ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಿಗೆ: ನಾಲ್ಕು ವರ್ಷಗಳಿಂದ ಬಾಗಿಲು ತೆರೆಯದ ಪಶು ಆಸ್ಪತ್ರೆ

Last Updated 21 ಜುಲೈ 2022, 3:51 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಿಗೆ ಗ್ರಾಮದಲ್ಲಿನ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಬಾಗಿಲು ಮುಚ್ಚಿ ಬರೋಬ್ಬರಿ ನಾಲ್ಕು ವರ್ಷಗಳಾಗಿವೆ.

ಸುತ್ತಮುತ್ತಲ ಗ್ರಾಮಗಳ ರೈತರ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ದೊರೆಯದ್ದರಿಂದ ಬವಣೆ ಹೇಳತೀರದಾಗಿದೆ.

ಮುಳುಗಡೆ ಪ್ರದೇಶವಾದ ಹೆಬ್ಬಿಗೆಯಲ್ಲಿ ಸಮರ್ಪಕ ರಸ್ತೆ ಸಂಪರ್ಕ ಇಲ್ಲ. ಪ್ರಾಣಿಗಳ ಆರೋಗ್ಯ ಹದಗೆಟ್ಟರೆ, ಚಿಕಿತ್ಸೆ ಲಭ್ಯವಾಗದೇ ಪ್ರಾಣ ಕಳೆದುಕೊಳ್ಳುವ ಅಪಾಯದ ಸ್ಥಿತಿ ಎದುರಾಗಿದೆ.

1996ರಲ್ಲಿ ಆರಂಭವಾದ ಹೆಬ್ಬಿಗೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಕೆಲವು ವರ್ಷ ಮಾತ್ರ ಪಶು ವೈದ್ಯರಿದ್ದರು. ನಂತರ ಕೇವಲ ‘ಡಿ’ ದರ್ಜೆ ನೌಕರರು ಆಸ್ಪತ್ರೆ ನಿರ್ವಹಿಸುತ್ತಿದ್ದರು. ಪಶುಗಳಿಗೆ ತಜ್ಞರಿಂದ ಚಿಕಿತ್ಸೆ ದೊರೆಯದಿದ್ದರೂ, ಕೆಲವು ಔಷಧಿಗಳಾದರೂ ದೊರೆಯುತ್ತಿದ್ದವು. ಆದರೆ, ನಾಲ್ಕು ವರ್ಷಗಳ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ‘ಡಿ’ ದರ್ಜೆ ಸಹಾಯಕನನ್ನು ವಜಾಗೊಳಿಸಲಾಗಿದೆ. ಇದರಿಂದ ಆಸ್ಪತ್ರೆ ಬಾಗಿಲನ್ನೂ ತೆರೆಯುವವರಿಲ್ಲದೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಆವರಣದ ತುಂಬ ಗಿಡ–ಗಂಟಿ ಬೆಳೆದಿವೆ.

ಹೆಬ್ಬಿಗೆ ಗ್ರಾಮದಲ್ಲಿ 120 ಮನೆಗಳಿವೆ. 500ಕ್ಕೂ ಹೆಚ್ಚು ಜಾನುವಾರುಗಳು ಮತ್ತು ನೂರಾರು ಕುರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಜಾನುವಾರುಗಳಿಗೆ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡಾಗ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಗಿದೆ. ಇಲ್ಲಿ ಲಸಿಕೆ, ಉಣುಗಿನ ಔಷಧ, ಹೊಟ್ಟೆ ಹುಳುವಿನ ಔಷಧ ದೊರೆಯದೆ ಅವು ಸಾವನ್ನಪ್ಪುತ್ತಿವೆ.

ಹೆಬ್ಬಿಗೆಯಿಂದ ತಾಲ್ಲೂಕು ಕೇಂದ್ರ ಹೊಸನಗರ 60 ಕಿ.ಮೀ. ದೂರವಿದೆ. ನಿಟ್ಟೂರು 20 ಕಿ.ಮೀ. ದೂರವಿದೆ. ಅಲ್ಲೂ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರಿಲ್ಲ. ಹೊಸನಗರಕ್ಕೆ ಕರೆದೊಯ್ಯುವುದೂ ತ್ರಾಸದಾಯಕ.

‘ಈ ಸಮಸ್ಯೆ ಕುರಿತು ಇಲಾಖೆಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಪ ನಿರ್ದೇಶಕರು ಹಾರಿಕೆ ಉತ್ತರ ನೀಡುತ್ತಾರೆ. ಸಮಸ್ಯೆ ಹಾಗೇ ಉಳಿದಿದೆ’ ಎನ್ನುತ್ತಾರೆ ಗ್ರಾಮಸ್ಥರು.

***

ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು

ಹೆಬ್ಬಿಗೆ ಗ್ರಾಮದ ಪಶು ಆಸ್ಪತ್ರೆಗೆ ಸಿಬ್ಬಂದಿ ಇಲ್ಲದೆ ಬಾಗಿಲು ಮುಚ್ಚಲಾಗಿದೆ. ಕೋವಿಡ್ ಕಾರಣಕ್ಕೆ ಹುದ್ದೆಗಳ ಭರ್ತಿ ವಿಳಂಬವಾಗಿದೆ. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಪಶು ಆಸ್ಪತ್ರೆ ಬಾಗಿಲು ತೆರೆಯುವ ಪ್ರಯತ್ನ ಮಾಡಲಾಗುವುದು.

–ಡಾ.ನಾಗರಾಜ್, ಪಶು ಸಂಗೋಪನೆ ಇಲಾಖೆ ಸಹಾಯಕ
ನಿರ್ದೇಶಕ, ಹೊಸನಗರ

ವೈದ್ಯರನ್ನು ನೇಮಿಸದಿದ್ದರೆ ಪ್ರತಿಭಟನೆ

ಹೆಬ್ಬಿಗೆ ಪಶು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ದೊರೆಯದೆ ಭಾರಿ ತೊಂದರೆ ಅನುಭವಿಸುವಂತಾಗಿದೆ. ಪಕ್ಕದ ನಿಟ್ಟೂರಿನ ಆಸ್ಪತ್ರೆಯಲ್ಲೂ ಪಶು ವೈದ್ಯರಿಲ್ಲ. ಅಲ್ಲಿರುವ ಸಿಬ್ಬಂದಿಗೆ ಯಾವ ರೋಗಕ್ಕೆ ಯಾವ ಔಷಧ ಕೊಡಬೇಕು ಎಂಬುದೇ ಗೊತ್ತಿಲ್ಲ. ತಕ್ಷಣ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.

–ಪುರುಷೋತ್ತಮ ಶಾನುಬೋಗ್, ಗ್ರಾಮ ಪಂಚಾಯಿತಿ, ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT