ಸೋಮವಾರ, ಸೆಪ್ಟೆಂಬರ್ 27, 2021
23 °C
ಸಂಗೀತ ದಿಗ್ಗಜನ ಅರಸಿ ಬಂದ ಗೌರವ

ಬಾಲಕೃಷ್ಣರಾವ್‌ಗೆ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಗಾಯನ ಕ್ಷೇತ್ರಕ್ಕೆ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟ ಸಂಗೀತ ದಿಗ್ಗಜ ಎಚ್‌.ಕೆ. ಬಾಲಕೃಷ್ಣರಾವ್‌ ಸಾಧನೆಯನ್ನು ಸರ್ಕಾರ ಕೊನೆಗೂ ಗುರುತಿಸಿದೆ. ಕರ್ನಾಟಕ ಸಂಗೀತ ವಿಭಾಗದಲ್ಲಿ 2021–22ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಬಾಲಕೃಷ್ಣರಾವ್‌ ಭಾಜನರಾಗಿದ್ದಾರೆ.

ಹೊಸನಗರ ತಾಲ್ಲೂಕಿನ ನಗರ ನಿವಾಸಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ನಿವೃತ್ತ ಹೊಂದಿದ ಎಚ್‌.ಕೆ. ಬಾಲಕೃಷ್ಣರಾವ್‌ ಅವರು ಆರು ದಶಕಗಳಿಂದ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.

1940 ಅಕ್ಟೋಬರ್ 15ರಂದು ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆಯಲ್ಲಿ ಬಾಲಕೃಷ್ಣರಾವ್‌ ಜನಿಸಿದ್ದು, ಅವರ ತಂದೆ ಕೊಲ್ಲಪ್ಪಯ್ಯ, ತಾಯಿ ಕೊಲ್ಲೂರಮ್ಮ. ಕರ್ನಾಟಕ ಸಂಗೀತದಲ್ಲಿ ವಿದ್ವಾನ್ ಪದ್ಮನಾಭ ಭಟ್, ವಿದ್ವಾನ್ ಮುನಿ ವೆಂಕಟಪ್ಪ, ವಿದ್ವಾನ್ ಲಕ್ಷ್ಮಣ ಶಾಸ್ತ್ರಿ, ವಿದ್ವಾನ್ ನಾಗರಾಜ್ ಅವರಿಂದ ಜೂನಿಯರ್, ಸೀನಿಯರ್, ವಿದ್ವಾನ್ ವಿಭಾಗವನ್ನು ಮುಗಿಸಿದರು.

ಬಳಿಕ ಸರ್ಕಾರಿ ಸಂಗೀತ ಶಿಕ್ಷಕರಾಗಿ 37 ವರ್ಷ ಕಾಲ ಸೇವೆ ಸಲ್ಲಿಸಿದ್ದರು.

ಎಚ್.ಕೆ. ಬಾಲಕೃಷ್ಣರಾವ್ ಅವರ ಸಂಗೀತ ಗರಡಿಯಲ್ಲಿ ಬೆಳೆದ ಹಲವಾರು ಸಂಗೀತ ಪ್ರತಿಭೆಗಳು ಇಂದು ರಾಜ್ಯಮಟ್ಟದಲ್ಲಿ ಹೆಸರು ಪಡೆದಿವೆ. ಸುಗಮ ಸಂಗೀತದಲ್ಲಿ ನಗರ ಶ್ರೀನಿವಾಸ ಉಡುಪ, ಗಾಯಕಿ ಅರ್ಚನಾ ಉಡುಪ, ಸಾಣೇಹಳ್ಳಿ ಮಠದ ಶಿವಸಂಚಾರದ ಗಾಯಕಿ ಬಿದನೂರು ಸಹೋದರಿಯರಾದ ಜ್ಯೋತಿ ಮತ್ತು ದಾಕ್ಷಾಯಿಣಿ, ಕಿಬೋರ್ಡ್ ವಾದಕ ಕೃಷ್ಣ ಉಡುಪ, ತಬಲ ವಾದಕ ನಾಗಭೂಷಣ ಉಡುಪ ಸೇರಿ ಹಲವರು ಇವರ ಶಿಷ್ಯರು.

‘ದೀರ್ಘಕಾಲದ ಸಂಗೀತ ಸೇವೆಗೆ ಸಂದ ಗೌರವ ಇದು. ಈಗಲಾದರೂ ಸರ್ಕಾರ ನನ್ನ ಕಲಾಸೇವೆಯನ್ನು ಗುರುತಿಸಿದೆ. ಪ್ರಶಸ್ತಿ ಖುಷಿ ತಂದಿದೆ. ಇಷ್ಟು ವರ್ಷ ಕಲಾಸೇವೆ ಮಾಡಿದ್ದಕ್ಕೆ ಸಾರ್ಥಕ ಭಾವ ಮೂಡಿದೆ’ ಎಂದು ಅವರು ಸಂತಸ ಹಂಚಿಕೊಂಡರು. 

ಹೊಸನಗರದ ಸ್ಪೋರ್ಟ್ಸ್‌ ಅಸೋಸಿಯೇಶನ್‌ನಲ್ಲಿ 10 ವರ್ಷ ಸಂಗೀತ ಶಾಲೆಯನ್ನು ತೆರೆದು ಸಂಗೀತದ ಪಾಠ ಮಾಡಿದರು. ಜೀವನದ ಸಂಧ್ಯಾ ಕಾಲದಲ್ಲಿರುವ ಬಾಲಕೃಷ್ಣ ಅವರಿಗೆ ಪತ್ನಿ ಪ್ರೇಮಲೀಲಾ, ಪುತ್ರರಾದ ಸತೀಶ್, ರಾಜೇಶ್, ಪುತ್ರಿಯರಾದ ವಾಣಿ, ವೀಣಾ ಮತ್ತು ಮೊಮ್ಮಕ್ಕಳು ಇದ್ದಾರೆ.

ತಾಲ್ಲೂಕಿನ ಹಿರಿಯ ತಲೆಮಾರಿನ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲೊಬ್ಬರಾದ ಇವರಿಗೆ ತಡವಾಗಿಯಾದರೂ ಅಕಾಡೆಮಿ ಪ್ರಶಸ್ತಿ  ಸಂದಿರುವುದು ತಾಲ್ಲೂಕಿಗೆ ಸಿಕ್ಕ ಹಿರಿಮೆ ಎನ್ನುವುದು ತಾಲ್ಲೂಕಿನ ಜನ‌‌ರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು