ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಗಾನೆ ಬಳಿ ತಲೆ ಎತ್ತಲಿದೆ ಆಯುಷ್‌ ವಿ.ವಿ

100 ಎಕರೆ ಜಾಗದಲ್ಲಿ ಕಾಮಗಾರಿ ಆರಂಭಿಸಲು ₹ 20 ಕೋಟಿ ಮೀಸಲಿಟ್ಟ ಸರ್ಕಾರ
Last Updated 23 ಡಿಸೆಂಬರ್ 2021, 5:49 IST
ಅಕ್ಷರ ಗಾತ್ರ

ಶಿವಮೊಗ್ಗ: ದಕ್ಷಿಣ ಭಾರತದ ಪ್ರಥಮ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆ ಸರ್ಕಾರ ಆನುಮೋದನೆ ನೀಡಿರುವುದು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ.

ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿಮಾನ ನಿಲ್ದಾಣ, ಅತ್ಯಾಧುನಿಕ ಬಸ್‌ನಿಲ್ದಾಣ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜತೆಗೆ ಆಯುರ್ವೇದ, ಯುನಾನಿ, ಯೋಗ, ಸಿದ್ಧ, ಹೋಮಿಯೋಪಥಿ ಒಳಗೊಂಡ ಆಯುಷ್ ವಿಶ್ವವಿದ್ಯಾಲಯ ಶಿವಮೊಗ್ಗ ಸಮೀಪದ ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 100 ಎಕರೆ ಜಾಗದಲ್ಲಿ ತಲೆ ಎತ್ತಲಿದೆ.

ರಾಜ್ಯ ಸರ್ಕಾರ ಆರಂಭಿಕ ವೆಚ್ಚವಾಗಿ ₹ 20 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆಯುರ್ವೇದ ವೈದ್ಯಪದ್ಧತಿಗಳ ಸಂಶೋಧನೆ, ಸಮನ್ವಯಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಸಂಸದ ರಾಘವೇಂದ್ರ ಅವರು ತಮ್ಮ ತಂದೆಬಿ.ಎಸ್.ಯಡಿಯೂರಪ್ಪ ಅವರೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮನವಿ ಸಲ್ಲಿಸಿದ್ದರು. ಯಡಿಯೂರಪ್ಪ ಅವರು ತಕ್ಷಣ ಹಸಿರು ನಿಶಾನೆ ತೋರಿದ್ದರು. ಸೋಗಾನೆ ವಿಮಾನ ನಿಲ್ದಾಣದ ಸಮೀಪವೇ 100 ಎಕರೆ ಜಾಗವನ್ನೂ ಗುರುತಿಸಲಾಗಿತ್ತು. ಅಷ್ಟರಲ್ಲಿ ಮುಖ್ಯಮಂತ್ರಿ ಬದಲಾವಣೆಯಾದ ಕಾರಣ ವಿಶ್ವವಿದ್ಯಾಲಯ ಸ್ಥಾಪನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಸಹ ಹಲವು ಬಾರಿ ಮನವಿ ಸಲ್ಲಿಸಿದ್ದರು.

ರಾಜ್ಯದಲ್ಲಿ ನಾಲ್ಕು ಸರ್ಕಾರಿ, 71 ಖಾಸಗಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಿವೆ. ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ಕನಿಷ್ಠ 4 ಸಾವಿರ ಆಯುರ್ವೇದ ವೈದ್ಯ ಪದವೀಧರರು ಹೊರಬರುತ್ತಿದ್ದಾರೆ. ಪ್ರಸ್ತುತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಧೀನದಲ್ಲಿ ಅವುಗಳು ಕಾರ್ಯನಿರ್ವಹಿಸುತ್ತಿವೆ. 2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಶಿವಮೊಗ್ಗದಲ್ಲೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿದ್ದರು.

‘ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಕನಿಷ್ಠ 500 ಜನರಿಗೆ ನೇರವಾಗಿ, ಸಾವಿರಾರು ಜನರಿಗೆ ಪರೋಕ್ಷವಾಗಿ ಉದ್ಯೋಗಾವಕಾಶ ದೊರೆಯಲಿವೆ. ವಿಶ್ವವಿದ್ಯಾಲಯ ಔಷಧೀಯ ಉತ್ಪಾದನಾ ಘಟಕವನ್ನು ಆರಂಭಿಸಿದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿಸಿ
ಕೊಡಬಹುದು. ಗ್ರಾಮೀಣ ಜನತೆಗೆ ಉತ್ತಮ ಗುಣಮಟ್ಟದ ಔಷಧೀಯ ಸಸ್ಯಗಳನ್ನು ಬೆಳೆಸಲು ತರಬೇತಿ ನೀಡಿ, ಸ್ಥಳೀಯವಾಗಿ ಮಾರುಕಟ್ಟೆಯನ್ನು ಒದಗಿಸಿ, ತನ್ಮೂಲಕ ರೈತರನ್ನೂ ಸಬಲೀಕರಣ ಮಾಡಬಹುದು. ರಾಜ್ಯದ ವಿದ್ಯಾರ್ಥಿಗಳು ಸಂಶೋಧನಾರ್ಥಿ
ಗಳಾಗಿ ಅನ್ಯ ರಾಜ್ಯಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ದೇಶವಿದೇಶಗಳ ವಿದ್ಯಾರ್ಥಿಗಳು ಜಿಲ್ಲೆಗೆ ಬರುತ್ತಾರೆ’ ಎನ್ನುತ್ತಾರೆ ಸಂಸದ ಬಿ.ವೈ. ರಾಘವೇಂದ್ರ.

ಶಿವಮೊಗ್ಗದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಮೂಲಕ ರಾಜ್ಯದ ಎಲ್ಲ ಆಯುಷ್‌ ಕಾಲೇಜುಗಳ ಆಡಳಿತ ವ್ಯವಸ್ಥೆ ಶಿವಮೊಗ್ಗಕ್ಕೆ ಸ್ಥಳಾಂತರವಾಗಲಿವೆ. ಮಲೆನಾಡು ಪುರಾತನ, ಸಾಂಪ್ರದಾಯಿಕ ಚಿಕಿತ್ಸೆಯ ಸಂಶೋಧನೆಗಳಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಸಲಿದೆ ಎನ್ನುವುದು ಆಯುರ್ವೇದ ಪಂಡಿತರ ಅಭಿಮತ.

..............

75

ರಾಜ್ಯದ ಆಯುರ್ವೇದ ವಿಶ್ವವಿದ್ಯಾಲಯಗಳು

4

ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಗಳು

5

ಯುನಾನಿ ಕೇಂದ್ರಗಳು

14 ಹೋಮಿಯೋಪಥಿ ಮಹಾವಿದ್ಯಾಲಯಗಳು

100 ಎಕರೆ

ವಿಶ್ವವಿದ್ಯಾಲಯಕ್ಕೆ ಮೀಸಲಾದ ಜಾಗ

₹ 20 ಕೋಟಿ

ಸರ್ಕಾರ ನೀಡಿದ ಮೊದಲ ಕಂತು

......

ಶಿವಮೊಗ್ಗ ಸೂಕ್ತ ಸ್ಥಳ

ಶಿವಮೊಗ್ಗ ಜಿಲ್ಲೆ ಪರಂಪರಾಗತ ವೈದ್ಯಪದ್ಧತಿಗಳು, ಆಯುರ್ವೇದ ವೈದ್ಯವಿಜ್ಞಾನದ ನಿರಂತರ ಬಳಕೆಯ ತಾಣ. ಆಗುಂಬೆ ಮಳೆಕಾಡಿನಲ್ಲಿ ಬೆಳೆಯುವ ವಿವಿಧ ಜಾತಿಯ ಔಷಧ ಸಸ್ಯಗಳು, ಪಶ್ಚಿಮಘಟ್ಟದ ವನೌಷಧಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಕಾರಣ ಜಿಲ್ಲೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತ ಸ್ಥಳ ಎನ್ನುವುದನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈಗಿನ ಸರ್ಕಾರಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮನವರಿಕೆ ಮಾಡಿಕೊಟ್ಟ ಕಾರಣ ಒಪ್ಪಿಗೆ ಪಡೆಯಲು ಅನುಕೂಲವಾಯಿತು.

–ಬಿ.ವೈ. ರಾಘವೇಂದ್ರ, ಸಂಸದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT