ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಹದಗೆಟ್ಟ ಹುಲಿಕಲ್ ಘಾಟ್ ರಸ್ತೆ

ಎಲ್ಲೆಲ್ಲೂ ಗುಂಡಿಗಳು; ಸಂಚಾರ ಸಂಕಟ
Last Updated 4 ಫೆಬ್ರುವರಿ 2023, 6:22 IST
ಅಕ್ಷರ ಗಾತ್ರ

ಹೊಸನಗರ: ಭಾರಿ ಪ್ರಮಾಣದಲ್ಲಿ ಬಿದ್ದ ಮಳೆ ಪರಿಣಾಮ ತಾಲ್ಲೂಕಿನ ಹುಲಿಕಲ್ ಘಾಟ್ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ.

ಭಾರಿ ಗಾತ್ರದ ವಾಹನಗಳ ಓಡಾಟದಿಂದ ಘಾಟ್ ರಸ್ತೆ ತುಂಬೆಲ್ಲ ಹೊಂಡಗುಂಡಿಗಳು ಬಿದ್ದಿದ್ದು, ವಾಹನ ಸಂಚಾರವೇ ಸಿಂಹ ಸ್ವಪ್ನವಾಗಿದೆ.

ಮಳೆಗಾಲದ ದಿನಗಳಲ್ಲಿ ಹುಲಿಕಲ್ ಘಾಟ್ ಸುತ್ತಮುತ್ತ ಹೆಚ್ಚು ಮಳೆ ಬೀಳುತ್ತದೆ. ಇದರಿಂದ ಸಹಜವಾಗಿಯೇ ರಸ್ತೆ ಕೊಚ್ಚಿಕೊಂಡು ಹೋಗುತ್ತದೆ. ಈ ವರ್ಷ ಮಳೆಗಾಲದ ಪ್ರತಿದಿನ 100ರಿಂದ 210 ಮೀ.ಮೀ.ವರೆಗೂ ಮಳೆ ಸುರಿದಿದ್ದು, ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.

ಮಳೆಯಿಂದಾಗಿ ಧರೆ ಕುಸಿದಿದ್ದು, ರಸ್ತೆಯ ಇಕ್ಕೆಲಗಳ ಚರಂಡಿಯಲ್ಲಿ ಆಗ ಬಿದ್ದ ಆಳೆತ್ತರ ಮಣ್ಣು ಹಾಗೇಯೇ ಇದೆ.

ಭಾರಿ ಗಾತ್ರದ ವಾಹನ ಓಡಾಟ: ಘಾಟ್‌ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟ ಸಾಮಾನ್ಯವಾಗಿದೆ. ಹೆಚ್ಚು ಚಕ್ರಗಳ ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿದೆ. ಶಿರಾಡಿ ಮತ್ತು ಚಾರ್ಮಾಡಿ, ಆಗುಂಬೆ ಘಾಟ್ ರಸ್ತೆ ದುರಸ್ತಿ ನಡೆಯುವ ವೇಳೆ ಈ ಮಾರ್ಗದಲ್ಲಿಯೇ ವಾಹನ ಸಂಚಾರ ಅವಕಾಶ ಕಲ್ಪಿಸಲಾಗುತ್ತಿದೆ. ಆಗ ಸಹಜವಾಗಿಯೇ ಹುಲಿಕಲ್ ರಸ್ತೆಯ ಮೂಲಕ ಭಾರಿ ವಾಹನಗಳ ಸಂಚಾರ ಹೆಚ್ಚಿರುತ್ತವೆ. ಆ ಘಾಟ್‌ಗಳ ರಸ್ತೆಗಳು ಸುಗಮ ಸಂಚಾರಕ್ಕೆ ಸಿದ್ಧವಾದರೂ ಭಾರಿ ಗಾತ್ರದ ವಾಹನಗಳು ಈ ಮಾರ್ಗದಲ್ಲೇ ಓಡಾಡುತ್ತಿವೆ.

ಮಂಗಳೂರು– ಬೆಂಗಳೂರು, ಮಂಗಳೂರು– ಹುಬ್ಬಳ್ಳಿ, ಮಂಗಳೂರು– ತಮಿಳುನಾಡು ಸಂಪರ್ಕದ ಎಲ್ಲ ವಾಹನ
ಗಳು ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ.

ಗಮನ ನೀಡದ ಅಧಿಕಾರಿಗಳು: ಘಾಟ್ ರಸ್ತೆಯಲ್ಲಿ ಕಿರಿದಾದ ತಿರುವುಗಳಿವೆ. ಅಲ್ಲಿ ಹೊಂಡ ಬಿದ್ದಿವೆ. ಹಿಡಿಶಾಪ ಹಾಕುತ್ತ ಓಡಾಡುವ ಪ್ರಯಾಣಿಕರು ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆಯಲ್ಲಿನ ಗುಂಡಿಗಳಿಂದ ದಾರಿ ಮಧ್ಯೆಯೇ ವಾಹನಗಳು ಕೆಟ್ಟು ನಿಲ್ಲುತ್ತಿದ್ದು, ಇದರಿಂದ ಘಾಟ್ ಸಂಚಾರ ಬಂದ್ ಆಗುತ್ತಿದೆ. ದಿನದಲ್ಲಿ ಎರಡು ಮೂರು ಕಡೆಗಳಲ್ಲಿ ವಾಹನ ಸಿಲುಕಿಕೊಂಡು ವಾಹನ ಸಂಚಾರ ನಿಲುಗಡೆಯಾಗುವುದು ಸಾಮಾನ್ಯವಾಗಿದೆ.

ಘಾಟ್‌ನಲ್ಲಿ ಮಂಜು: ಘಾಟ್ ಪ್ರದೇಶದಲ್ಲಿ ಆಗಾಗ ಭಾರಿ ಪ್ರಮಾಣದಲ್ಲಿ ಮಂಜು ಮುಸುಕಿದ ವಾತಾವರಣ ಮನೆ ಮಾಡುತ್ತದೆ. ಬೆಳಿಗ್ಗೆ ಮತ್ತು ಸಂಜೆ ವಾಹನ ಸಾಗಾಟಕ್ಕೆ ಮಂಜು ತೀರಾ ಅಡ್ಡಿ ಆಗುತ್ತದೆ. ವಾಹನಗಳು ಹೆಡ್ ಲೈಟ್ ಹಾಕಿಕೊಂಡು ಸಂಚರಿಸಿದರೂ ದಾರಿ ಕಾಣುವುದಿಲ್ಲ.

ಇದರಿಂದ ವಾಹನಗಳು ಬದಿಗೆ ಸರಿದು ಅಪಘಾತ ಪ್ರಕರಣ ಹೆಚ್ಚುತ್ತಿವೆ. ಪರಸ್ಪರ ಡಿಕ್ಕಿ ಹೊಡೆದುಕೊಳ್ಳುತ್ತಿವೆ. ವಾಹನ ದಟ್ಟಣೆ ಹೆಚ್ಚಿರುವ ದಿನಗಳಲ್ಲಿ ಅಪಘಾತ ಪ್ರಕರಣ ಸಾಮಾನ್ಯವಾಗಿದೆ.

ಕಿತ್ತುಹೋದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡಬೇಕಿದೆ. ಇಲಾಖೆಯಿಂದ ತೇಪೆ ಹಚ್ಚುವ ಕಾರ್ಯವೂ ನಡೆಯುತ್ತಿಲ್ಲ. ಹೊಸ ಡಾಂಬರ್ ರಸ್ತೆ ಕನಸಿನ ಮಾತಾಗಿದೆ.

-ಸುರೇಶ, ಲಾರಿ ಚಾಲಕ, ಹೊಸನಗರ

ಘಾಟ್ ರಸ್ತೆ ದುರಸ್ತಿಗೆ ಗ್ರಾಮಸ್ಥರು ಮತ್ತು ಪ್ರಯಾಣಿಕರು ಪ್ರತಿಭಟನೆ ದಾರಿ ಹಿಡಿಯುವ ಅನಿವಾರ್ಯತೆ ಹೆಚ್ಚಿದೆ. ಗ್ರಾಮಸ್ಥರ ಸಹನೆಗೂ ಒಂದು ಮಿತಿ ಇದೆ.

-ಉದಯ್‌ಗೌಡ, ಮಾಸ್ತಿಕಟ್ಟೆ

ಶೀಘ್ರ ಕಾಮಗಾರಿ ಆರಂಭವಾಗಲಿದೆ. ₹ 10 ಕೋಟಿ ಅನುದಾನದಲ್ಲಿ ಘಾಟ್ ರಸ್ತೆಯ 2.7 ಕಿ.ಮೀ ದೂರದ ಕಾಂಕ್ರೀಟ್ ರಸ್ತೆ, ಚರಂಡಿ.ವಾಲ್ ನಿರ್ಮಾಣ ಕಾಮಗಾರಿ ನಡೆಯಲಿದೆ.

-ರಾಮಚಂದ್ರಪ್ಪ, ಎಇಇ, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT