ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ: ಚುರುಕುಗೊಂಡ ಭತ್ತದ ನಾಟಿ ಕಾರ್ಯ

ಎರಡು ಜಲಾಶಯಗಳು ಭರ್ತಿ; ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ ಸಮೂಹ
Last Updated 5 ಆಗಸ್ಟ್ 2022, 2:22 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಗಳು ಭರ್ತಿಯಾಗಿದ್ದು, ರೈತ ಸಮೂಹದಲ್ಲಿ ಸಂಭ್ರಮ ಮನೆಮಾಡಿದ್ದು, ಜಮೀನುಗಳಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸುಮಾರು 10,000 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಗಳು ಜಿಲ್ಲೆಯ ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕುಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಾಗೂ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಕಾರಣ ಭರ್ತಿಯಾಗಿವೆ. ಅಂಜನಾಪುರ ಜಲಾಶಯ ಪ್ರಸ್ತುತ ಎರಡು ಬಾರಿ ಭರ್ತಿಯಾಗಿ ಕೋಡಿ ಮೇಲೆ ನೀರು ಹರಿದಿದೆ.

ಜಲಾಶಯಗಳ ನೀರು ನಾಲೆಗಳ ಮೂಲಕ ಹರಿಯುತ್ತಿದೆ. ತಾಲ್ಲೂಕಿನ ಕೆರೆ–ಕಟ್ಟೆಗಳು ಭರ್ತಿಯಾಗಿವೆ. ಕೆಲವು ಗ್ರಾಮಗಳ ಸಮೀಪದ ಕೃಷಿ ಭೂಮಿಯಲ್ಲಿ ಅಚ್ಚುಕಟ್ಟು ಭಾಗದ ರೈತರು ನಾಟಿ ಕಾರ್ಯ ನಡೆಸಲು ಮುಂದಾಗಿದ್ದು, ಭತ್ತದ ಸಸಿಮಡಿಗಳನ್ನು ಸಿದ್ಧಗೊಳಿಸಿ ಇಟ್ಟುಕೊಂಡಿದ್ದಾರೆ. ಕೆಲ ರೈತರು ನಾಟಿ ಕಾರ್ಯಕ್ಕೆ ಟ್ರ್ಯಾಕ್ಟರ್‌ಗಳ ಮೂಲಕ ಕೃಷಿ ಭೂಮಿ ಸಿದ್ಧಗೊಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ಅಂಜನಾಪುರ ಜಲಾಶಯ ಭರ್ತಿ ಆಗಿರುವುದು ಭತ್ತ ಬೆಳೆಯಲು ಅನುಕೂಲವಾಗಿದೆ. ಜಲಾಶಯದ ನೀರು ಪೋಲಾಗದಂತೆ ತಡೆಗಟ್ಟಲು ನಾಲೆಗಳ ಹೂಳೆತ್ತಬೇಕು. ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಅಚ್ಚುಕಟ್ಟು ರೈತರ ಮನವಿಯಾಗಿದೆ.

ಮೆಕ್ಕೆಜೋಳ ಬೆಳೆದ ರೈತರು ಆತಂಕ: ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಜೂನ್‌ ತಿಂಗಳ ಆರಂಭದಲ್ಲಿ ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ನಡುವೆ ಸಮರ್ಪಕವಾಗಿ ಮಳೆ ಸುರಿಯದ್ದರಿಂದ ಒಣಗಿದ್ದ ಮೆಕ್ಕೆಜೋಳವನ್ನು ಅಳಿಸಿ ಪುನಃ ಬಿತ್ತನೆ ಮಾಡಿದ್ದರು. ಆದರೆ ಜುಲೈ ತಿಂಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಫಲವಾಗಿ ಕೃಷಿ ಭೂಮಿ ಜೌಗು ಹಿಡಿದು ಮತ್ತೆ ಮೆಕ್ಕೆಜೋಳದ ಬೆಳೆಗೆ ಹಾನಿ ಉಂಟಾಗಿದ್ದು, ಬಹುತೇಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

***

ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರಸ್ತುತ ಭತ್ತದ ಬೆಳೆ ನಾಟಿ ಮಾಡಲು ಪೂರಕ ವಾತಾವರಣವಿದೆ. ರೈತರು ಹಿಂದೇಟು ಹಾಕದೇ ನಾಟಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಭತ್ತ ಬೆಳೆಯುವವರು ಆ. 16ರೊಳಗೆ ಬೆಳೆ ವಿಮೆ ಮಾಡಿಸಬೇಕು.

ಡಾ.ಕಿರಣ್ ಕುಮಾರ್ ಹರ್ತಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ

***

ಜುಲೈ ತಿಂಗಳಲ್ಲಿ ಮಳೆ ಹೆಚ್ಚು ಸುರಿದ ಕಾರಣ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ. ಮೆಕ್ಕೆಜೋಳ ಉತ್ತಮ ಇಳುವರಿ ಬರುವುದು ಕಷ್ಟವಾಗಿದೆ.

ಮಾರುತಿ, ಯುವ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT