ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಲ್ಲಿ ಲಾಭ ಕಂಡ ಎಂಜಿನಿಯರ್

ಬೆಂಗಳೂರಿನ ಕಚೇರಿ ಕೆಲಸ ಮನೆಯಲ್ಲಿ ನಿರ್ವಹಿಸುತ್ತಲೇ ಕೃಷಿಯತ್ತ ಚಿತ್ತ
Last Updated 28 ಏಪ್ರಿಲ್ 2021, 5:12 IST
ಅಕ್ಷರ ಗಾತ್ರ

ಕುಂಸಿ: ಆಸಕ್ತಿ, ಶ್ರಮ, ಶ್ರದ್ಧೆ ಇದ್ದರೆ ಕೃಷಿಯಲ್ಲಿ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಎಂಜಿನಿಯರ್‌ ಸಂತೋಷ ನಾಯ್ಕ ಉತ್ತಮ ನಿದರ್ಶನ.

ಸಮೀಪದ ಕೊರಗಿಯ ಸಂತೋಷ ನಾಯ್ಕ ಬೆಳೆದದ್ದು ಕೃಷಿ ಕುಟುಂಬದಲ್ಲಾದರೂ ಓದಿದ್ದು ಎಂಜಿನಿಯರಿಂಗ್‌. ಬೆಂಗಳೂರಿನಲ್ಲಿ ಆಟೊಮೊಬೈಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಅವರು ಕೃಷಿಯತ್ತಲೂ ಚಿತ್ತ ಹರಿಸಿ ಯಶಸ್ಸು ಕಂಡಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಲೇ ಕೃಷಿಯತ್ತ ದೃಷ್ಟಿ ನೆಟ್ಟಿದ್ದ ಸಂತೋಷ ಅವರಿಗೆ ವರ್ಷದ ಹಿಂದೆ ಕೊರೊನಾ ಕಾರಣ ಎದುರಾದ ಲಾಕ್‌ಡೌನ್‌ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡಿತು. ಪ್ರಸ್ತುತ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತ ಕೃಷಿ ಕಾಯಕದಲ್ಲೂ ನಿರತರಾಗಿದ್ದಾರೆ.

ತಮ್ಮ ಎಂಟು ಎಕರೆ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದಿರುವ ಸಂತೋಷ, ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬೆಳೆಗಳಿಗೆ ಹಾಕದೆ ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆದಿದ್ದಾರೆ. ಜನರಿಗೆ ವಿಷಮುಕ್ತ ಆಹಾರ ಒದಗಿಸುವ ಉದ್ದೇಶ ಅವರದ್ದಾಗಿದೆ.

ಒಂದು ಎಕರೆ ಜಾಗದಲ್ಲಿ ಅರಣ್ಯ ಕೃಷಿ ಮಾಡಿದ್ದು ಸಿಲ್ವರ್, ಹೆಬ್ಬೇವು, ಸಾಗವಾನಿ ಹಾಗೂ ಮಹಗನಿ ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ಉಪಬೆಳೆಗಳಾಗಿ ಕಾಳುಮೆಣಸು, ಅಡಿಕೆ, ದಾಲ್ಚಿನ್ನಿ ಗಿಡಗಳನ್ನು ಹಾಕಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ನೇರಳೆ, ಹಲಸು, ಮಾವು, ನಿಂಬು, ಪೇರಲ, ಗೋಡಂಬಿ, ಸಪೋಟ, ಸೀತಾಫಲ, ಮೂಸಂಬಿ ಹಣ್ಣಿನ ಗಿಡಗಳನ್ನು ಬೆಳೆದಿದ್ದು, ಅದರಲ್ಲಿ ಉಪಬೆಳೆಗಳಾಗಿ ಗೆಡ್ಡೆಕೋಸು, ಬಿನ್ಸ್, ಹಸಿಮೆಣಸು, ಬೆಂಡೆ, ಬದನೆ, ಟೊಮೊಟೊ, ಹೀರೆಕಾಯಿ, ಹಾಗಲಕಾಯಿ ಇನ್ನೂ ಹಲವಾರು ತರಕಾರಿಗಳನ್ನು ಬೆಳೆದಿದ್ದಾರೆ. ಜತೆಗೆ ಕೊತ್ತಂಬರಿ, ಪಾಲಕ್, ಹರಿವೆ ಸೊಪ್ಪುಗಳನ್ನು ಹಾಕಿದ್ದಾರೆ.

ಒಂದು ಎಕರೆ ತೆಂಗಿನ ತೋಟ ಮಾಡಿದ್ದು, ಉಪಬೆಳೆಗಳಾಗಿ ಬಾಳೆ, ಪಪ್ಪಾಯ ಬೆಳೆದಿದ್ದಾರೆ. ಇನ್ನುಳಿದ ಮೂರು ಎಕರೆ ಜಮೀನಿನಲ್ಲಿ ಅಡಕೆ ತೋಟ ಮಾಡಿಕೊಂಡಿದ್ದು ಉಪಬೆಳೆಗಳಾಗಿ ವೀಳ್ಯದೆಲೆ, ಅರಿಶಿಣ, ನುಗ್ಗೆ ಮರಗಳನ್ನು ಬೆಳೆಸಿದ್ದಾರೆ.

ಸತತ ಶ್ರಮ, ವಿಶೇಷ ಆಸಕ್ತಿಯಿಂದಾಗಿ ಈ ಎಲ್ಲ ಬೆಳೆಗಳೂ ಸಂತೋಷ ನಾಯ್ಕರ ಕೈ ಹಿಡಿದಿವೆ. ಎಲ್ಲ ಬೆಳೆಗಳಿಂದ ವರ್ಷಪೂರ್ತಿ ಆದಾಯ ಬರುತ್ತಿದ್ದು, ಅವರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ. ಅವರ ಬೆನ್ನೆಲುಬಾಗಿ ತಂದೆ ಮಹದೇವನಾಯ್ಕ, ತಾಯಿ ರಾಧಮ್ಮ, ಪತ್ನಿ ಹಾಗೂ ಮಗ ನಿಂತಿದ್ದಾರೆ. ಎಲ್ಲರ ಶ್ರಮದಿಂದ ಸಂತೋಷ ಮಾದರಿ ರೈತರಾಗಿ ಬೆಳೆದು ಸುತ್ತಮುತ್ತಲಿನ ಜನರ ಗಮನ ಸೆಳೆಯುತ್ತಿದ್ದಾರೆ.

ಉತ್ತಮ ಆದಾಯ: ಸಾವಯವ ಗೊಬ್ಬರವನ್ನಷ್ಟೇ ಬಳಸಿ ಬೆಳೆದಿರುವ ತರಕಾರಿ ಹಾಗೂ ಹಣ್ಣಿನಿಂದಲೇ ವರ್ಷಕ್ಕೆ ₹ 5 ಲಕ್ಷ ಆದಾಯ ಗಳಿಸುತ್ತಿರುವ ಅವರು, ಎಲ್ಲ ಬೆಳೆಗಳಿಂದ ವರ್ಷಕ್ಕೆ ಸುಮಾರು ₹ 30 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಮುಂದಿನ ಯೋಜನೆಗಳು: ನೀರಿನ ಕೊರತೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಕೊಳವೆ ಬಾವಿ ಕೊರೆಯಿಸಿದ್ದಾರೆ. ಜತೆಗೆ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದು, ಗೋವು ಆಧಾರಿತ ಉತ್ಪನ್ನಗಳನ್ನು ಮಾಡಲು ತರಬೇತಿಯನ್ನೂ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT