ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಲ್: ಪರಸ್ಪರ ನಿಂದನೆಯಲ್ಲೇ ಮುಕ್ತಾಯವಾದ ಸಭೆ

ಅರಳಗೋಡು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ವಾಗ್ವಾದ
Last Updated 5 ಅಕ್ಟೋಬರ್ 2021, 4:00 IST
ಅಕ್ಷರ ಗಾತ್ರ

ಕಾರ್ಗಲ್:ಶರಾವತಿ ಕಣಿವೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಜೀವನ ಸಾಗಿಸುತ್ತಿರುವ ಅರಣ್ಯ ವಾಸಿಗಳ ಬವಣೆಗಳ ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಗ್ರಾಮ ಸಭೆಯಲ್ಲಿ ಅನಗತ್ಯ ವಿಷಯಾಂತರದಿಂದ ಸದಸ್ಯರ ನಡುವೆ ಜಗಳ ತಾರಕ‌ಕ್ಕೇರಿ ಹೊಡೆದಾಡುವ ಹಂತಕ್ಕೆ ತಲುಪಿತು.

ಸೋಮವಾರ ಅಧ್ಯಕ್ಷ ಬಿ.ಆರ್. ಮೇಘರಾಜ ಆರೋಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಅಭಯಾ
ರಣ್ಯ ವಾಸಿಗಳ ನಾನಾ ರೀತಿಯ ಸಮಸ್ಯೆ ಬಗೆಹರಿಸಲು ಒತ್ತಾಯ ಕೇಳಿಬಂತು. ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ಕಾರ್ಯ ನಡೆಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

ಅರಣ್ಯದ ಗಡಿ ಭಾಗಗಳಲ್ಲಿ ವನ್ಯ ಮೃಗಗಳ ಹಾವಳಿಯಿಂದ ಉಂಟಾಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬೇಲಿಗಳನ್ನು ನಿರ್ಮಾಣ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಈ ಮಧ್ಯೆ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿ ಧನಂಜಯ ಎಂಬುವವರು ಸಭೆಯ ಚರ್ಚಾ ವಸ್ತುವನ್ನು ವಿಷಯಾಂತರ ಮಾಡಿದರು.

ಕೆಲವು ತಿಂಗಳ ಹಿಂದೆ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಮಹಾತ್ಮ ಗಾಂಧಿ ಸೋಲಾರ್ ಲ್ಯಾಂಪ್ ಯೋಜನೆ ಅನ್ವಯ ಚೇತನ್ ರೂರಲ್ ಡೆವಲಪ್‌ಮೆಂಟ್ ಎಂಬ ಸಂಸ್ಥೆ ನೀಡಿದ್ದ ಸೋಲಾರ್ ದೀಪಗಳ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಪದೇ ಪದೇ ಸಭೆಯಲ್ಲಿ ಅಡ್ಡಿ ಪಡಿಸಿದರು.

ಈ ಹಂತದಲ್ಲಿ ಸಭಾಧ್ಯಕ್ಷರು ಮತ್ತು ವಿಷಯ ನಿರ್ವಾಹಕರು ಫಲಾನುಭವಿಗಳ ಪಟ್ಟಿ ಪಂಚಾಯಿತಿ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಹೇಳಿ, ಕಾಲಾವಕಾಶ ನೀಡಿದಲ್ಲಿ ತಾಲ್ಲೂಕು ಪಂಚಾಯಿತಿಯಿಂದ ತರಿಸಿಕೊಡುವುದಾಗಿ ತಿಳಿಸಿದರು.

ಆಗ ಧನಂಜಯ ಅವರು ಏಕಾಏಕಿ ಗಲಾಟೆ ಮಾಡಿ ಹೊರ ನಡೆದು ಪಂಚಾಯಿತಿಗೆ ಧಿಕ್ಕಾರ ಕೂಗಲು ಆರಂಭಿಸಿದರು. ಕಾರ್ಗಲ್ ಸಬ್ ಇನ್‌ಸ್ಪೆಕ್ಟರ್ ತಿರುಮಲೇಶ್ ಮತ್ತು ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಉಪಾಧ್ಯಕ್ಷೆ ಲಕ್ಷ್ಮೀ ಕೃಷ್ಣ ಮೂರ್ತಿ, ಸದಸ್ಯರಾದ ರಾಮಸ್ವಾಮಿ ಕರುಮನೆ, ರಾಜೇಶ ಯಲಕೋಡು, ಸೋಮಾವತಿ ಮಂಡವಳ್ಳಿ, ಲಕ್ಷ್ಮೀ ದಿನೇಶ್, ನೂಡಲ್ ಅಧಿಕಾರಿ ಹೂವಣ್ಣ, ಉಸ್ತುವಾರಿ ಪಿಡಿಒ ಸುರೇಶ, ಭರತ್ ಎಂಜಿನಿಯರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT