ಶನಿವಾರ, ಅಕ್ಟೋಬರ್ 8, 2022
21 °C

ಬಹುಮುಖ ಪ್ರತಿಭೆಯ ಶಿಕ್ಷಕಿಯ ಸಾಧನೆ: ರಂಗದ ಮೇಲೆ ಸಾವಿತ್ರಿಬಾಯಿ ಪುಲೆಯಾಗಿ ಪ್ರವೇಶ

ಎಂ. ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿಯಲ್ಲಿ ಏಕವ್ಯಕ್ತಿ ರಂಗ ಪ್ರಯೋಗಗಳ ಸಂಖ್ಯೆ ಹೆಚ್ಚುತ್ತಿದೆ. ಪುರುಷರಲ್ಲದೆ ಮಹಿಳೆಯರೂ ‌‌ಹಲವು ಯಶಸ್ವಿ ಏಕವ್ಯಕ್ತಿ ರಂಗ ಪ್ರಯೋಗಗಳಲ್ಲಿ ಭಾಗಿಯಾಗಿದ್ದಾರೆ. ಈ ಸಾಲಿಗೆ ಸೇರಲು ಈಗ ಇಲ್ಲಿನ ಹೊನ್ನೇಸರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೈಲಜಾ ಪ್ರಕಾಶ್ ಮುಂದಾಗಿದ್ದಾರೆ.

ದೇಶದ ಪ್ರಥಮ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯನ್ನು ಆಧರಿಸಿರುವ ರಂಗ ಕೃತಿಯನ್ನು ಡಿ.ಎಸ್. ಚೌಗಲೆ ರಚಿಸಿದ್ದು, ಅದನ್ನು ಸೆ.8ರಂದು ಸಂಜೆ 6ಕ್ಕೆ ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಶೈಲಜಾ ಪ್ರಕಾಶ್ ಅವರು ಏಕವ್ಯಕ್ತಿ ರಂಗ ಪ್ರಯೋಗದ ಮೂಲಕ ಪ್ರಸ್ತುತಪಡಿಸಲಿದ್ದಾರೆ.

ನೀನಾಸಂ ಬಳಗ, ಜಾನಪದ ಕಣಜ, ಕೆ.ವಿ. ಸುಬ್ಬಣ್ಣ ರಂಗ ಸಮೂಹ, ಶಿಕ್ಷಕರ ಕಲಾಸಿಂಚನ ಸಾಂಸ್ಕೃತಿಕ ವೇದಿಕೆ ಮೂಲಕ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಶೈಲಜಾ ಸಮಾಜಮುಖಿ ಶಿಕ್ಷಕಿ ಎಂದು ಗುರುತಿಸಿಕೊಂಡಿದ್ದಾರೆ. ಗಡಿಕಟ್ಟೆ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದಾಗ ಸಹ ಶಿಕ್ಷಕರೊಂದಿಗೆ ಸೇರಿ ಶಾಲೆಯ ಹಾದಿಯನ್ನೇ ಕಾಣದ 12ಕ್ಕೂ ಹೆಚ್ಚು ಹಾವುಗೊಲ್ಲರ ಮಕ್ಕಳಿಗೆ ಶಿಕ್ಷಣದ ದೀಕ್ಷೆ ಕೊಡಿಸಿದ್ದು ಇವರ ಹೆಗ್ಗಳಿಕೆ.

ಶೈಲಜಾ ಅವರ ಪತಿ ಯೇಸುಪ್ರಕಾಶ್ ಹೆಗ್ಗೋಡು ರಂಗಭೂಮಿಯೊಂದಿಗೆ ಚಲನಚಿತ್ರದಲ್ಲೂ ಅಭಿನಯಿಸುವ ಮೂಲಕ ಹೆಸರು ಗಳಿಸಿದ್ದಾರೆ. ಈ ದಂಪತಿಯ ಮೂವರು ಮಕ್ಕಳು ಕೂಡ ರಂಗಭೂಮಿ, ಯಕ್ಷಗಾನಕ್ಕೂ ಬಣ್ಣ ಹಚ್ಚಿದ್ದು ಇಡೀ ಕುಟುಂಬವೆ ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿದೆ.

ಶೈಲಜಾ ಅವರು ಏಕವ್ಯಕ್ತಿ ರಂಗ ಪ್ರಯೋಗದ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

‘ಅಕ್ಷರದವ್ವ ಎಂದೇ ಹೆಸರು ಗಳಿಸಿರುವ ಸಾವಿತ್ರಿಬಾಯಿ ಪುಲೆ ಪಾತ್ರವನ್ನು ರಂಗದ ಮೇಲೆ ತರುತ್ತಿರುವುದು ಸವಾಲಿನ ಸಂಗತಿಯಾಗಿದೆ. ಒಂದು ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಡುವ ಸವಾಲು ನನ್ನ ಎದುರು ಇದೆ. ನಿರ್ದೇಶಕರು ಕತೆಯನ್ನು ಅಚ್ಚುಕಟ್ಟಾಗಿ ಹೆಣೆದಿರುವುದು ನನ್ನ ಕೆಲಸವನ್ನು ಸುಲಭ ಮಾಡಿದೆ ಎಂಬ ಭಾವನೆ ಇದೆ’ ಎನ್ನುತ್ತಾರೆ ಶೈಲಜಾ.

‘ಹೆಣ್ಣು ಮಕ್ಕಳು ಶಾಲೆಗೆ ಹೋಗುವುದೇ ಅಸಾಧ್ಯ ಎನ್ನುವ ಕಾಲದಲ್ಲಿ ಶಿಕ್ಷಣ ಪಡೆದು ಶಿಕ್ಷಕಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪಣ ತೊಟ್ಟ ಸಾವಿತ್ರಿಬಾಯಿ ವ್ಯಕ್ತಿತ್ವವನ್ನು ಈ ತಲೆಮಾರಿನ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ರಂಗ ಪ್ರಯೋಗವನ್ನು ಸಾಧ್ಯವಾದಷ್ಟು ಹೆಚ್ಚಿನ ಶಾಲೆಗಳಲ್ಲಿ ಪ್ರದರ್ಶಿಸುವ ಉದ್ದೇಶವಿದೆ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಇದುವರೆಗೆ ಕನ್ನಡ ರಂಗಭೂಮಿಯಲ್ಲಿ ಪುರಾಣದಲ್ಲಿನ ಪಾತ್ರಗಳನ್ನು ಹೆಚ್ಚಾಗಿ ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಅಳವಡಿಸಲಾಗಿದೆ. ಸಮಕಾಲೀನ ಪಾತ್ರವನ್ನು ರಂಗದ ಮೇಲೆ ತರುವಾಗ ಅದೊಂದು ಸಾಕ್ಷ್ಯಚಿತ್ರವಾಗದಂತೆ ಎಚ್ಚರ ವಹಿಸಬೇಕು. ಆ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ನಡೆಸಲಾಗಿದೆ’ ಎಂದು ನಿರ್ದೇಶಕ ಮಂಜುನಾಥ ಎಲ್. ಬಡಿಗೇರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು