ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ| ಹೊಸ ಮಾದರಿಗೆ ತೆರೆದುಕೊಳ್ಳುತ್ತಿದ್ದ ರಂಗಕರ್ಮಿ: ರಾಜೇಂದ್ರನ್

ತ್ರಿಶೂರ್‌ನ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕ ಪ್ರೊ. ಅಭಿಲಾಷ್ ಪಿಳ್ಳೈ ಅಭಿಪ್ರಾಯ
Last Updated 10 ಏಪ್ರಿಲ್ 2023, 5:14 IST
ಅಕ್ಷರ ಗಾತ್ರ

ಸಾಗರ: ರಂಗ ಪಠ್ಯಗಳ ಹೊಸ ಮಾದರಿಗಳಿಗೆ ತೆರೆದುಕೊಳ್ಳುವ ತುಡಿತ ರಂಗಕರ್ಮಿ ಕೆ.ಎಸ್.ರಾಜೇಂದ್ರನ್ ಅವರಲ್ಲಿ ಎದ್ದು ಕಾಣುತ್ತಿತ್ತು ಎಂದು ತ್ರಿಶೂರ್‌ನ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕ ಪ್ರೊ. ಅಭಿಲಾಷ್ ಪಿಳ್ಳೈ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ಕಿನ್ನರ ಮೇಳ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಪ್ರೊ.ಕೆ.ಎಸ್. ರಾಜೇಂದ್ರನ್ ಅವರ ನೆನಪಿನ ಪುಸ್ತಕ ಮನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗ ಶಿಕ್ಷಣ ಕೇಂದ್ರಗಳ ಪಠ್ಯವು ಉಪನ್ಯಾಸಕ ಕೇಂದ್ರವಾಗಿರದೇ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು ಎಂದು ಹಂಬಲಿಸಿದವರು ರಾಜೇಂದ್ರನ್. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರಂಗ ಪಠ್ಯವನ್ನು ಪುನರ್ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ನೆನಪಿಸಿಕೊಂಡರು.

ರಂಗ ಶಿಕ್ಷಣ ಕೇಂದ್ರಗಳ ಜವಾಬ್ದಾರಿಗಳೇನು ಎಂಬುದರ ಬಗ್ಗೆ ರಾಜೇಂದ್ರನ್ ಅವರಿಗೆ ಸ್ಪಷ್ಟವಾದ ಕಲ್ಪನೆಗಳಿತ್ತು. ರಂಗ ಶಾಲೆಗಳ ವಿದ್ಯಾರ್ಥಿಗಳಿಂದಲೂ ಕಲಿಯಲು ಸಾಧ್ಯವಿದೆ ಎಂಬ ವಿನಯ ಕೂಡ ಅವರಲ್ಲಿತ್ತು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವ ಅನೇಕ ಮಾರ್ಗಗಳನ್ನು ಅವರು ಕಂಡುಕೊಂಡಿದ್ದರು ಎಂದು ವಿವರಿಸಿದರು.

ಹಲವು ವೃತ್ತಿಪರ ಕಲಾವಿದರೊಂದಿಗೆ ಹಲವು ಮಾದರಿಗಳ ರಂಗ ಪ್ರಯೋಗಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದ ರಾಜೇಂದ್ರನ್ ಅವರಿಗೆ ರಂಗ ಪಠ್ಯವನ್ನು ಕಲಿಸುವುದು ಒಂದು ಕೇವಲ ವೃತ್ತಿಯಾಗಿರದೆ ಭಾವತೀವ್ರತೆಯ ಪ್ರಕ್ರಿಯೆಯಾಗಿತ್ತು ಎಂದು ವಿಶ್ಲೇಷಿಸಿದರು.

ರಂಗಕರ್ಮಿ ಪದ್ಮಶ್ರೀ ಅವರು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಾಜೇಂದ್ರನ್ ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡರು. ಡಾ.ಅಜಯ್ ಜೋಷಿ, ಕಿನ್ನರ ಮೇಳ ಸಂಸ್ಥೆಯ ಕೆ.ಜಿ. ಕೃಷ್ಣಮೂರ್ತಿ ಇದ್ದರು.

ಕೊಯಮತ್ತೂರಿನ ಕಾಜಮ್ ಲಿಟರರಿ ಫೋರಮ್‌ನ ಕೆ.ಎಸ್. ಸೌಂದರ್ ರಾಜನ್ ಅಧ್ಯಕ್ಷತೆ ವಹಿಸಿದ್ದರು. ಚೆನ್ನೈನ ಶ್ರೀ ಮಾರಿಯಮ್ಮನ್ ತೆರುಕೋತು ಡ್ರಾಮಾ ಕಂಪನಿಯಿಂದ ‘ದ್ರೌಪತಿ ವಸ್ತ್ರಾಪಹರಣಮ್’ ತೆರುಕೋತು ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT