ಶುಕ್ರವಾರ, ಸೆಪ್ಟೆಂಬರ್ 17, 2021
24 °C

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕನ ಕೃಷಿ ಒಲವು: ಅಸಡ್ಡೆ ತೋರುವ ರೈತರಿಗೆ ಮಾದರಿ

ರಾಘವೇಂದ್ರ ಟಿ. Updated:

ಅಕ್ಷರ ಗಾತ್ರ : | |

Prajavani

ಸೊರಬ: ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಾಬ್ಜಾನ್ ಕೃಷಿಯಲ್ಲಿ ಅತೀವ ಆಸಕ್ತಿ ಹೊಂದಿದ್ದು, ತಂದೆ ಆಸ್ತಿಯಲ್ಲಿ ತಮಗೆ ಬಂದಿರುವ 3 ಎಕರೆ ಜಮೀನಿನಲ್ಲಿ ಅಡಿಕೆ, ಬಾಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಅಸಡ್ಡೆ ತೋರುತ್ತಿರುವವರಿಗೆ ಮಾದರಿಯಾಗಿದ್ದಾರೆ.

ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ ಕುಟುಂಬದೊಂದಿಗೆ ನಗರದಲ್ಲಿ ವಿಶ್ರಾಂತ ಜೀವನ ನಡೆಸಬಹುದಾಗಿದ್ದ ಸಾಬ್ಜಾನ್, ಹುಟ್ಟಿದ ಊರಿಗೆ ಮರಳಿ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಜೀವನವನ್ನು ಆನಂದದಿಂದ ಕಳೆಯುತ್ತಿದ್ದಾರೆ. ತಾಲ್ಲೂಕು ಕೇಂದ್ರದಿಂದ 23 ಕಿ.ಮೀ. ದೂರದಲ್ಲಿರುವ ಶಿಡ್ಡೆಹಳ್ಳಿ ಗ್ರಾಮದ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಸದಾ ಹಸನ್ಮುಖಿಯಾಗಿ ಕೃಷಿ ಮಾಡುತ್ತಿದ್ದಾರೆ.

ಕೂಲಿ ಆಳುಗಳನ್ನು ನಂಬಿಕೊಳ್ಳದೆ ಎಲ್ಲ ಕೆಲಸಗಳನ್ನು ತಾವೇ ಮಾಡುತ್ತಾರೆ. ಅವರೊಂದಿಗೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರ ಹಾಗೂ ತಾಲ್ಲೂಕಿನ ಬರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಆಯಿಷಾ ಬಾನು ರಜಾ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಸಹಕರಿಸುತ್ತಾರೆ.

ಬಹುತೇಕ ರೈತರು ಕೃಷಿಯಲ್ಲಿ ಅಧಿಕ ಬಂಡವಾಳ ಹೂಡಿ ಕೈಸುಟ್ಟುಕೊಳ್ಳುತ್ತಿರುವಾಗ ಸಾಬ್ಜಾನ್ ಅವರು, ‘ಸರಿಯಾದ ಸಮಯಕ್ಕೆ ನಿಷ್ಠೆ, ಪ್ರಾಮಾಣಿಕತೆಯಿಂದ ಯೋಗ್ಯ ಬೆಳೆ ಮಾಡುವ ಕನಸು ಇದ್ದರೆ ಯಾವುದೇ ಕಾರಣಕ್ಕೂ ಭೂಮಿ ರೈತನನ್ನು ಬಡವನಾಗಲು ಬಿಡುವುದಿಲ್ಲ’ ಎನ್ನುವರು. 

ಅಡಿಕೆ ದೀರ್ಘಾವಧಿ ಬೆಳೆ ಆಗಿದ್ದರೂ ಬಾಳೆಯನ್ನು ಅಡಿಕೆ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆದಿದ್ದರಿಂದ ಒಂದು ವರ್ಷದ ಅವಧಿಯಲ್ಲಿ ಲಕ್ಷ ಲಕ್ಷ ಸಂಪಾದಿಸಿದ್ದಾರೆ. ಅಡಿಕೆ ಹಾಗೂ ಬಾಳೆಗೆ ರಾಸಾಯನಿಕ ಗೊಬ್ಬರ ಹಾಕದೆ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಹಸುಗಳ ಮೂತ್ರ ಮಿಶ್ರಿತ ಸಗಣಿ, ಬೆಲ್ಲ ಹಾಗೂ ಗೊಬ್ಬರದ ಎಲೆಗಳನ್ನು ಕೊಳೆ ಹಾಕಿ ಬುಡಕ್ಕೆ ಹಾಕುವ ಮೂಲಕ ಗಿಡಗಳು ಫಲಭರಿತವಾಗಿರುವಂತೆ ಮಾಡುತ್ತಾರೆ.

ಆರಂಭದಲ್ಲಿ ಅಡಿಕೆ ಸಸಿ ನಡುವೆ ಏಲಕ್ಕಿ, ಬಾಳೆ ನೆಟ್ಟು ಒಂದೂವರೆ ವರ್ಷದಲ್ಲಿ ಉತ್ತಮ ಇಳುವರಿ ಪಡೆದಿದ್ದಾರೆ. 2 ಬೆಳೆ ತೆಗೆಯುವ ಮೂಲಕ ₹ 11 ಲಕ್ಷ ಆದಾಯ ಗಳಿಸಿದ್ದಾರೆ. ಈಗ ಮತ್ತೆ ಪಚ್ಚಬಾಳೆ ಕಟಾವಿಗೆ ಬಂದಿದ್ದು, ₹ 5 ಲಕ್ಷಕ್ಕೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕೃಷಿ ನಂಬಿ; ಅರಸರಾಗಿ ಜೀವಿಸಿ
‘ನಾನು ಸರ್ಕಾರಿ ಕೆಲಸದಲ್ಲಿದ್ದುದರಿಂದ ಅಣ್ಣ, ತಮ್ಮಂದಿರು ಯೋಗ್ಯವಲ್ಲದ ಬಂಜರು ಭೂಮಿ ನೀಡಿದರು. ಈ ಜಮೀನಿನಲ್ಲಿ 5 ಕೊಳವೆ ಬಾವಿಗಳು ವಿಫಲವಾದವು. 3 ಎಕರೆ ಜಮೀನಿನಲ್ಲಿ ಈಗ 3 ಕೊಳವೆಬಾವಿ ಕೊರೆಸಿಯಿದ್ದೇನೆ. ನೀರು ಯಥೇಚ್ಛವಾಗಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ಹುಸಿಯಾಗುವುದಿಲ್ಲ ಎನ್ನುವ ನಂಬಿಕೆಯಲ್ಲಿ ಪ್ರಾಮಾಣಿಕತೆಯಿಂದ ಪ್ರತಿನಿತ್ಯ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಕೆಲಸದಲ್ಲಿ ನೆಮ್ಮದಿ ಅಷ್ಟಕಷ್ಟೇ. ಆದರೆ ಕೃಷಿಯಲ್ಲಿ ನಾವು ಅಂದುಕೊಂಡಂತೆ ನಮಗೆ ನಾವು ಅರಸರಾಗಿ ಜೀವನ ನಡೆಸಬಹುದು. ಯುವಕರು ಉದ್ಯೋಗಕ್ಕಾಗಿ ಅಲೆದಾಡುವ ಬದಲು ಕೃಷಿ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡುತ್ತಾರೆ ಸಾಬ್ಜಾನ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು