ಸಾಗರ: ನಗರಸಭೆಗೆ 2023–24ನೇ ಸಾಲಿಗಾಗಿ ₹ 93 ಲಕ್ಷದ ಉಳಿತಾಯ ಬಜೆಟ್ ಅನ್ನು ಅಧ್ಯಕ್ಷೆ ಮಧುರಾ ಶಿವಾನಂದ್ ಮಂಡಿಸಿದರು.
ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ಮುಂದಿನ ಒಂದು ವರ್ಷದ ಅವಧಿಯಲ್ಲಿ ₹ 43.37 ಕೋಟಿ ಆದಾಯ ನಿರೀಕ್ಷಿಸಿದ್ದು,
₹ 42.44 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ನಗರಸಭೆಗೆ ಸ್ವಂತ ಮೂಲದಿಂದ ₹ 9.44 ಕೋಟಿ, ರಾಜಸ್ವ ಅನುದಾನ
ದಿಂದ ₹ 10.18 ಕೋಟಿ, ವಿಶೇಷ ಅನುದಾನದಿಂದ ₹ 12.37 ಕೋಟಿ, ಆಸ್ತಿ ತೆರಿಗೆಯಿಂದ ₹ 4 ಕೋಟಿ, ನೀರಿನ ತೆರಿಗೆಯಿಂದ ₹ 1 ಕೋಟಿ, ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ ₹ 65 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆಯಿಂದ
₹ 55 ಲಕ್ಷ, ಉದ್ದಿಮೆ ಪರವಾನಗಿಯಿಂದ ₹ 15 ಲಕ್ಷ ಸಂಗ್ರಹಿಸುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.
ನೌಕರರಿಗೆ ವಸತಿ ಗೃಹ ನಿರ್ಮಾಣ ಹಾಗೂ ದುರಸ್ತಿಗಾಗಿ ₹ 50 ಲಕ್ಷ, ನೀರು ಸರಬರಾಜು, ಬೀದಿ ದೀಪ ನಿರ್ವಹಣೆಗೆ ₹ 4.67 ಕೋಟಿ, ಆರೋಗ್ಯ ಮೇಳಕ್ಕಾಗಿ ₹ 5 ಲಕ್ಷ, ಚರಂಡಿ ಅಭಿವೃದ್ಧಿಗೆ
₹ 75 ಲಕ್ಷ, ಉದ್ಯಾನ ನಿರ್ವಹಣೆಗೆ ₹ 15 ಲಕ್ಷ, ಗೋಪಾಲಗೌಡ ಕ್ರೀಡಾಂಗಣ ಅಭಿವೃದ್ಧಿಗೆ ₹ 50 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
‘ಇದು ಕೇವಲ ಅಂಕಿ ಅಂಶಗಳ ಕಸರತ್ತಿನ ಬಜೆಟ್. ವಾಸ್ತವಾಂಶಗಳಿಗೆ ದೂರವಾಗಿರುವ ಪುಸ್ತಕದ ಬದನೆಕಾಯಿಯಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ನಗರಸಭೆಯ ಪ್ರತಿಪಕ್ಷ ನಾಯಕ ಗಣಪತಿ ಮಂಡಗಳಲೆ ಟೀಕಿಸಿದರು.
ಸತತ ಮೂರನೇ ಬಾರಿಗೆ ಬಜೆಟ್ ಮಂಡಿಸಿರುವ ಮಧುರಾ ಶಿವಾನಂದ್ ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಮೂಲಸೌಕರ್ಯಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ ಎಂದು ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ ದೂರಿದರು.
‘ಕಳೆದ ಬಜೆಟ್‌ನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹ 23 ಕೋಟಿ ಮೀಸಲಿಡಲಾಗಿತ್ತು. ಈ ಪೈಕಿ ಕೇವಲ 7 ಕೋಟಿ ಮಾತ್ರ ಖರ್ಚಾಗಿದೆ. ಉಳಿದ ಹಣವನ್ನು ಯಾಕೆ ಖರ್ಚು ಮಾಡಲು ಸಾಧ್ಯವಾಗಿಲ್ಲ ಎನ್ನುವ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಕಾಂಗ್ರೆಸ್ ಸದಸ್ಯ ತಶ್ರೀಫ್ ಇಬ್ರಾಹಿಂ ಒತ್ತಾಯಿಸಿದರು.
ಬಿಜೆಪಿ ಸದಸ್ಯ ಕೆ.ಆರ್. ಗಣೇಶ್ ಪ್ರಸಾದ್, ಇದೊಂದು ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಎಂದು ಬಣ್ಣಿಸಿದರೆ, ಬಿಜೆಪಿಯ ಮತ್ತೊಬ್ಬ ಸದಸ್ಯ ಶ್ರೀನಿವಾಸ್ ಮೇಸ್ತ್ರಿ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದರು.
ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.