ಬುಧವಾರ, ಜೂನ್ 16, 2021
28 °C
ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ

40 ಸಾವಿರ ಎಕರೆ ಕಾನು ಅರಣ್ಯ ಸಂರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕಾನು ಅರಣ್ಯ ಸಂರಕ್ಷಣಾ ಯೋಜನೆ ಜಾರಿಗೊಳಿಸಿದ ದಶಕದ ಬಳಿಕ ಜಿಲ್ಲೆಯ 40 ಸಾವಿರ ಎಕರೆ ಪ್ರದೇಶದ ಸಂರಕ್ಷಣೆ ಸಾಧ್ಯವಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ‘ಜಿಲ್ಲೆಯ ಕಾನು ಅರಣ್ಯಗಳು’ ಕಿರುಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಎಕರೆ ಇದ್ದ ಕಾನು ಅರಣ್ಯ ಪ್ರದೇಶ ಈಗ 1.40 ಲಕ್ಷ ಎಕರೆಗೆ ಇಳಿದಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ 70 ಲಕ್ಷ ಎಕರೆ ಸಂರಕ್ಷಿಸುವ ಗುರಿ ಇಟ್ಟುಕೊಂಡು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಿದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಪರಿಭಾವಿತ ಅರಣ್ಯ ಸಂರಕ್ಷಣೆಗೆ ಶಿಫಾರಸು: ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಭಾವಿತ ಅರಣ್ಯಭೂಮಿ ಇದೆ (ಕಂದಾಯ). ಅಂತಹ ಭೂಮಿ ಬಹುತೇಕ ಕಾನು ಅರಣ್ಯವಾಗಿದೆ. ಪ್ರತಿ ಗ್ರಾಮದ ಕಾನು ಅರಣ್ಯಗಳನ್ನೂ ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕು. ಜಿಪಿಎಸ್ ಮೂಲಕ ಗಡಿ ಗುರುತಿಸಿ, ನಕ್ಷೆ ರಚಿಸಬೇಕು. ಜಲಾನಯನ ಅಭಿವೃದ್ಧಿ ಯೋಜನೆಗಳಲ್ಲಿ ಕಾನು ಅರಣ್ಯ ಸಂರಕ್ಷಣೆಯನ್ನೂ ಸೇರಿಸಬೇಕು. ಈ ವ್ಯಾಪ್ತಿಯಲ್ಲಿ ಕಿರು ಅರಣ್ಯ ಉತ್ಪತ್ತಿ ಸಂಗ್ರಹಕ್ಕೆ ಕಡಿವಾಣ ಹಾಕಬೇಕು ಎಂಬ ಶಿಫಾರಸುಗಳನ್ನು ವರದಿಯಲ್ಲಿ ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಮಾತನಾಡಿ, ಕಾನು ಅರಣ್ಯವನ್ನು ಯಾವುದೇ ಉದ್ದೇಶಕ್ಕೆ ಮಂಜೂರು ಮಾಡುತ್ತಿಲ್ಲ. ಈಗಾಗಲೇ 43 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿದೆ. ಅವರು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅನಧಿಕೃತವಾಗಿ ಮಂಜೂರು ಮಾಡಲಾಗಿರುವ ಕಂದಾಯ ಅರಣ್ಯ ಭೂಮಿಯನ್ನು ಮರುಪರಿಶೀಲಿಸಿ, ಪ್ರಸ್ತಾವ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಸಾಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಸಾಗರ ವಿಭಾಗದಲ್ಲಿ 210 ಕಾನು ಪ್ರದೇಶಗಳಿವೆ. ಈ ವ್ಯಾಪ್ತಿಯಲ್ಲಿ 370 ಕಿ.ಮೀ. ಕಂದಕ ತೋಡಿ ಗಡಿ ಗುರುತಿಸಲಾಗಿದೆ. ಎಲ್ಲ ಕಾನುಗಳನ್ನೂ ಅಭಿವೃದ್ಧಿಪಡಿಸಲಾಗಿದೆ. 62 ಕಾನು ಪ್ರದೇಶದ 124 ಕಿ.ಮೀ ವ್ಯಾಪ್ತಿಯಲ್ಲಿ ಕಂದಕ ನಿರ್ಮಿಸಿ, ನಾಮಫಲಕ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಶಿವಮೊಗ್ಗ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಪರಿಸರ ತಜ್ಞ ಪ್ರೊ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.