ಗುರುವಾರ , ಅಕ್ಟೋಬರ್ 21, 2021
21 °C
ನಿರ್ವಹಣೆ, ಸ್ವಚ್ಛತೆಯ ಕೊರತೆ, ತಾಂತ್ರಿಕ ಸಮಸ್ಯೆ, ಹಣ ಪಡೆಯಲು ಪರದಾಟ

ಜಿಲ್ಲೆಯ ಭದ್ರತೆ ಇಲ್ಲದ ಎಟಿಎಂ ಕೇಂದ್ರಗಳು

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶಿವಮೊಗ್ಗ ನಗರ ಸೇರಿ ಜಿಲ್ಲೆಯ ಎಲ್ಲೆಡೆ ಭದ್ರತಾ ವ್ಯವಸ್ಥೆ ಇಲ್ಲದೆ ಎಟಿಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ನಗರದ ಬಹುಪಾಲು ಎಟಿಎಂಗಳಲ್ಲಿ ಕಾವಲುಗಾರರೇ ಇಲ್ಲ. ವ್ಯವಹಾರ ಗೊತ್ತಿಲ್ಲದವರಿಗೆ ನೆರವಾಗಲು ಇನ್ನೊಬ್ಬ ಗ್ರಾಹಕರೇ ಬರಬೇಕು. ಹಲವಾರು ಎಟಿಎಂಗಳಲ್ಲಿ ಹಣ ಇಲ್ಲದೆ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಎಟಿಎಂ ಕೇಂದ್ರಗಳ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಎಟಿಎಂನಲ್ಲಿ ಹಣ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಬ್ಯಾಂಕ್‌ ಆಡಳಿತ ವರ್ಗ ತಲೆಕೆಡಿಸಿಕೊಂಡಿಲ್ಲ.

ನಗರದಲ್ಲಿರುವ ಬಹುತೇಕ ಎಟಿಎಂಗಳು ಇದ್ದರೂ ಇಲ್ಲದಂತೆ ಇವೆ. ಅಲ್ಲಿ ಭದ್ರತೆಯೂ ಇಲ್ಲ, ಸುರಕ್ಷತೆಯೂ ಇಲ್ಲ. ಕೆಲ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆ. ಅವರಲ್ಲಿ ನಿವೃತ್ತರಾದ ವೃದ್ಧರ ಸಂಖ್ಯೆಯೇ ಹೆಚ್ಚು.

ನಗರದಲ್ಲಿರುವ ಶೇ 50ರಷ್ಟು ಎಟಿಎಂಗಳು ಒಂದಿಲ್ಲೊಂದು ತೊಂದರೆಯಿಂದ ಮುಚ್ಚಿರುತ್ತವೆ. ಇಲ್ಲ ಬಳಕೆಗೆ ಬಾರದಂತಹ ಸ್ಥಿತಿಯಲ್ಲಿರುತ್ತವೆ. ಜನಸಂದಣಿಯ ಪ್ರದೇಶಗಳಲ್ಲಿ ಇರುವ ಕೇಂದ್ರಗಳಲ್ಲಿನ ಯಂತ್ರಗಳೂ ಕಾರ್ಯನಿರ್ವಹಿಸುವುದಿಲ್ಲ. ಇದು ಬ್ಯಾಂಕ್‌ಗಳ ನಿರ್ವಹಣೆಯ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿವೆ.

ಕುವೆಂಪು ರಸ್ತೆ, ಬಾಲರಾಜ ಅರಸ್‌ ರಸ್ತೆ, ಹೊಳೆ ಬಸ್‌ ನಿಲ್ದಾಣ, ಸಾಹಿ ಗಾರ್ಮೆಂಟ್ಸ್‌, ಹೊಂಡ ಶೋ ರೂಂ, ಮಾರುತಿ ಶೋ ರೂಂ ಬಳಿಯ ಎಟಿಎಂಗಳಿಗೆ ಕಾವಲುಗಾರರೇ ಇಲ್ಲ.

₹ 100 ನೋಟು ಬರುವುದೇ ಇಲ್ಲ: ‘ಕೆಲವು ಎಟಿಎಂಗಳಲ್ಲಿ ₹ 100 ನೋಟು ಬರುವುದೇ ಇಲ್ಲ. ₹ 500 ನೋಟು ಪಡೆದುಕೊಳ್ಳಬೇಕು. ಅಗತ್ಯವಿರುವವರು ₹ 200, ಇಲ್ಲವೇ ₹ 500 ಡ್ರಾ ಮಾಡಬೇಕಿದೆ. ಇರುವ ಹಣದಲ್ಲೇ ₹ 500 ತೆಗೆದರೆ ನಿಗದಿತ ಹಣವಿಲ್ಲದ ದಂಡದ ಮೊತ್ತ ಕಡಿತಗೊಳ್ಳುವ ಸಾಧ್ಯತೆಗಳು ಇವೆ. ₹ 10 ಸಾವಿರ ಬೇಕಾದ ಸಮಯದಲ್ಲಿ ಕೇವಲ ₹ 5 ಸಾವಿರ ಸಿಗುತ್ತದೆ. ಅನಿವಾರ್ಯವಾಗಿ ಎರಡು ಬಾರಿ ವ್ಯವಹಾರ ಮಾಡಬೇಕಿದೆ’ ಎನ್ನುತ್ತಾರೆ ಪ್ರಾಧ್ಯಾಪಕ ಆರ್‌.ರವಿ.

ಬಹುತೇಕ ಎಟಿಎಂಗಳಲ್ಲಿ ಸ್ವಚ್ಛತೆ ಹಾಗೂ ಭದ್ರತೆ ಮರೀಚಿಕೆಯಾಗಿದೆ. ಹಣ ಪಡೆದಾಗ ಬರುವ ರಸೀದಿಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಕಸದ ಡಬ್ಬಿಗಳು ತುಂಬಿ ತುಳುಕುತ್ತಿದ್ದರೂ ಖಾಲಿ ಮಾಡುವ ಗೋಜಿಗೆ ಹೋಗಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾಗಳು ಇವೆಯಾದರೂ ಕೆಲಸ ನಿರ್ವಹಿಸುತ್ತವೆ ಎಂಬುದೇ ಅನುಮಾನ. ಕೆಲವೊಬ್ಬರು ಹಣ ತೆಗೆದುಕೊಳ್ಳುವಾಗ ಹಿಂದೆಯೇ ಮೂರ್ನಾಲ್ಕು ಜನ ಬಂದು ನಿಂತಿರುತ್ತಾರೆ.

 ಖಾತೆಯಲ್ಲಿ ಹಣವಿದ್ದರೂ ಗ್ರಾಹಕರ ಪರದಾಟ     

ನಗರದ ಬಹುತೇಕ ಎಟಿಎಂಗಳು ಬಾಗಿಲು ತೆರೆದಿದ್ದರೂ ಹಣವಿರುವುದಿಲ್ಲ. ತಾಂತ್ರಿಕ ದೋಷ, ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸಕಾಲದಲ್ಲಿ ಹಣ ಪಡೆಯಲಾಗುತ್ತಿಲ್ಲ. ರಾತ್ರಿ ಸಮಯದಲ್ಲಿ ಎಟಿಎಂಗಳನ್ನು ನಂಬಿಕೊಂಡು ಜನರು ಬರುವ ಸ್ಥಿತಿ ಇಲ್ಲ. ಹಲವರು ತುರ್ತಾಗಿ ಆಸ್ಪತ್ರೆ ಸೇರಿ ವಿವಿಧ ಕೆಲಸಗಳಿಗೆ ಬಂದು ಎಟಿಎಂಗಳಲ್ಲಿ ಹಣ ಸಿಗದಕ್ಕೆ ಪರದಾಡಿದ ನಿದರ್ಶನಗಳಿವೆ ಎನ್ನುತ್ತಾರೆ ಖಾಸಗಿ ಉದ್ಯೋಗಿ ಗಿರೀಶ್‌.

‘ಸಮಸ್ಯೆ ಪರಿಹಾರಕ್ಕೆ ಕ್ರಮ’

ಒಂದು ಎಟಿಎಂ ನಿರ್ವಹಣೆ ಮಾಡಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಿದೆ. ಆದರೂ, ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಯಂತ್ರಗಳು ಕೆಟ್ಟುಹೋದರೆ ಕೂಡಲೇ ಸರಿಪಡಿಸಲಾಗುತ್ತಿದೆ. ಕಾವಲುಗಾರರನ್ನು ನೇಮಕ ಮಾಡುವುದು ಆಯಾ ಬ್ಯಾಂಕ್‌ಗಳಿಗೆ ಸಂಬಂಧಿಸಿದ್ದು. ಸಮಸ್ಯೆಯನ್ನು ಕೂಡಲೇ ಗಮನಕ್ಕೆ ತಂದು ಸರಿಪಡಿಸಲಾಗುವುದು.

– ಎಂ.ಡಿ.ಯತೀಶ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು