ಶಿವಮೊಗ್ಗ: 17 ವರ್ಷದ ಬಾಲಕನಿಗೆ ಪ್ಯಾಸೆಂಜರ್ ಆಟೊ ಚಾಲನೆ ಮಾಡಲು ಕೊಟ್ಟಿದ್ದ ಮಾಲೀಕನಿಗೆ ಶಿವಮೊಗ್ಗದ ನಾಲ್ಕನೇ ಹೆಚ್ಚುವರಿ ಮುಖ್ಯ ಮತ್ತು ಸೆಷನ್ಸ್ ನ್ಯಾಯಾಲಯ ₹ 26 ಸಾವಿರ ದಂಡ ವಿಧಿಸಿದೆ.
ಕಳೆದ ಮೇ 25ರಂದು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಯಾಂಟರ್ ವಾಹನ ಹಾಗೂ ಪ್ಯಾಸೆಂಜರ್ ಆಟೊ ನಡುವೆ ಅಪಘಾತವಾಗಿತ್ತು. ಆಗ ಪ್ಯಾಸೆಂಜರ್ ಆಟೊವನ್ನು ಬಾಲಕನೊಬ್ಬ ಚಾಲನೆ ಮಾಡುತ್ತಿದ್ದದ್ದು ಗೊತ್ತಾಗಿತ್ತು.
ಮೋಟಾರು ವಾಹನ ಕಾಯ್ದೆಯಡಿ (ಎಂವಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಸಂಚಾರ ಠಾಣೆ ಎಎಸ್‌ಐ ರಾಜೇಶ್ವರಿ ದೇವಿ ಪ್ಯಾಸೆಂಜರ್ ಆಟೊ ಮಾಲೀಕ, ಶಿವಮೊಗ್ಗ ತಾಲ್ಲೂಕಿನ ಅಗಸವಳ್ಳಿಯ ಸತೀಶ್ (44) ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಬಾಲಕನಿಗೆ ಆಟೊ ಓಡಿಸಲು ಅವಕಾಶ ಮಾಡಿಕೊಟ್ಟಿರುವುದಲ್ಲದೇ ಆಟೊ ಎಮಿಷನ್ ಟೆಸ್ಟ್ ಮಾಡಿಸದಿರುವುದನ್ನು ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.
ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಾಲಕನಿಗೆ ಆಟೊ ಚಾಲನೆ ಮಾಡಲು ನೀಡಿದ್ದಕ್ಕೆ ಮಾಲೀಕನಿಗೆ ₹25,000 ದಂಡ ಮತ್ತು ಎಮಿಷನ್ ಟೆಸ್ಟ್ ಮಾಡಿಸದೇ ಇರುವುದಕ್ಕೆ ₹1,000 ಸೇರಿಸಿ ಒಟ್ಟು ₹26,000 ದಂಡ ಪಾವತಿಸುವಂತೆ ನ್ಯಾಯಾಧೀಶರು ಶುಕ್ರವಾರ ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.