ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಮಗಾರಿಯಲ್ಲೂ ಬಿಜೆಪಿ ಭ್ರಷ್ಟಾಚಾರ ಬಯಲು: ಸುಂದರೇಶ್‌

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆರೋಪ
Last Updated 14 ಮೇ 2022, 2:33 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ನಗರದ ಎಪಿಎಂಸಿ ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ಟೆಂಡರ್ ಮೊತ್ತಕ್ಕಿಂತ ಹೆಚ್ಚುವರಿ ಹಣ ಬಿಡುಗಡೆ ಮಾಡಿರುವುದು ಭಾರಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆರೋಪಿಸಿದ್ದಾರೆ.

‘ಸಾಗರ ಮುಖ್ಯರಸ್ತೆಯ ಎಪಿಎಂಸಿ ಮುಖ್ಯದ್ವಾರದ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಬೆಂಗಳೂರಿನ ನೀಲ್ ಕನ್‌ಸ್ಟ್ರಕ್ಷನ್ ಅವರಿಗೆ ಅಂದಾಜು ₹ 10 ಕೋಟಿ ಟೆಂಡರ್ ಆಗಿದ್ದು, ಅದೇ ಕಾಮಗಾರಿ ಮುಗಿಯುವ ಮೊದಲೇ ಹೆಚ್ಚುವರಿಯಾಗಿ ₹ 2 ಕೋಟಿ ಬಿಡುಗಡೆಯಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಅದೇ ರೀತಿ ಸಣ್ಣ ಮಳಿಗೆಗಳ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ ₹ 3.75 ಕೋಟಿ ಇದ್ದು, ಇದಕ್ಕೂ ₹ 75 ಲಕ್ಷ ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿಯ ಯೋಗಿನರಸೀಪುರ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೋದಾಮುಗಳು, ಕಾಂಕ್ರೀಟ್ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ ₹ 10 ಕೋಟಿ ಟೆಂಡರ್ ಆಗಿದ್ದು, ಇಲ್ಲೂ ಕಾಮಗಾರಿ ಪೂರ್ಣಗೊಳ್ಳದೇ ಹೆಚ್ಚುವರಿ ₹ 1 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ದೂರಿದರು.

ಈ ಎಲ್ಲ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿದ್ದು, ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಸ್ಥಳದಲ್ಲೇ ಪ್ರತಿಭಟನೆ ನಡೆಸುವುದಲ್ಲದೇ ಎಸಿಬಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ನಿರ್ಮಿತಿ ಕೇಂದ್ರದ ಅಧಿಕಾರಿ ನಾಗರಾಜ್ ಅವರು 15 ವರ್ಷಗಳಿಂದ ಇಲ್ಲೇ ಬೇರು ಬಿಟ್ಟಿದ್ದು, ಟೆಂಡರ್ ಇಲ್ಲದೇ ನಡೆಸುವ ನೂರಾರು ಕೋಟಿ ವೆಚ್ಚದ ಕಾಮಗಾರಿಗಳನ್ನು ಸಬ್ ಕಂಟ್ರ್ಯಾಕ್ಟರ್‌ಗಳಿಗೆ ನೀಡಿ ವ್ಯಾಪಕ ಭ್ರಷ್ಟಾಚಾರ ಎಸಗಿದ್ದಾರೆ. ಯಾವುದೇ ಸರ್ಕಾರ ಬರಲಿ, ಈ ವ್ಯಕ್ತಿ ಅದೇ ಜಾಗದಲ್ಲಿ ಇರುವುದು ವಿಶೇಷ. ನಿರ್ಮಿತಿ ಕೇಂದ್ರದಿಂದ ನಡೆಸಿರುವ ಎಲ್ಲಾ ಕಾಮಗಾರಿಗಳ ಬಗ್ಗೆಯೂ ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಲಾಗುವುದು ಎಂದರು.

ಆರ್.ಟಿ.ಒ. ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿ ಎಲ್ಲಾ ಕಚೇರಿಗಳಲ್ಲೂ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದರ ಬಗ್ಗೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಿ.ಎಸ್. ಚಂದ್ರಭೂಪಾಲ್, ಎಂ. ಚಂದನ್, ಎಸ್.ಸಿ. ಚಂದ್ರಶೇಖರ್, ಇಕ್ಬಾಲ್ ನೇತಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT