ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಜರಂಗ ದಳ ಮುಖಂಡನ ಮೇಲಿನ ಹಲ್ಲೆ ಪ್ರಕರಣ; ನಗರದಲ್ಲಿ ಬಂದ್ ವಾತಾವರಣ

Last Updated 4 ಡಿಸೆಂಬರ್ 2020, 12:18 IST
ಅಕ್ಷರ ಗಾತ್ರ

ಶಿವಮೊಗ್ಗ: ಲಷ್ಕರ್ ಮೊಹಲ್ಲಾದಲ್ಲಿ ಬಜರಂಗ ದಳದ ಸಹ ಸಂಚಾಲಕ ನಾಗೇಶ್ ಅವರ ಮೇಲಿನ ಹಲ್ಲೆ ನಂತರದ ಅಹಿತಕರ ಬೆಳವಣಿಗೆಗಳ ಪರಿಣಾಮ ಪೊಲೀಸರು ಎಲ್ಲ ಅಂಗಡಿ–ಮುಂಗಟ್ಟುಗಳನ್ನೂ ಮುಚ್ಚಿಸಿದ್ದು, ಶುಕ್ರವಾರ ಇಡೀ ನಗರದಲ್ಲಿ ಬಂದ್ ರೀತಿಯ ವಾತಾವರಣ ನಿರ್ಮಾಣವಾಗಿತ್ತು.

ಅಹಿತಕರ ಘಟನೆಗಳ ನಂತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ದಿನಗಳು ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೆ, ಪೊಲೀಸರು ಶುಕ್ರವಾರ ಬೆಳಿಗ್ಗೆ ನಗರವನ್ನು ಸಂಪೂರ್ಣ ಬಂದ್‌ ಮಾಡಿಸಿದರು. ವಾಣಿಜ್ಯ ಮಳಿಗೆಗಳ ಜತೆ, ಹೋಟೆಲ್‌ಗಳು, ತರಕಾರಿ ಮಾರುಕಟ್ಟೆ, ಪೆಟ್ರೋಲ್‌ ಬಂಕ್‌ಗಳನ್ನೂ ಮುಚ್ಚಿಸಿದರು. ಹಾಲು, ತರಕಾರಿ ಖರೀದಿಸಲೂ ನಾಗರಿಕರು ಪರದಾಡಿದರು. ಹೂ, ಹಣ್ಣುಗಳ ಮಾರಾಟಕ್ಕೂ ಅವಕಾಶ ನೀಡಲಿಲ್ಲ. ಆಸ್ಪತ್ರೆಗಳ ಬಳಿ ರೋಗಿಗಳು, ಅವರ ಬಂಧುಗಳು ಊಟ, ತಿಂಡಿಗೂ ಪರದಾಡಿದರು.

ದೊಡ್ಡಪೇಟೆ, ಕೋಟೆ ಹಾಗೂ ತುಂಗಾನಗರ ಠಾಣೆ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಗುರುವಾರ ರಾತ್ರಿಯಿಂದಲೇ ಕರ್ಫ್ಯೂ ಹಾಕಲಾಗಿದೆ. ವಾಹನಗಳ ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿತ್ತು. ನಿಷೇಧಾಜ್ಞೆ ಕಾರಣ ಕೆಲವು ಮಾರ್ಗಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ನಗರ ಸಂಪರ್ಕಿಸುವ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಯಾವುದೇ ತಡೆ ಇರಲಿಲ್ಲ. ಬಸ್‌, ಆಟೊರಿಕ್ಷಾ ಸೇರಿದಂತೆ ಇತರೆ ವಾಹನಗಳ ಸಂಚಾರ ವಿರಳವಾಗಿತ್ತು. ಹೊರಗಿನಿಂದ ಬಂದ ಪ್ರಯಾಣಿಕರು ಊರುಗಳಿಗೆ ತೆರಳಲು ವಾಹನಗಳಿಗಾಗಿ ಪರದಾಡಿದರು.

ಮನೆಯಿಂದ ಹೊರ ಬಾರದ ಜನ: ಘರ್ಷಣೆಯ ನಂತರ ಬಹುತೇಕ ನಾಗರಿಕರು ಮನೆಯಿಂದ ಹೊರಗೆ ಬರಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ನಗರದ ಹಲವು ಭಾಗಗಳಲ್ಲಿ ಡಿಎಆರ್, ಕೆಎಸ್‌ಆರ್‌ಪಿ ತುಕಡಿ ಸೇರಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT