ಬುಧವಾರ, ಅಕ್ಟೋಬರ್ 20, 2021
24 °C
ಸಂಯುಕ್ತ ಕಿಸಾನ್ ಮೋರ್ಚಾ ಆರೋಪ: ಕೃಷಿ ಕಾಯ್ದೆ ವಿರೋಧಿಸಿ ಸೆ.27ರಂದು ಶಿವಮೊಗ್ಗ ಬಂದ್‍

ಸರ್ಕಾರಗಳ ತುತ್ತೂರಿಯಾದ ಕೆಲವು ಮಾಧ್ಯಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೆಲವು ಮಾಧ್ಯಮಗಳು ಸರ್ಕಾರಗಳ ತುತ್ತೂರಿಯಂತೆ ಕಾರ್ಯನಿರ್ವಹಿಸುತ್ತಿವೆ. ರೈತ, ದಲಿತ, ಕಾರ್ಮಿಕರ ಹೋರಾಟಗಳು ಕ್ಷೀಣಿಸುತ್ತಿರುವಂತೆ ಬಿಂಬಿಸುತ್ತಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಎಚ್‌.ಆರ್.ಬಸವರಾಜಪ್ಪ ದೂರಿದರು.

ಭಾರತೀಯ ಸಂಯುಕ್ತ ಕಿಸಾನ್ ಹೋರಾಟ ಸಮಿತಿ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಜಿಲ್ಲೆಯಲ್ಲೂ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಿದ್ದಾರೆ. ಪ್ರಗತಿಪರ, ರೈತಪರ ಸಂಘಗಳು, ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜಿಲ್ಲೆಯಲ್ಲಿ ಬಂದ್‌ ಯಶಸ್ವಿಯಾಗಲಿದೆ ಎಂದು ಕಿಸಾನ್ ಮೋರ್ಚಾದ ಮುಖಂಡರಾದ ಕೆ.ಟಿ. ಗಂಗಾಧರ್, ಎಂ.ಶ್ರೀಕಾಂತ್, ಕೆ.ಪಿ.ಶ್ರೀಪಾಲ್‌, ಕೆ.ಎಲ್‌.ಅಶೋಕ್, ಎನ್‌.ರಮೇಶ್ ಮತ್ತಿತರರ ಜತೆ ಶುಕ್ರವಾರ ನಡೆದ ಜಂಟಿ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಲವು ತಿಂಗಳಿನಿಂದ ಮಳೆ, ಚಳಿ, ಕೋವಿಡ್‌ ಎನ್ನದೆ ದೇಶದ ರೈತರ ಪರ ನಡೆಯುತ್ತಿರುವ ಹೋರಾಟವನ್ನು ಕೆಲವು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ನಡೆಯನ್ನೇ ಸಮರ್ಥಿಸಿಕೊಳ್ಳುವ, ಹೋರಾಟಕ್ಕೆ ಬೇರೆ ಸ್ವರೂಪ ನೀಡುವ, ಕ್ಷೀಣಿಸಿದಂತೆ ಬಿಂಬಿಸುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.

ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ 10 ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಮೌನವಹಿಸಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಪ್ರತಿಭಟನೆಗೆ ಸರ್ಕಾರಗಳು ಸ್ಪಂದಿಸದೇ ಇರುವುದು  ಅವಮಾನಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ರೈಲ್ವೆ, ಅಂಚೆ, ವಿಮಾನ ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡುತ್ತಿದೆ. ಈಗ ಕೃಷಿ ಕ್ಷೇತ್ರವೂ
ಖಾಸಗೀಕರಣವಾಗುತ್ತಿದೆ. ರೈತರು ಅನಾಥರಾಗುವ ದಿನಗಳು ದೂರವಿಲ್ಲ. ಬೀಜ, ಗೊಬ್ಬರ, ತಂತ್ರಜ್ಞಾನ ಸೇರಿದಂತೆ ಎಲ್ಲವೂ ಖಾಸಗೀಕರಣವಾಗುತ್ತಿವೆ. ಪಾರಂಪರಿಕ ಕೃಷಿಯೂ ಖಾಸಗಿ ಕಂಪನಿಗಳ ಕೈಗೆ ಸರ್ಕಾರ ನೀಡುತ್ತಿದೆ. ರೈತ ಕೃಷಿ ಶಕ್ತಿಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾನೆ. ಕೃಷಿ ಸಂಸ್ಕೃತಿ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಐತಿಹಾಸಿಕವಾದದು. ಅಹಿಂಸೆಯ ಚಳವಳಿ ಹಗಲು ರಾತ್ರಿ ನಡೆಯುತ್ತಿದೆ. ಇಂತಹ ಚಳವಳಿಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಯೋಜಿತ ಎಂದು ಕರೆದಿರುವುದು ದುರದೃಷ್ಟಕರ. ಇವರೆಲ್ಲ ಚಳವಳಿಯನ್ನೇ ಮರೆತಿದ್ದಾರೆ ಎಂದು ದೂರಿದರು.

ಒಕ್ಕೂಟ ಸರ್ಕಾರದ ಮೂರು ಕೃಷಿ ಕಾಯ್ದೆ, ವಿದ್ಯುತ್ ಮಸೂದೆ ರದ್ದು ಮಾಡುವಂತೆ, ಇಂಧನಗಳ ಬೆಲೆ ಇಳಿಸುವಂತೆ, ಭೂ ಸ್ವಾಧೀನ ಕಾಯ್ದೆ ಮತ್ತು ನೂತನ ಶಿಕ್ಷಣ ನೀತಿಗಳ ವಿರುದ್ಧವೂ ಹೋರಾಟ ನಡೆಯಲಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಟಿ.ಎಚ್.ಹಾಲೇಶಪ್ಪ, ಎಸ್.ಶಿವಮೂರ್ತಿ, ಝೀಫಾನ್, ಆಫ್ತಾಪ್ ಪರ್ವೀಜ್,
ಶಾಂತವೀರನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.