ಶುಕ್ರವಾರ, ಆಗಸ್ಟ್ 6, 2021
21 °C

ತಟ್ಟೆಕೆರೆ ಬಗರ್‌ಹುಕುಂ ವಿವಾದ: ಅಕ್ರಮ ಖಾತೆಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತಾಲ್ಲೂಕಿನ ಹೊಸಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೊಸಕೊಪ್ಪ ತಟ್ಟೆಕೆರೆ ಗ್ರಾಮದ ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಖಾಸಗಿ ಭೂ ಮಾಲೀಕರಿಗೆ ಅಕ್ರಮ ಖಾತೆ ಮಾಡಿರುವ ಆದೇಶಕ್ಕೆ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ತಡೆ ನೀಡಿದ್ದಾರೆ.

ತಟ್ಟೆಕೆರೆ ಗ್ರಾಮದ ಸರ್ವೆ ನಂ 176ರಲ್ಲಿರುವ 40.19 ಎಕರೆ ಭೂಮಿಯನ್ನು 25ಕ್ಕೂ ಹೆಚ್ಚು ದಲಿತ ಕುಟುಂಬಗಳು ಕಳೆದ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರು. ಭೂ ಮಂಜೂರಾತಿಗಾಗಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ  50, 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಇಂತಹ ಸಮಯದಲ್ಲೇ ಖಾಸಗಿ ವ್ಯಕ್ತಿಗಳಿಗೆ ಲಾಕ್‌ಡೌನ್ ಸಮಯದಲ್ಲಿ 32.15 ಎಕರೆ ಭೂಮಿ ಖಾತೆ ಮಾಡಲಾಗಿತ್ತು. ಅಕ್ರಮ ದಾಖಲೆಗಳ ಮೂಲಕ ಬಗರ್‌ಹುಕುಂ ಭೂಮಿ ಕಬಳಿಸಿದ ವ್ಯಕ್ತಿಗಳು ಸಾಗುವಳಿದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ನಡೆಸಿದ್ದರು. ಇದನ್ನು ಖಂಡಿಸಿ ಸಾಗುವಳಿದಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಪ ವಿಭಾಗಾಧಿಕಾರಿಗಳು ಸರ್ವೆ ನಂಬರ್ 176ರಲ್ಲಿನ ಭೂಮಿಯ ಖಾತೆ ತಡೆಹಿಡಿದು ಆದೇಶ ಹೊರಡಿಸಿದ್ದಾರೆ. ಬಗರ್ ಹುಕುಂ ಅರ್ಜಿಗಳು ವಿಚಾರಣೆ ನ್ಯಾಯಾಲಯದಲ್ಲಿವೆ. ಅಂತಿಮ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಶಾಸಕರ ಭೇಟಿ: ಶಿವಮೊಗ್ಗ ತಾಲ್ಲೂಕಿನ ತಟ್ಟೆಕೆರೆ ಗ್ರಾಮ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಶಾಸಕರಾದ ಆರಗ ಜ್ಞಾನೇಂದ್ರ ಗ್ರಾಮಕ್ಕೆ ಭೇಟಿ ನೀಡಿ ಸಾಗುವಳಿ ಭೂಮಿ ಪರಿಶೀಲಿಸಿದರು. ಸಾಗುವಳಿದಾರರ ಅಹವಾಲು ಆಲಿಸಿದರು. ಅಕ್ರಮ ಖಾತೆ ಮಾಡಿದವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು