ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪಿಎಂ ಅರಣ್ಯ ಭೂಮಿ ಉಳಿವಿಗೆ ಆಗ್ರಹ

ಸಿಸಿಎಫ್‌ ಕಚೇರಿ ಮುತ್ತಿಗೆ ತಡೆದ ಪೊಲೀಸರ ವಿರುದ್ಧ ಆಕ್ರೋಶ, ವಾಗ್ವಾದ
Last Updated 7 ಜನವರಿ 2021, 13:19 IST
ಅಕ್ಷರ ಗಾತ್ರ

ಶಿವಮೊಗ್ಗ: ಎಂಪಿಎಂಗೆ ನೀಡಿದ್ದ ಅರಣ್ಯಭೂಮಿ ಗುತ್ತಿಗೆ ಅವಧಿಯನ್ನು ಮತ್ತೆ 40 ವರ್ಷಗಳಿಗೆ ವಿಸ್ತರಿಸಿರುವ ರಾಜ್ಯ ಸರ್ಕಾರದ ಆದೇಶ ವಿರೋಧಿಸಿ ‘ನಮ್ಮೂರಿಗೆ ಅಕೇಶಿಯಾ ಬೇಡ ಹೊರಾಟ ಒಕ್ಕೂಟದ’ ಸದಸ್ಯರು ಗುರುವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹೊಳೆ ಬಸ್‌ನಿಲ್ದಾಣದ ಬಳಿಯ ಬೆಕ್ಕಿನಕಲ್ಮಠದ ಮುಂಭಾಗದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ಸಿಸಿಎಫ್‌ ಕಚೇರಿ ಪ್ರವೇಶ ದ್ವಾರದ ಬಳಿಯೇ ತಡೆದರು. ಈ ಸಮಯದಲ್ಲಿ ಪೊಲೀಸರು, ಪ್ರತಿಭಟನಾ ನಿರತರ ಮಧ್ಯೆ ತಳ್ಳಾಟ, ವಾಗ್ವಾದ ನಡೆಯಿತು. ಕಚೇರಿ ಬಳಿಗೆ ಬಿಡುವಂತೆ ಪಟ್ಟು ಹಿಡಿದರು. ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸಿಸಿಎಫ್‌ ರವಿಶಂಕರ್ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಸರ್ಕಾರಕ್ಕೆ ವರದಿ ನೀಡುವ ಭರವಸೆ ನೀಡಿದರು.

20 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಎಂಪಿಎಂಗೆ ಮತ್ತೆ ಗುತ್ತಿಗೆ ನೀಡಲಾಗಿದೆ. ರಾಜ್ಯ ಸರ್ಕಾರ ಈ ಆದೇಶ ತಕ್ಷಣ ಹಿಂದಕ್ಕೆ ಪಡೆಯಬೇಕು. ನಿತ್ಯಹರಿದ್ವರ್ಣದ ಪಶ್ಚಿಮಘಟ್ಟ ನಾಡಿನ ಜೀವನದಿಗಳ ಉಗಮ ಸ್ಥಾನ. ಜೀವ ವೈವಿಧ್ಯದ ತಾಣ. ಇಂತಹ ಪರಿಸರದಲ್ಲಿ ಸ್ವಲ್ಪ ಏರುಪೇರುಗಳಾದರೂ ಮಾನವ, ವನ್ಯಜೀವಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.

ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗ ವ್ಯಾಪ್ತಿಯ 33 ಸಾವಿರ ಹೆಕ್ಟೇರ್ ಸ್ವಾಭಾವಿಕ ಅರಣ್ಯ ಭೂಮಿಯನ್ನು ಸರ್ಕಾರ ನಾಲ್ಕು ದಶಕಗಳ ಹಿಂದೆ ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಅವಧಿ ಆಗಸ್ಟ್‌ 2020ಕ್ಕೆ ಅಂತ್ಯವಾಗಿತ್ತು. ಗುತ್ತಿಗೆ ಅವಧಿ ಮುಂದುವರಿಸದಂತೆ, ಅಕೆಶೀಯಾ, ನೀಲಗಿರಿ ಮತ್ತಿತರ ಏಕ ಜಾತಿಯ ಮರಗಳನ್ನು ತೆರವುಗೊಳಿಸಿ, ನೆಡುತೋಪುಗಳ ಸ್ಥಳಗಳಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸುವಂತೆ 7 ತಿಂಗಳಿನಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಪರಿಸರವಾದಿಗಳು, ಸ್ಥಳೀಯರ ಅಭಿಪ್ರಾಯ ಪರಿಗಣಿಸದೇ ಮತ್ತೆ ಗುತ್ತಿಗೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ಆದೇಶ ರದ್ದು ಮಾಡಬೇಕು. ನೆಡುತೋಪು ಭೂಮಿ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು. ಕಾರ್ಖಾನೆ ಮಾರಾಟ ಮಾಡಿದರೂ, ಅರಣ್ಯ ಭೂಮಿ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಮಲೆನಾಡಿನ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅರಣ್ಯಭೂಮಿ ಖಾಸಗೀಕರಣ ಮಾಡಬಾರದು. ಮಲೆನಾಡು ಬಯಲು ಸೀಮೆಯಾಗಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಕೆ.ಪಿ.ಶ್ರೀಪಾಲ್, ಕೆ.ಟಿ.ಗಂಗಾಧರ್, ಕಲ್ಕಳಿ ವಿಠಲಹೆಗ್ಡೆ, ಅಖಿಲೇಶ್ ಚಿಪ್ಪಳಿ, ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ಬಿ.ಎಂ. ಕುಮಾರಸ್ವಾಮಿ, ಎಂ.ಗುರುಮೂರ್ತಿ, ಚಾರ್ವಕ ರಘು, ಸುರೇಶ್ ಹರಸಾಳು, ಶಶಿಸಂಪಳ್ಳಿ, ರಾಜೇಂದ್ರ ಕಂಬಳಗೆರೆ, ಜಿ.ಡಿ.ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT