ಆನಂದಪುರ: ಇಲ್ಲಿನ ಪೊಲೀಸ್ ಠಾಣೆ ಎದುರಿನ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಲುಗಡೆಯಾಗುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆತಿದೆ. ಹೆದ್ದಾರಿ ಪಕ್ಕದ ಚರಂಡಿಯನ್ನು ಶುಕ್ರವಾರ ದುರಸ್ತಿ ಮಾಡಲಾಗಿದ್ದು, ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ ಎಂದು ‘ಪ್ರಜಾವಾಣಿ’ಯಲ್ಲಿ ಗುರುವಾರ ಸುದ್ದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು, ನೀರು ಹರಿದುಹೋಗುವ ವ್ಯವಸ್ಥೆ ಮಾಡಿದ್ದು, ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತರಲಾಗಿತ್ತು. ವರದಿ ಪ್ರಕಟವಾದ 24 ಗಂಟೆಯೊಳಗೆ ಚರಂಡಿ ದುರಸ್ತಿ ಕಾರ್ಯ ಮಾಡಲಾಗಿದೆ. ಹೀಗಾಗಿ, ಸಿದ್ದೇಶ್ವರ ಕಾಲೋನಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಬರುವ ನೂರಾರು ವಿದ್ಯಾರ್ಥಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಮಳೆ ಬಂತೆಂದರೆ ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಮೈನೆನೆಸಿಕೊಂಡು ಶಾಲೆಗೆ ಹೋಗಬೇಕಾಗಿತ್ತು. ಇಲ್ಲವೇ ಶಾಲೆಗೆ ಹೋಗುವ ಹಾಗೂ ಬರುವ ಸಮಯದಲ್ಲಿ ರಸ್ತೆಯ ಒಂದೇ ಬದಿಯಲ್ಲಿ ಭಯದಿಂದ ಸಂಚರಿಸಬೇಕಾಗಿತ್ತು. ದ್ವಿಚಕ್ರ ವಾಹನ ಸವಾರರು ಸಹ ಎಷ್ಟೋ ಬಾರಿ ಕೆಸರು ನೀರಿನ ಸ್ನಾನ ಮಾಡಿಕೊಂಡೇ ಸಂಚರಿಸುವ ಸ್ಥಿತಿ ಇತ್ತು. ಇವೆಲ್ಲ ಸಮಸ್ಯೆಗಳಿಗೆ ಈಗ ಮುಕ್ತಿ ಸಿಕ್ಕಂತಾಗಿದೆ.
ವರದಿಗೆ ತಕ್ಷಣ ಸ್ಪಂದಿಸಿ ಚರಂಡಿ ದುರಸ್ತಿ ಕಾರ್ಯ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವರ್ಗಕ್ಕೆ ದ್ವಿಚಕ್ರ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.