರಗತಿಗೆ ಒಟ್ಟು 131 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ 98 ವಿದ್ಯಾರ್ಥಿಗಳು ಶಾಲೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, 86 ಮಂದಿ ಉತ್ತೀರ್ಣರಾಗಿದ್ದಾರೆ. ಆದರೆ, ಇವರನ್ನು ಹೊರತುಪಡಿಸಿ 21 ಮಂದಿ ಖಾಸಗಿಯಾಗಿ ಪರೀಕ್ಷೆ ಕಟ್ಟಿ ಬರೆದಿದ್ದರು. ಈ ಪೈಕಿ 18 ವಿದ್ಯಾರ್ಥಿಗಳು 10ನೇ ತರಗತಿಗೆ ರೆಗ್ಯುಲರ್ ವಿದ್ಯಾರ್ಥಿಯಾಗಿದ್ದರು. ಖಾಸಗಿಯಾಗಿ ಪರೀಕ್ಷೆ ಬರೆದವರಲ್ಲಿ ಒಬ್ಬರು ಮಾತ್ರ ಪಾಸಾಗಿದ್ದು, 20 ಮಂದಿ ಅನುತ್ತೀರ್ಣರಾಗಿದ್ದಾರೆ. ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿ ಸಹಾ ಖಾಸಗಿಯಾಗಿ ಪರೀಕ್ಷೆ ಎದುರಿಸಿರುವುದು ಕಂಡುಬಂದಿದೆ.

ಆಂತರಿಕ ಅಂಕವಿಲ್ಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಿಗೂ ಆಂತರಿಕ ಅಂಕಗಳನ್ನು ನೀಡಲಾಗುತ್ತಿದೆ. ಕನ್ನಡಕ್ಕೆ 25 ಹಾಗೂ ಉಳಿದ ವಿಷಯಗಳಿಗೆ 20 ಅಂಕಗಳನ್ನು ನಿಗದಿಪಡಿಸಲಾಗಿದೆ. ಖಾಸಗಿ ಪರೀಕ್ಷಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನೀಡಲಾಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದರೂ ಆಂತರಿಕ ಅಂಕ ಕಳೆದುಕೊಂಡಿದ್ದಾರೆ. ಅಲ್ಲದೇ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಸಹ ಇವರನ್ನು ಖಾಸಗಿ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತದೆ.

‘ನಮ್ಮ ಮಗ ಓದಿನಲ್ಲಿ ಕೊಂಚ ಹಿಂದೆ ಬಿದ್ದಿದ್ದ. ಖಾಸಗಿಯಾಗಿ ಪರೀಕ್ಷೆ ಬರೆದಲ್ಲಿ ಸುಲಭದಲ್ಲಿ ಪಾಸಾಗಬಹುದು ಎಂದು ಶಾಲಾಡಳಿತ ತಿಳಿಸಿದಾಗ ಖಾಸಗಿಯಾಗಿ ಪರೀಕ್ಷೆ ಕಟ್ಟಿ, ಶಿವಮೊಗ್ಗದ ಮಿಳ್ಳಘಟ್ಟ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ. ಎಲ್ಲಾ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾನೆ. ಆಂತರಿಕ ಅಂಕಗಳು ಇದ್ದಲ್ಲಿ ಕೆಲ ವಿಷಯಗಳಾದರೂ ಪಾಸಾಗುವ ಸಾಧ್ಯತೆ ಇತ್ತು. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಅನ್ಯಾಯ ಆಗದಿರಲಿ ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಪೋಷಕ ಪುಟ್ಟಪ್ಪ.

ನಮ್ಮ ಕೈವಾಡವಿಲ್ಲ: ಕೆಲ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿರಲಿಲ್ಲ. ಅಂತಹವರಿಗೆ ಖಾಸಗಿಯಾಗಿ ಪರೀಕ್ಷೆ ಬರೆಯಲು ಸೂಚಿಸಲಾಗಿತ್ತು. ಅದನ್ನು ನೋಡಿ ತರಗತಿಗೆ ಬರುತ್ತಿದ್ದ ಕೆಲ ವಿದ್ಯಾರ್ಥಿಗಳು ಸಹ ಸ್ವಇಚ್ಛೆಯಿಂದ ಖಾಸಗಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ವಿಜಯಕುಮಾರಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT