ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮರಿ: ಕೋಮಾ ಸ್ಥಿತಿಯಲ್ಲಿ ಆಂಬುಲೆನ್ಸ್

ನಾಲ್ಕು ದಿನಗಳಿಂದ ವೆಂಟಿಲೇಟರ್ ಆಂಬುಲೆನ್ಸ್ ಸೇವೆ ಸ್ಥಗಿತ
Last Updated 9 ಜುಲೈ 2022, 6:06 IST
ಅಕ್ಷರ ಗಾತ್ರ

ತುಮರಿ: ಶರಾವತಿ ಮುಳುಗಡೆ ಸಂತ್ರಸ್ತರ ನೆರವಿಗೆ ಮೀಸಲಿರಿಸಿದ್ದ ಆಂಬುಲೆನ್ಸ್ ಸೇವೆ ಸಿಗದೆ ಜನರು ಹೈರಾಣಾಗಿದ್ದಾರೆ.

ದ್ವೀಪದ ತುಮರಿ ಭಾಗದ ಜನ ಅನಾರೋಗ್ಯಕ್ಕೆ ಒಳಗಾದರೆ ದಿನದ 24 ಗಂಟೆಯೂ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಮಂಜೂರಾದ ವಿಶೇಷ ತುರ್ತು ವಾಹನ (ಆಂಬುಲೆನ್ಸ್‌) ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಹೆದ್ದಾರಿ ಪಕ್ಕದಲ್ಲೇ ಕೆಟ್ಟು ನಿಂತಿದೆ.

ನಾಲ್ಕು ದಿನಗಳ ಹಿಂದೆ ಸಾಗರ ಪಟ್ಟಣದಿಂದ ಹಿಂತಿರುಗುವಾಗ ವೆಂಟಿಲೇಟರ್ ವ್ಯವಸ್ಥೆ ಇರುವ ಆಂಬುಲೆನ್ಸ್ ಲಾಂಚ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡು ನಿಂತಿದೆ. ವಾಹನದ ಸೆನ್ಸಾರ್ ವ್ಯವಸ್ಥೆಯ ದೋಷದ ಕಾರಣ ಈ ಸಮಸ್ಯೆಯಾಗಿದೆ. ನಂತರ ನಡುದಾರಿಯಲ್ಲಿ ಕೈಕೊಟ್ಟ ವಾಹನವನ್ನು ಖಾಸಗಿ ವಾಹನದ ಸಹಾಯದಿಂದ ಎಳೆದುಕೊಂಡು ಬಂದು ತುಮರಿ ವೃತ್ತದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಲಾಗಿದೆ.

‘ವೆಂಟಿಲೇಟರ್ ಇರುವ ವಾಹನವನ್ನು ನಿಲ್ಲಿಸಲು ಆಸ್ಪತ್ರೆಯಲ್ಲಿ ಶೆಡ್ ನಿರ್ಮಾಣ ಮಾಡಿಲ್ಲ. ರಸ್ತೆ ಪಕ್ಕದಲ್ಲಿ ನಿಲ್ಲಿಸುವುದರಿಂದ ವಾಹನದೊಳಗೆ ನೀರಿನ ಸೋರಿಕೆ, ತೇವಾಂಶ ಹೋಗಿ ಅದರ ಸೆನ್ಸಾರ್ ವ್ಯವಸ್ಥೆ ಹಾಳಾಗುತ್ತದೆ’ ಎಂದು ಸ್ಥಳೀಯರ ದೂರಿದ್ದಾರೆ.

ನಾಲ್ಕು ದಿನಗಳಿಂದ ಆಂಬುಲೆನ್ಸ್ ಸೇವೆ ವ್ಯತ್ಯಯವಾಗಿದ್ದರೂ ಆರೋಗ್ಯ ಇಲಾಖೆ ಈ ಕುರಿತು ಮೌನವಹಿಸಿದೆ. ಇದರಿಂದಾಗಿ ಕರೂರು ಹೋಬಳಿಯ ಕುದರೂರು, ಎಸ್.ಎಸ್. ಭೋಗ್, ಚನ್ನಗೊಂಡ, ತುಮರಿ ಗ್ರಾಮದ ಜನರು ಅನಿವಾರ್ಯವಾಗಿ 75 ಕಿ.ಮೀ. ದೂರದಲ್ಲಿರುವ ಹೊಸನಗರದ ಆಂಬುಲೆನ್ಸ್ ಪಡೆಯಲು ಸುಮಾರು 2 ಗಂಟೆಗಳ ಕಾಲ ಕಾಯಬೇಕಿದೆ.

ಇನ್ನು ಕಾರ್ಗಲ್ 40 ಕಿ.ಮೀ. ದೂರದಲ್ಲಿದ್ದು, ಅದು ಕೂಡ ಕೈಗೆಟುಕುತ್ತಿಲ್ಲ. ಹೀಗಾಗಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ವಾಹನಗಳ ಮೊರೆ ಹೋಗುವ ಅನಿವಾರ್ಯತೆ ಇದೆ.

ಕಳೆದ ಫೆಬ್ರುವರಿಯಿಂದ ಇಲ್ಲಿಯವರೆಗೆ ಆಂಬುಲೆನ್ಸ್‌ ಅವ್ಯವಸ್ಥೆಯಿಂದಾಗಿ 45 ದಿನಗಳ ಹಸುಗೂಸು ಸೇರಿ ನಾಲ್ಕು ಜೀವಗಳು ಬಲಿಯಾಗಿವೆ. ಇದರಿಂದ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಸಾಕಷ್ಟು ಜಟಾಪಟಿ ನಡೆದಿದೆ.

ಅವ್ಯವಸ್ಥೆ ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ತುಮರಿ ಆಂಬುಲೆನ್ಸ್‌ ಸುಸ್ಥಿತಿಯಲ್ಲಿಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಸದ್ಯ ಆಂಬುಲೆನ್ಸ್ ನಿರ್ವಹಣೆ ಜಿ.ವಿ.ಕೆ. ಸಂಸ್ಥೆ ಮಾಡುತ್ತಿದ್ದು, ಅವ್ಯವಸ್ಥೆ ಸರಿಪಡಿಸಲು ಸಂಸ್ಥೆಗೆ ಮತ್ತೂಮ್ಮೆ ಪತ್ರ ಬರೆಯಲಾಗುವುದು’ ಎಂದು ಪ್ರತಿಕ್ರಿಯಿಸಿದರು.

***

ಎರಡು ದಿನಗಳಲ್ಲಿ ಸೇವೆಗೆ ಲಭ್ಯ
‘ಶೀಘ್ರವೇ ಆಂಬುಲೆನ್ಸ್ ದುರಸ್ತಿಗೆ ಹೋಗಲಿದ್ದು, ಎರಡು ದಿನಗಳಲ್ಲಿ ಸೇವೆಗೆ ಸಿಗಲಿದೆ. ತೀವ್ರ ಮಳೆಯಿಂದಾಗಿ ದುರಸ್ತಿಗೆ ತೆಗೆದುಕೊಂಡು ಹೋಗಲು ಸಮಸ್ಯೆಯಾಗಿದೆ. ಆಂಬುಲೆನ್ಸ್ ವೆಂಟಿಲೇಟರ್ ನಿರ್ವಹಣೆಗೆ ಪರಿಣಿತ ವೈದ್ಯರ ಅವಶ್ಯಕತೆ ಇದೆ. ಇದನ್ನು ಗಮನಿಸಬೇಕು’ ಎನ್ನುತ್ತಾರೆ ಜಿ.ವಿ.ಕೆ. ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ದುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT