ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿಗೆ ಅಭ್ಯರ್ಥಿ ಘೋಷಿಸಿದ ಎಎಪಿ: ಬಿರುಸುಗೊಂಡ ರಾಜಕೀಯ ಚಟುವಟಿಕೆ

Last Updated 18 ಜುಲೈ 2022, 5:04 IST
ಅಕ್ಷರ ಗಾತ್ರ

ಭದ್ರಾವತಿ: ಕ್ಷೇತ್ರದ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಬಿಜೆಪಿ ಹೊಸ ಅಧ್ಯಕ್ಷರನ್ನು ನೇಮಿಸಿದರೆ, ಎಎಪಿ ತನ್ನ ಅಭ್ಯರ್ಥಿ ಘೋಷಿಸಿದೆ. ಜೆಡಿಎಸ್‌ ಶಾರದಾ ಅಪ್ಪಾಜಿ ರಾಜಕೀಯ ಚಟುವಟಿಕೆ ನಡೆಸಿದ್ದರೆ, ಶಾಸಕ ಬಿ.ಕೆ.ಸಂಗಮೇಶ್ವರ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ.

ಅಪ್ಪಾಜಿ, ಸಂಗಮೇಶ್ವರ ಅವರ ನಡುವಿನ ಹೋರಾಟದ ಕ್ಷೇತ್ರದಲ್ಲಿ ಈಗ ಹಲವು ಪಕ್ಷಗಳು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಸಹಜವಾಗಿ ಅಪ್ಪಾಜಿ ಸ್ಥಾನ ತುಂಬುವರು ಯಾರು ಎಂಬ ಚರ್ಚೆ ಸ್ಥಳೀಯವಾಗಿ ನಡೆದಿದೆ.

ಶಾಸಕ ಬಿ.ಕೆ.ಸಂಗಮೇಶ್ವರ ತಮ್ಮ ಶಕ್ತಿಯ ಜೊತೆಗೆ ಪಕ್ಷದ ಶಕ್ತಿ ಇಟ್ಟುಕೊಂಡು ಬೇರೆ ಪಕ್ಷದಿಂದ ಬೇಸತ್ತು ಬರುವರನ್ನು ಸಂಪರ್ಕಿಸಿ ತಮ್ಮಡೆಗೆ ಸೆಳೆಯುವ ಕೆಲಸ ನಡೆಸಿದ್ದಾರೆ. ಇದಕ್ಕೆ ಸಂಗಮೇಶ ಸಹೋದರ ನಗರಸಭಾ ಸದಸ್ಯ ಬಿ.ಕೆ.ಮೋಹನ್ ಹಾಗೂ ಅವರ ಮಗ ಬಿ.ಎಸ್.ಗಣೇಶ್ ಸಾಥ್ ನೀಡಿದ್ದಾರೆ.

ಅಧ್ಯಕ್ಷರ ಬದಲಾವಣೆ: ಬಿಜೆಪಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದ ಜಿ.ಧರ್ಮಪ್ರಸಾದ್ ಅವರನ್ನು ಭದ್ರಾವತಿ ಕ್ಷೇತ್ರದ ವ್ಯಾಪ್ತಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಸಂಘಟನೆಯ ವೇಗ ಹೆಚ್ಚಿಸುವ ಯತ್ನಕ್ಕೆ ಮುಂದಾಗಿದೆ. ಇದಕ್ಕೆ ಬಲ ಕೊಡಲು ಸಂಸದ ಬಿ.ವೈ.ರಾಘವೇಂದ್ರ ಕಳೆದೊಂದು ತಿಂಗಳ ಅವಧಿಯಲ್ಲಿ ಹತ್ತಾರು ಬಾರಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.

ಎಎಪಿ ಅಭ್ಯರ್ಥಿ ಆನಂದ್: ಆಮ್ ಆದ್ಮಿ ಪಕ್ಷ ಕಳೆದ ವಾರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯಾಗಿ ಆನಂದ್ ಅವರನ್ನು ಘೋಷಿಸಲು ಮುಂದಾಗಿದೆ. ರಂಗಪ್ಪ ವೃತ್ತದಲ್ಲಿ ಕಚೇರಿ ಆರಂಭಿಸಿದೆ.

ಸ್ವತಃ ವಲಯ ಉಸ್ತುವಾರಿ ಎಸ್.ದಿವಾಕರ್ ‘ಆನಂದ್ ಅವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ಸ್ಥಳೀಯ ಕೋರ್ ಕಮಿಟಿ ಶಿಫಾರಸ್ಸು ಮಾಡಿದೆ. ಅದನ್ನು ನಾವು ಅನುಮೋದಿಸಲಿದ್ದೇವೆ’ ಎಂದಿದ್ದಾರೆ.

ಬಿಎಸ್ಪಿ ಸಂಘಟನೆ: ಕಳೆದ ಆರು ತಿಂಗಳಿಂದ ಬಹುಜನ ಸಮಾಜ ಪಕ್ಷ ಸದ್ದಿಲ್ಲದೆ ತನ್ನ ಕಾರ್ಯವಿಸ್ತಾರ ಮಾಡುವ ಗುರಿಯೊಂದಿಗೆ ಕೆಲಸ ನಡೆಸಿದೆ. ಸಂಚಾಲಕ ರಾಜೇಂದ್ರ, ನಿಯೋಜಿತ ಅಭ್ಯರ್ಥಿ ರಹಮತ್ತುಲ್ಲಾ ಖಾನ್ ಕಾರ್ಯಕರ್ತರನ್ನು ಗುರುತಿಸಿ ಪಕ್ಷಕ್ಕೆ ಕರೆತರುವ ಕೆಲಸ ನಡೆಸಿದ್ದಾರೆ.

‘ಪ್ರೊ.ಬಿ.ಕೃಷ್ಣಪ್ಪ ದಲಿತ ಸಂಘಟನೆ ಆರಂಭಿಸಿದ ಈ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಅನೇಕ ಹಿರಿಕರನ್ನು ನಮ್ಮೊಟ್ಟಿಗೆ ಜೋಡಿಸಿಕೊಳ್ಳುವ ಕೆಲಸ ನಡೆಸಿದ್ದೇವೆ.ಇದರಿಂದಾಗಿ ನೊಂದ ಜನರ ಮತ್ತೊಮ್ಮೆ ಕ್ಷೇತ್ರದಲ್ಲಿ ಕಾಣಲಿದ್ದೇವೆ’ ಎನ್ನುತ್ತಾರೆ ಸಂಚಾಲಕ ರಾಜೇಂದ್ರ.

ಅಪ್ಪಾಜಿ ಮತ ಭದ್ರ: ಜೆಡಿಎಸ್ಪಕ್ಷದ ಎಂ.ಜೆ. ಅಪ್ಪಾಜಿ ಅವರ ಮತಬ್ಯಾಂಕ್ ಈಗಲೂ ಭದ್ರವಾಗಿದೆ. ಅದನ್ನೇ ನಂಬಿರುವ ಶಾರದಾ
ಅಪ್ಪಾಜಿ ತಮ್ಮ ಸಂಘಟನಾ ಶಕ್ತಿ ತೋರಿದ್ದಾರೆ.

ನಗರಸಭಾ ಚುನಾವಣೆ, ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಜಯ ಕಾಯ್ದುಕೊಳ್ಳುವ ಮೂಲಕ ತಮ್ಮ ಜಾಗವನ್ನು ಭದ್ರ ಮಾಡಿಕೊಂಡಿದ್ದಾರೆ.ಈಗಾಗಲೇ ಪಕ್ಷದ ಹಿರಿಯರು, ಅಪ್ಪಾಜಿ ಅಭಿಮಾನಿಗಳ ಭೇಟಿ ಮಾಡಿ ತಮ್ಮ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

‘ಕ್ಷೇತ್ರದಲ್ಲಿ ಅಪ್ಪಾಜಿ ಮತ ಬ್ಯಾಂಕ್ ಇದ್ದೇ ಇದೆ. ಅದರ ಜತೆಗೆ ಒಂದಿಷ್ಟು ಶ್ರಮ ಹಾಕಿ ಮತ್ತೊಮ್ಮೆ ಗೆಲ್ಲಿಸಿಕೊಳ್ಳಲು ಸಂಘಟನೆ ನಡೆದಿದೆ’ ಎನ್ನುತ್ತಾರೆ ಮುಖಂಡ ಆರ್.ಕರುಣಾಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT