ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಉದ್ಯೋಗ ಖಾತ್ರಿಗೆ ₹ 715 ಕೋಟಿ ಹೆಚ್ಚುವರಿ ಅನುದಾನ- ಸಚಿವ ಈಶ್ವರಪ್ಪ

1.40 ಕೋಟಿ ಅಧಿಕ ಮಾನವ ದಿನಗಳ ಬಳಕೆಗೆ ಅವಕಾಶ
Last Updated 28 ಡಿಸೆಂಬರ್ 2021, 6:02 IST
ಅಕ್ಷರ ಗಾತ್ರ

ಶಿವಮೊಗ್ಗ: ಉದ್ಯೋಗ ಖಾತ್ರಿ ಕೂಲಿ ಪಾವತಿಸಲು ಕೇಂದ್ರ ಸರ್ಕಾರ ಡಿಸೆಂಬರ್‌ನಲ್ಲಿ ₹ 661.24 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇಲ್ಲಿಯವರೆಗಿನ ಸಂಪೂರ್ಣ ಬಾಕಿ ಚುಕ್ತಾ ಆಗಿದೆ. ಹೆಚ್ಚುವರಿಯಾಗಿ 1.40 ಕೋಟಿ ಮಾನವ ದಿನಗಳ ಬಳಕೆಗೆ ಅವಕಾಶ ಕಲ್ಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಗೆ 2021 -22ನೇ ಸಾಲಿಗೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿ ಮೀರಿ ಇಲ್ಲಿಯವರೆಗೆ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ. ರಾಜ್ಯ ಸರ್ಕಾರ ಅವಧಿಗೆ ಮುನ್ನ ನಿಗದಿತ ಗುರಿ ಪೂರ್ಣಗೊಳಿಸಿದ ಕಾರಣ ಹೆಚ್ಚುವರಿಯಾಗಿ ₹ 715 ಕೋಟಿ ಅನುದಾನ ನೀಡಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾತ್ರಿ ಕರ್ಫ್ಯೂ, ಜಿಲ್ಲೆಯಲ್ಲೂ ಬಿಗಿಕ್ರಮ: ‘ಡಿ. 31ರಂದು ಬಂದ್ ಹಾಗೂ ರಾತ್ರಿ ಕರ್ಫ್ಯೂ ಅನಿವಾರ್ಯ. ಸಾರ್ವಜನಿಕರು, ವ್ಯಾಪಾರಿಗಳು ಆರೋಗ್ಯದ ದೃಷ್ಟಿಯಿಂದ ನಿಯಮ ಪಾಲಿಸಬೇಕಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಶಿವಮೊಗ್ಗದಲ್ಲೂ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳವಂತೆ ಸೂಚಿಸಲಾಗಿದೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅಪಸ್ವರಗಳು ಬರುವುದು ಸಹಜ. ಆರೋಗ್ಯ ಇದ್ದರೆ ಯಾವಾಗ ಬೇಕಾದರೂ ದುಡಿಮೆ ಮಾಡಿಕೊಳ್ಳಬಹುದು’ ‌ಎಂದರು.

‘ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸುವ ವಿಚಾರವಾಗಿ ಈಗಾಗಲೇ ಸರ್ಕಾರ ಚರ್ಚೆ ನಡೆಸಿದೆ. ರಾಜ್ಯದ ಗಡಿ, ಜಲ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ ನಾಟಕೀಯ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ? ಮೇಕೆದಾಟು ಯೋಜನೆ ಜಾರಿಗೆ ತಂದಿದ್ದೇ ಬಿಜೆಪಿ. ಕೇಂದ್ರದ ಜತೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಜಾರಿಗೊಳಿಸಲು ಬದ್ಧವಾಗಿದೆ’ ಎಂದು
ಹೇಳಿದರು.

‘ಮತಾಂತರ ಕಾಯ್ದೆ ದೊಡ್ಡ ವಿಷಯವಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಈಗ ಹೇಳಿಕೆ ನೀಡುತ್ತಿದ್ದಾರೆ. ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದ್ದೇ ಕಾಂಗ್ರೆಸ್. ಸುಮ್ಮನೆ ಸದನದ ಸಮಯ ವ್ಯರ್ಥಗೊಳಿಸಿದರು.ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಮತಾಂತರ ಕಾಯ್ದೆ ಕ್ಯಾತೆ ತೆಗೆದರು. ಈಗ ಮೇಕೆದಾಟು ಯೋಜನೆಯ ಕ್ಯಾತೆ ತೆಗೆದು ಅಣ್ಣ–ತಮ್ಮಂದಿರಂತೆ ಇರುವ ತಮಿಳು ಮತ್ತು ಕನ್ನಡ ಭಾಷಿಕರನ್ನು ಎತ್ತಿ ಕಟ್ಟುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ’ ಎಂದು ಆರೋಪಿಸಿದರು.

ಕೊಳೆಗೇರಿ ಮನೆಗಳ ತ್ವರಿತ ಪೂರ್ಣಕ್ಕೆ ಸಚಿವರ ತಾಕೀತು

ಶಿವಮೊಗ್ಗ: ಕೊಳೆಗೇರಿ ಅಭಿವೃದ್ಧಿ ಮಂಡಳಿ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಿಸುತ್ತಿರುವ 1,560 ಮನೆಗಳ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘363 ಮನೆಗಳನ್ನು ಈಗಾಗಲೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಅಂತಿಮ ಹಂತದಲ್ಲಿರುವ 414 ಮನೆಗಳನ್ನು ನಾಲ್ಕು ತಿಂಗಳ ಒಳಗೆ, ಆರಂಭಿಸದಿರುವ 217 ಮನೆಗಳ ನಿರ್ಮಾಣ ಕಾರ್ಯವನ್ನು ಎಂಟು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ನಿಗದಿತ ಅವಧಿಯ ಒಳಗೆ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸದಿದ್ದರೆ, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಮಂಜೂರಾಗಿದ್ದ 1,560 ಮನೆಗಳಲ್ಲಿ 971 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಫಲಾನುಭವಿಗಳಿಂದ ₹ 6.58 ಕೋಟಿ ಸಂಗ್ರಹಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ₹ 1.60 ಲಕ್ಷ, ಪರಿಶಿಷ್ಟ ಅಭ್ಯರ್ಥಿಗಳು ₹ 31 ಸಾವಿರ ವಂತಿಗೆ ಪಾವತಿಸಬೇಕಾಗಿದೆ. ಸರ್ಕಾರ ₹ 4.75 ಲಕ್ಷ ಸಬ್ಸಿಡಿ ನೀಡುತ್ತದೆ’ ಎಂದರು.

‘1,783 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. 53 ಘೋಷಿತ ಕೊಳಚೆ ಪ್ರದೇಶಗಳಿವೆ. ಖಾಸಗಿ ಮಾಲೀಕತ್ವದ ಪ್ರದೇಶಗಳನ್ನು ಘೋಷಿತ ಕೊಳಚೆ ಪ್ರದೇಶಗಳು ಎಂದು ಪರಿಗಣಿಸಲಾಗುತ್ತಿಲ್ಲ. ಅಲ್ಲಿಯ ನಿವಾಸಿಗಳಿಗೆ ಈ ಕುರಿತು ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT