ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಬಗೆಹರಿಯದ ‘ಎಂಡಿಎಫ್‌’ ಆಡಳಿತಾತ್ಮಕ ಬಿಕ್ಕಟ್ಟು

ಪ್ರತಿಷ್ಠಿತರ ನಡುವಿನ ಕಾದಾಟದಲ್ಲಿ ಬಸವಳಿದ ಸಂಸ್ಥೆಯ ಸಿಬ್ಬಂದಿ
Last Updated 26 ಜೂನ್ 2022, 5:51 IST
ಅಕ್ಷರ ಗಾತ್ರ

ಸಾಗರ: ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಆಡಳಿತಾತ್ಮಕ ಬಿಕ್ಕಟ್ಟು ಮೂರು ತಿಂಗಳಿನಿಂದ ಬಗೆಹರಿಯದೆ ತೀವ್ರ ಸ್ವರೂಪ ಪಡೆದಿದೆ. ಆಡಳಿತ ಮಂಡಳಿಯ ಎರಡು ಗುಂಪುಗಳಲ್ಲಿರುವ ಪ್ರತಿಷ್ಠಿತರ ಕಾದಾಟದಿಂದ ಸಂಸ್ಥೆಯ ಬೋಧಕರು, ಬೋಧಕೇತರ ಸಿಬ್ಬಂದಿ ಬಳಲುವಂತಾಗಿದೆ.

ಆಡಳಿತಾತ್ಮಕ ಬಿಕ್ಕಟ್ಟು ತಲೆದೋರಿರುವ ಕಾರಣ ಸರ್ಕಾರ, ವಿಶ್ವವಿದ್ಯಾಲಯ ಮಟ್ಟದಲ್ಲಿ ಆಗಬೇಕಿರುವ ಹಲವು ಕೆಲಸಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದರೂ ಅಂತಹ ಯಾವುದೇ ಲಕ್ಷಣ ಕಂಡುಬರದೆ ಇರುವುದು ಸಮಸ್ಯೆ ಜಟಿಲವಾಗಲು ಕಾರಣವಾಗಿದೆ.

ಎಂಡಿಎಫ್ ಎಂದೇ ಪರಿಚಿತವಾಗಿರುವ ಈ ಸಂಸ್ಥೆ 60ರ ದಶಕದಿಂದ ಇಲ್ಲಿಯವರೆಗೂ ಮಲೆನಾಡಿನ ವಿದ್ಯಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡಿದೆ.ಎಲ್‌.ಕೆ.ಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಶಿಕ್ಷಣವನ್ನು ಯಾವತ್ತೂ ವ್ಯಾಪಾರದ ಮಟ್ಟಕ್ಕೆ ಇಳಿಸದ ಹೆಗ್ಗಳಿಕೆ ಹೊಂದಿದೆ. ಈ ಭಾಗದ ಹಲವು ದಾನಿಗಳು ತಮ್ಮ ಭೂಮಿಯನ್ನು ಕೊಡುಗೆಯಾಗಿ ನೀಡಿದ ಕಾರಣ ಸಂಸ್ಥೆ ಸಮೃದ್ಧವಾಗಿ ಬೆಳೆದುಬಂದ ಇತಿಹಾಸ ಹೊಂದಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆಡಳಿತ ಮಂಡಳಿಯಲ್ಲಿ ಕಂಡುಬಂದ ಬಿಕ್ಕಟ್ಟು ಸಂಸ್ಥೆಯ ಹಿನ್ನಡೆಗೆ ದಾರಿ ಮಾಡಿಕೊಟ್ಟಿದೆ. ಮಾರ್ಚ್ 17ರಂದು ನಡೆದ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಶಿಕ್ಷಣ ಸಂಸ್ಥೆಯ ಆವರಣದಲ್ಲೇ ಹಲ್ಲೆ ಪ್ರಕರಣ ನಡೆದ ಕಹಿ ಘಟನೆಯೂ ದಾಖಲಾಗಿದೆ.

ಇದೇ ಸಭೆಯಲ್ಲಿ ಒಂದು ಗುಂಪು ಹಿರಿಯ ಸಹಕಾರಿ ಮುಖಂಡ ಎಂ.ಹರನಾಥ ರಾವ್ ಅವರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಮತ್ತೊಂದು ಗುಂಪು ನಿಸರಾಣಿ ಶ್ರೀಪಾದ ಹೆಗಡೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಈಗ ಈ ಎರಡೂ ಗುಂಪು ತಾವೇ ಆಡಳಿತ ಮಂಡಳಿಯ ಪದಾಧಿಕಾರಿಗಳು ಎಂದು ಪ್ರತಿಪಾದನೆ ಮಾಡುತ್ತಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.

ಎಂ.ಹರನಾಥ ರಾವ್ ಅವರ ಗುಂಪು ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಿ ಪಟ್ಟಿಯನ್ನು ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಿದ್ದರೂ ಅದಕ್ಕೆ ಮಾನ್ಯತೆ ನೀಡುವ ಸಂಬಂಧ ಈವರೆಗೂ ಅಧಿಕಾರಿಗಳು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದು ಆ ಗುಂಪಿನ ಆರೋಪ.

ಈ ನಡುವೆ ಶಿಕ್ಷಣ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಹರನಾಥ ರಾವ್ ಗುಂಪು ನಿರ್ವಹಿಸದಂತೆ ಶ್ರೀಪಾದ ಹೆಗಡೆ ನಿಸರಾಣಿ ಗುಂಪು ತಕರಾರು ಅರ್ಜಿ ನೀಡಿರುವುದು ಉಪನ್ಯಾಸಕರ, ಸಿಬ್ಬಂದಿ ವರ್ಗದವರ ವೇತನ ಪಾವತಿಗೆ ತೊಡಕಾಗಿ ಪರಿಣಮಿಸಿದೆ.

89 ಬೋಧಕರು, 54 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು,→ಇವರಿಗೆ ಸಂಸ್ಥೆಯೆ ವೇತನ ಪಾವತಿಸ
ಬೇಕಿದೆ. ಉಳಿದ 18 ಬೋಧಕರಿಗೆ, 7 ಬೋಧಕೇತರ ಸಿಬ್ಬಂದಿಗೆ ಸರ್ಕಾರವೇ ವೇತನ ಪಾವತಿಸುತ್ತಿದೆ. ಸಕಾಲದಲ್ಲಿ ವಿಶ್ವವಿದ್ಯಾಲಯ, ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕ ಕಟ್ಟಲು ಸಾಧ್ಯವಾಗದೆ ನವೀಕರಣ, ಮಾನ್ಯತೆ ಮೊದಲಾದ ಪ್ರಕ್ರಿಯೆಗಳಿಗೆ ತೊಡಕು ಉಂಟಾಗುತ್ತಿದೆ.

ಆಡಳಿತ ಮಂಡಳಿಯ ಒಂದು ಗುಂಪು ಈಚೆಗೆ ಎಂಡಿಎಫ್ ಪದವಿಪೂರ್ವ ಕಾಲೇಜಿಗೆ ಆಗಮಿಸಿ ಗಲಾಟೆ ಕೂಡ ಮಾಡಿರುವುದು ಅಲ್ಲಿನ ಬೋಧಕರು, ಬೋಧಕೇತರ ಸಿಬ್ಬಂದಿಗೆ ಯಾರ ಮಾತನ್ನು ಕೇಳಬೇಕು ಎಂದು ಗೊತ್ತಾಗದಂತಾಗಿದೆ. ಈ ಮೂಲಕ ಎಂಡಿಎಫ್ ಅಡಿ ನಡೆಯುತ್ತಿರುವ ಸಂಸ್ಥೆಗಳ ಶೈಕ್ಷಣಿಕ ವಾತಾವರಣ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂಬುದು ಅಲ್ಲಿನ ಸಿಬ್ಬಂದಿಯ ಅಳಲು.

ಈ ಎಲ್ಲಾ ಬೆಳವಣಿಗೆಗಳನ್ನು ಖಂಡಿಸಿ ಈಚೆಗೆ ಸಂಸ್ಥೆಗೆ ಭೂ ದಾನ ಮಾಡಿದ ದಾನಿಗಳು, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು ಹಾಗೂ ವಿವಿಧ ಸಂಸ್ಥೆಗಳ ಪ್ರಮುಖರು ಎಂ.ಹರನಾಥ ರಾವ್ ಗುಂಪಿಗೆ ಸಹಕಾರ ಇಲಾಖೆ ಅಧಿಕಾರಿಗಳು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಶೀಘ್ರಎಂಡಿಎಫ್ ಆಡಳಿತಾತ್ಮಕ ವಿವಾದ ಬಗೆಹರಿದು ಸಂಸ್ಥೆಯಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲಿ ಎಂಬುದು ಈ ಭಾಗದ ಸಾರ್ವಜನಿಕರ ಒತ್ತಾಸೆ.

ಎಂಡಿಎಫ್ ಮೇಲೆ ಪ್ರತಿಷ್ಠಿತ ರಾಜಕಾರಣಿಗಳ ಕಣ್ಣು
ಎಂಡಿಎಫ್ ಸಂಸ್ಥೆಯು ನಗರದ ಹೊರವಲಯದಲ್ಲಿರುವ ಎಲ್.ಬಿ. ಕಾಲೇಜಿನ ಆವರಣದಲ್ಲಿ ಬೆಲೆಬಾಳುವ ಭೂ ಪ್ರದೇಶವನ್ನು ಹೊಂದಿದ್ದು, ಅದರ ಮೇಲೆ ಜಿಲ್ಲೆಯ ಪ್ರತಿಷ್ಠಿತ ರಾಜಕಾರಣಿಗಳ ಕಣ್ಣು ಬಿದ್ದಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈಗಾಗಲೇ ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪ್ರತಿಷ್ಠಿತರು ಎಂಡಿಎಫ್ ಸಂಸ್ಥೆಯ ಮೇಲೆ ಹಿಡಿತ ಸಾಧಿಸಿ ಕ್ರಮೇಣ ಅದನ್ನು ತಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಸಂಸ್ಥೆಯ ನೂತನ ಪದಾಧಿಕಾರಿಗಳ ಪಟ್ಟಿಗೆ ಮಾನ್ಯತೆ ನೀಡಲು ಸಹಕಾರ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

*

ಎಂಡಿಎಫ್ ಶಿಕ್ಷಣ ಸಂಸ್ಥೆಗೆ ಕೈ ಬಾಯಿ ಶುದ್ಧವಿರುವ ಹಿರಿಯರಾದ ಎಂ.ಹರನಾಥ ರಾವ್ ಅಂತಹವರು ಅಧ್ಯಕ್ಷರಾಗಲು ಒಪ್ಪಿರುವುದು ನಮ್ಮ ಸುಯೋಗ. ಅವರಿಗೆ ಸಹಕಾರ ದೊರಕಬೇಕಿದೆ.
-ಎಚ್.ಎಂ. ಶಿವಕುಮಾರ್, ನಿವೃತ್ತ ಉಪನ್ಯಾಸಕರು. ಎಲ್.ಬಿ.ಕಾಲೇಜು

*

ನಾನು ಕಾನೂನುಬದ್ಧವಾಗಿ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಈ ಬಗ್ಗೆ ದಾಖಲೆಗಳಿವೆ. ಹರನಾಥರಾವ್ ಅವರ ಅಧ್ಯಕ್ಷತೆಯ ಸಮಿತಿಗೆ ಮಾನ್ಯತೆ ಇಲ್ಲ.
-ಶ್ರೀಪಾದ ಹೆಗಡೆ ನಿಸರಾಣಿ, ಎಂ.ಡಿ.ಎಫ್. ನಿಕಟಪೂರ್ವ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT